- ‘ಕೈ’ ಹಿಡಿಯುತ್ತಾ ವಿಮಾನ ನಿಲ್ದಾಣ?
ಬೆಂಗಳೂರಿನ ಪರ್ಯಾಯ ವಿಮಾನ ನಿಲ್ದಾಣಕ್ಕೆ ಮೂರು ಜಿಲ್ಲೆ ಪೈಪೋಟಿ: ಐದಾರು ತಿಂಗಳಲ್ಲಿ ಸರ್ಕಾರದ ಅಂತಿಮ ನಿರ್ಧಾರ; ಸಿದ್ದು ಸರ್ಕಾರಕ್ಕೆ ಮತ್ತೊಂದು ಗರಿಮೆ
-ಅಶೋಕ್ ಆರ್.ಪಿ ತುಮಕೂರು:
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಿಮಾನಯಾನ ದಟ್ಟಣೆಯನ್ನು ನಿರ್ವಹಿಸಲು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಕರ್ನಾಟಕ ಸರ್ಕಾರವು ಸಿದ್ಧತೆ ನಡೆಸುತ್ತಿದ್ದು, ಬೆಂಗಳೂರು ಸುತ್ತಮುತ್ತಲಿನ ಮೂರು ಜಿಲ್ಲೆಗಳ ಪೈಕಿ ವಿಮಾನ ನಿಲ್ದಾಣ ಎಲ್ಲಿ ಸ್ಥಾಪನೆಯಾಗಬಹುದು ಎಂಬ ಕುತೂಹಲ ಉಂಟಾಗಿದೆ.
ಸರ್ಕಾರವು ಮುಖ್ಯವಾಗಿ ಬೆಂಗಳೂರಿನ ದಕ್ಷಿಣ ಮತ್ತು ಪಶ್ಚಿಮ ಭಾಗಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಸ್ಥಳಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ. ಈ ಪೈಕಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ರಸ್ತೆಯ ಸೋಮನಹಳ್ಳಿ ಮತ್ತು ಚೂಡಹಳ್ಳಿ ಪ್ರದೇಶಗಳು ಪ್ರಬಲ ಪೈಪೋಟಿಯಲ್ಲಿದೆ. ತಮಿಳುನಾಡಿನ ಹೊಸೂರಿನಲ್ಲಿ ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಪೈಪೋಟಿ ನೀಡಲು ಇದು ಸೂಕ್ತ ಎಂದು ಹೇಳಲಾಗುತ್ತಿದೆ. ಎರಡನೇ ಸ್ಥಾನದಲ್ಲಿ ಬಿಡದಿ – ಹಾರೋಹಳ್ಳಿ ಪ್ರದೇಶವಿದೆ. ಮೂರನೇ ಸ್ಥಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ – ಕುಣಿಗಲ್ ರಸ್ತೆ ಮಧ್ಯದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಪೂರಕ ವಾತವರಣವಿದೆ. ತುಮಕೂರು ರಸ್ತೆಯ ಸಮೀಪವಿರುವ ಈ ಪ್ರದೇಶವು ಪಶ್ಚಿಮ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂಬ ಉದ್ದೇಶವಿದೆ. ಇದರ ಜೊತೆಗೆ ತುಮಕೂರು ಜಿಲ್ಲೆಯ ತುಮಕೂರು- ಬೆಂಗಳೂರು ನಡುವೆ ನೆಲಮಂಗಲ ಸಮೀಪ, ಶಿರಾ-ತುಮಕೂರು ನಡುವೆ ವಸಂತ ನರಸಾಪುರ ಕೈಗಾರಿಕ ಪ್ರದೇಶದ ಬಳಿ ನಿರ್ಮಿಸುವ ಕಾರ್ಯಸಾಧ್ಯತೆಗಳು ಪರಿಶೀಲನೆಯಲ್ಲಿದೆ.
ಮತ್ತೊಂದು ವಿಮಾನ ನಿಲ್ದಾಣ ಏಕೆ?:
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು 2030-32ರ ವೇಳೆಗೆ ತನ್ನ ಗರಿಷ್ಠ ಪ್ರಯಾಣಿಕ ಸಾಮರ್ಥ್ಯವನ್ನು ತಲುಪುವ ಅಂದಾಜಿದೆ. ಆದ್ದರಿಂದ ಎರಡನೇ ವಿಮಾನ ನಿಲ್ದಾಣದ ಅಗತ್ಯವಿದೆ ಎನ್ನುವುದು ಸರ್ಕಾರದ ನಿರ್ಧಾರ. ಈ ಹಿನ್ನೆಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಈ ಯೋಜನೆಯ ಕಾರ್ಯಸಾಧ್ಯತೆಯ ವರದಿ (Feasibility Report) ಸಿದ್ಧಪಡಿಸಲು ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಮುಂದಿನ ಐದಾರು ತಿಂಗಳಲ್ಲಿ ಒಂದು ನಿರ್ದಿಷ್ಟ ಸ್ಥಳವನ್ನು ಸರ್ಕಾರ ಅಧಿಕೃತವಾಗಿ ಅಂತಿಮಗೊಳಿಸುವ ಸಾಧ್ಯತೆಯಿದೆ. ಇದು ಕಾರ್ಯಸಾಧುವಾಸಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮತ್ತೊಂದು ಗರಿಮೆಯಾಗಲಿದೆ.
ರಾಜಕೀಯವೇ ಅಥವಾ ಕಾರ್ಯಸಾಧ್ಯವೇ?:
ಕರ್ನಾಟಕದ ಶೈಕ್ಷಣಿಕ ಮತ್ತು ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿರುವ ತುಮಕೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಅವಶ್ಯಕತೆ ಇದೆಯೇ ಹಾಗೂ ಇದು ಕೇವಲ ರಾಜಕೀಯ ಆಶಯವೇ ಅಥವಾ ತಾಂತ್ರಿಕವಾಗಿ ಸಾಧ್ಯವೇ ಎಂಬುದು ಹಲವರ ಪ್ರಶ್ನೆಯೂ ಆಗಿದೆ.
ಪ್ರಸ್ತುತ ಸನ್ನಿವೇಶ ಮತ್ತು ಭೌಗೋಳಿಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನೋಡುವುದಾದರೇ, ತುಮಕೂರು ನಗರವು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಸುಮಾರು 80-90 ಕಿ.ಮೀ ದೂರದಲ್ಲಿದೆ. ಕೇಂದ್ರ ಸರ್ಕಾರದ ‘ಉಡಾನ್’ (UDAN) ಯೋಜನೆಯಡಿ ಸಣ್ಣ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸುವ ಉದ್ದೇಶವಿದ್ದರೂ, ಕೆಲವು ತಾಂತ್ರಿಕ ಅಡೆತಡೆಗಳು ಎದುರಾಗಲಿವೆ.
ವಿಮಾನ ಸಂಸ್ಥೆಗಳು ಸ್ಪಂದನೆ ಕಷ್ಟ:
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹತ್ತಿರವಿರುವುದರಿಂದ ವಿಮಾನಯಾನ ಸಂಸ್ಥೆಗಳು ತುಮಕೂರಿನಿಂದ ವಿಮಾನಗಳನ್ನು ಓಡಿಸಲು ಆಸಕ್ತಿ ತೋರುವುದು ಕಷ್ಟ. ಜೊತೆಗೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮೊದಲ ಸವಾಲಾಗಿದೆ.
ತುಮಕೂರಿನಲ್ಲಿ ಸದ್ಯಕ್ಕೆ ದೊಡ್ಡ ಮಟ್ಟದ ವಾಣಿಜ್ಯ ವಿಮಾನ ನಿಲ್ದಾಣ ಸ್ಥಾಪನೆಯ ಸಾಧ್ಯತೆ ಕಡಿಮೆ ಇದ್ದರೂ, ವಸಂತನರಸಾಪುರ ಅಥವಾ ಎಚ್.ಎ.ಎಲ್ ಘಟಕದ ಬಳಿ ಸಣ್ಣ ಮಟ್ಟದ ‘ಏರ್‌ಸ್ಟ್ರಿಪ್’ ಅಥವಾ ‘ಕಾರ್ಗೋ ಟರ್ಮಿನಲ್’ ಸ್ಥಾಪಿಸುವುದು ಜಿಲ್ಲೆಯ ಕೈಗಾರಿಕಾ ಕ್ರಾಂತಿಗೆ ಹೊಸ ವೇಗ ನೀಡಬಲ್ಲದು. ಇದು ಕೇವಲ ಪ್ರಯಾಣಕ್ಕಾಗಿ ಅಲ್ಲದೆ, ಜಾಗತಿಕ ಮಾರುಕಟ್ಟೆಯೊಂದಿಗೆ ತುಮಕೂರನ್ನು ಜೋಡಿಸಲು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿಯೂ ಸರ್ಕಾರದ ಚಿಂತಿಸಬೇಕಿದೆ.
ಪರ್ಯಾಯ ಅವಕಾಶಗಳಿವೆ:
ಒಂದು ವೇಳೆ ತುಮಕೂರಿನಲ್ಲಿ ಸರ್ಕಾರದ ಉದ್ದೇಶಿತ ಬೆಂಗಳೂರಿಗೆ ಪರ್ಯಾಯ ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯವಾಗದಿದ್ದರೂ ಅಂಥದೇ ಹಲವು ಪರ್ಯಾಯ ಮಾರ್ಯಗಳಿವೆ. ಸಂಪೂರ್ಣ ಪ್ರಮಾಣದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬದಲಿಗೆ ತುಮಕೂರಿನಲ್ಲಿ ಈ ಕೆಳಕಂಡ ಅವಕಾಶವನ್ನು ಸೃಷ್ಟಿಸಬಹುದು.
* ಹವ್ಯಾಸಿ ವಿಮಾನ ನಿಲ್ದಾಣ (Airstrip): ಕೈಗಾರಿಕೋದ್ಯಮಿಗಳ ಖಾಸಗಿ ಜೆಟ್‌ಗಳು ಮತ್ತು ಸಣ್ಣ 19 ಸೀಟರ್ ವಿಮಾನಗಳಿಗಾಗಿ ಸಣ್ಣ ರನ್‌ವೇ ನಿರ್ಮಿಸುವುದು.
* ಹೆಲಿಪೋರ್ಟ್ (Heliport): ಬೆಂಗಳೂರು ವಿಮಾನ ನಿಲ್ದಾಣಕ್ಕೆ ವೇಗವಾಗಿ ತಲುಪಲು ‘ಏರ್ ಟ್ಯಾಕ್ಸಿ’ ಸೇವೆಗಾಗಿ ಹೆಲಿಪೋರ್ಟ್‌ಗಳನ್ನು ಅಭಿವೃದ್ಧಿಪಡಿಸುವುದು.
* ಸರಕು ಸಾಗಣೆ (Cargo Hub): ತುಮಕೂರಿನ ಕೈಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡಲು ಕೇವಲ ‘ಕಾರ್ಗೋ’ ವಿಮಾನ ನಿಲ್ದಾಣವಾಗಿ ಅಭಿವೃದ್ಧಿಪಡಿಸುವುದು ಹೆಚ್ಚು ಲಾಭದಾಯಕ.
ವಿಮಾನ ನಿಲ್ದಾಣಕ್ಕೆ ತಾಂತ್ರಿಕ ಅಡೆತಡೆಗಳು:
* ದೂರದ ಮಿತಿ: ಸಾಮಾನ್ಯವಾಗಿ ಎರಡು ವಿಮಾನ ನಿಲ್ದಾಣಗಳ ನಡುವೆ ಕನಿಷ್ಠ 150 ಕಿ.ಮೀ ಅಂತರವಿರಬೇಕು ಎಂಬ ನಿಯಮವಿದೆ. ತುಮಕೂರು ಬೆಂಗಳೂರಿಗೆ ತೀರಾ ಹತ್ತಿರವಿರುವುದು ದೊಡ್ಡ ಸವಾಲು.
* ಪ್ರಯಾಣದ ಸಮಯ: ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ 48 (NH-48) ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಮೂಲಕ 1.5 ರಿಂದ 2 ಗಂಟೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ ತಲುಪಬಹುದು.
ವಿಮಾನ ನಿಲ್ದಾಣಕ್ಕೆ ಪೂರಕ ಅಂಶಗಳು:
* ತುಮಕೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೇವಲ ಪ್ರಯಾಣಿಕರ ಸಂಖ್ಯೆಯಷ್ಟೇ ಅಲ್ಲದೆ, ಕೈಗಾರಿಕಾ ಬೆಳವಣಿಗೆ ಮುಖ್ಯ ಕಾರಣವಾಗಬಹುದು.
* ತುಮಕೂರು ಕೈಗಾರಿಕಾ ಕಾರಿಡಾರ್ (CBIC): ವಸಂತನರಸಾಪುರ ಬಳಿ ಇರುವ ದಕ್ಷಿಣ ಭಾರತದ ಅತಿದೊಡ್ಡ ಕೈಗಾರಿಕಾ ವಲಯಗಳಲ್ಲಿ ಇದು ಒಂದು. ಜಪಾನ್ ಮತ್ತು ಇತರ ವಿದೇಶಿ ಹೂಡಿಕೆದಾರರಿಗೆ ನೇರ ಸಂಪರ್ಕ ಬೇಕಿದೆ.
* ಎಚ್.ಎ.ಎಲ್ ಹೆಲಿಕಾಪ್ಟರ್ ಕಾರ್ಖಾನೆ: ಗುಬ್ಬಿ ತಾಲ್ಲೂಕಿನ ಬಿದರಹಳ್ಳಿಯಲ್ಲಿ ಏಷ್ಯಾದಲ್ಲೇ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕವಿದೆ. ಇಲ್ಲಿ ಈಗಾಗಲೇ ರನ್‌ವೇ ಸೌಲಭ್ಯವಿದ್ದು, ಇದನ್ನು ನಾಗರಿಕ ವಿಮಾನಯಾನಕ್ಕೆ (Civilian Use) ಬಳಸಿಕೊಳ್ಳುವ ಸಾಧ್ಯತೆಗಳಿವೆ.
* ಶೈಕ್ಷಣಿಕ ಹಬ್: ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳಿದ್ದು, ಹೊರರಾಜ್ಯದ ವಿದ್ಯಾರ್ಥಿಗಳ ಓಡಾಟ ಹೆಚ್ಚಿದೆ.
ತಾಂತ್ರಿಕ ಮುಖ್ಯಾಂಶಗಳು
* ಅಗತ್ಯವಿರುವ ಭೂಮಿ ಕನಿಷ್ಠ 400 ರಿಂದ 600 ಎಕರೆ (ಸಣ್ಣ ನಿಲ್ದಾಣಕ್ಕೆ)
* ಅಂದಾಜು ವೆಚ್ಚ ₹300 ರಿಂದ ₹500 ಕೋಟಿ (ಆರಂಭಿಕ ಹಂತ)
* ಪ್ರಯಾಣಿಕರ ಸಾಮರ್ಥ್ಯ ವಾರ್ಷಿಕ ಸುಮಾರು 2-3 ಲಕ್ಷ ಪ್ರಯಾಣಿಕರ ನಿರೀಕ್ಷೆ.
* ಸಮೀಪದ ವಿಮಾನ ನಿಲ್ದಾಣ ಬೆಂಗಳೂರು (90 ಕಿ.ಮೀ), ಶಿವಮೊಗ್ಗ (170 ಕಿ.ಮೀ)
ಯೋಜನೆಯ ಮುಖ್ಯಾಂಶಗಳು:
ವಿಸ್ತೀರ್ಣ: ಸುಮಾರು 4,500 ರಿಂದ 5,000 ಎಕರೆ ಭೂಮಿಯನ್ನು ಈ ಯೋಜನೆಗಾಗಿ ಬಳಸುವ ಗುರಿ ಇದೆ.
ಸಮಯ: ಈ ಹೊಸ ವಿಮಾನ ನಿಲ್ದಾಣವು 2033ರ ವೇಳೆಗೆ ಕಾರ್ಯನಿರ್ವಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಕೋಟ್: ತುಮಕೂರು ಜಿಲ್ಲೆಯ ವಸಂತನರಸಾಪುರ, ಶಿರಾ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಪರಿಶೀಲನೆ ಹಂತದಲ್ಲಿದೆ.
– ಮುರುಳೀಧರ ಹಾಲಪ್ಪ, ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ತುಮಕೂರು.
ಚಿತ್ರ: ಸಾಂದರ್ಭಿಕ ಚಿತ್ರ


