ದಯಾ ಮರಣ ಕೇಳಿದ್ದ ಮಹಿಳೆಗೆ ತಾತ್ಕಾಲಿಕ ನೆರವು: ಕ್ಷಮೆ ಯಾಚಿಸಿದ ಮಹಿಳೆ
Tumkur news
ತುಮಕೂರು: ಜನತಾ ದರ್ಶನದಲ್ಲಿ ಸಚಿವ ಜಿ.ಪರಮೇಶ್ವರ್ ನೀಡಿರುವ ಭರವಸೆಯನ್ನು ಈಡೇರಿಸಿಲ್ಲ ಎಂದು ಆತ್ಮಹತ್ಯೆ ಬೆದರಿಕೆ ಹಾಕಿದ್ದ ಮಹಿಳೆಗೆ ತಾತ್ಕಾಲಿಕ ನೆರವು ದೊರೆತಿದ್ದು, ತನ್ನ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿರಾ ನಿವಾಸಿ ರಾಜಿಯಾ ಅಸ್ಲಾಂ ಪಾಷಾ, ಮೂರು ತಿಂಗಳ ಮನೆ ಬಾಡಿಗೆ ಪಾವತಿಸಲು ನನ್ನ ಬ್ಯಾಂಕ್ ಖಾತೆಗೆ ಗೃಹ ಸಚಿವರಿಂದ 30 ಸಾವಿರ ರೂ. ಸಂದಾಯವಾಗಿದೆ. ಅಧಿಕಾರಿಗಳು ಖುದ್ದಾಗಿ ಬಂದು ನನಗೆ ನಿಗದಿಪಡಿಸಿದ ನಿವೇಶನವನ್ನು ತೋರಿಸಿ ಶೆಡ್ ಹಾಕಿಕೊಳ್ಳಲು ಅನುಮತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ತಾನು ನೀಡಿದ್ದ ಹೇಳಿಕೆಗಳಿಗಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಮಹಿಳೆ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಏಪ್ರಿಲ್ 8ರಂದು ತುಮಕೂರಿನಲ್ಲಿ ನಡೆದ ಜನತಾ ದರ್ಶನದಲ್ಲಿ ಸದರಿ ಮಹಿಳೆ ನಿವೇಶನ ನೀಡುವಂತೆ ಒತ್ತಾಯಿಸಿ ದಯಾ ಮರಣ ಕೋರಿದ್ದರು. ಆಗ ಸಚಿವ ಜಿ.ಪರಮೇಶ್ವರ್ ನೆರವಿನ ಭರವಸೆ ನೀಡಿದ್ದರು. ಆದರೆ ಭರವಸೆ ಈಡೇರಿರಲಿಲ್ಲ. ಹೀಗಾಗಿ ಮೇ 20ರಂದು ತುಮಕೂರಿಗೆ ಸಿಎಂ ಸಿದ್ದರಾಮಯ್ಯ ಬರುವ ದಿನ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಾಗೂ ತನ್ನ ಸಾವಿಗೆ ಸಚಿವ ಜಿ.ಪರಮೇಶ್ವರ್, ಶಾಸಕ ಟಿ.ಬಿ ಜಯಚಂದ್ರ ಕಾರಣ ಎಂದು ಮಹಿಳೆ ಬೆದರಿಕೆ ಹಾಕಿದ್ದರು.
