ಅಶೋಕ್ ಆರ್.ಪಿ ತುಮಕೂರು: ಜಿಲ್ಲೆಯ ಕೇಂದ್ರಬಿಂದುವಾಗಿರುವ ನಗರದ ಡಿ. ದೇವರಾಜ ಅರಸು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಈಗ ಕಳ್ಳರ ಹಾಟ್ಸ್ಪಾಟ್ ಆಗಿ ಬದಲಾಗುತ್ತಿದೆ. ಪ್ರತಿದಿನ ಸಾವಿರಾರು ಪ್ರಯಾಣಿಕರು ಓಡಾಡುವ ಈ ನಿಲ್ದಾಣದಲ್ಲಿ ಕಿಡಿಗೇಡಿಗಳು ಸಾರ್ವಜನಿಕರ ಬೆಲೆಬಾಳುವ ವಸ್ತುಗಳಿಗೆ ಕನ್ನ ಹಾಕುತ್ತಿದ್ದಾರೆ.
ಕೆ.ಎಸ್.ಆರ್.ಟಿ.ಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಬೆಂಗಳೂರು, ಶಿವಮೊಗ್ಗ, ಪಾವಗಡ ಮತ್ತು ಉತ್ತರ ಕರ್ನಾಟಕದ ಕಡೆಗೆ ಹೋಗುವ ಬಸ್ಗಳಿಗಾಗಿ ಕಾಯುವ ಪ್ರಯಾಣಿಕರೇ ಇವರ ಟಾರ್ಗೆಟ್ ಆಗಿದೆ. ಇಲ್ಲಿನ ವಿಪರೀತ ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಳ್ಳುವ ಕಳ್ಳರು ಪ್ರಯಾಣಿಕರ ಮೊಬೈಲ್ ಮತ್ತು ಪರ್ಸ್, ಲಗೇಜು ಬ್ಯಾಗುಗಳನ್ನೇ ಕದಿಯುತ್ತಿದ್ದಾರೆ.
ಕಳ್ಳರ ಗ್ಯಾಂಗ್ ಕಾರ್ಯಾಚರಣೆ: ಬಸ್ ನಿಲ್ದಾಣದಲ್ಲಿ ಕಳ್ಳರು ಒಬ್ಬಂಟಿಯಾಗಿರುವುದಿಲ್ಲ, ಗುಂಪುಗಳಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಬಾಧಿತರ ಗಮನಕ್ಕೆ ಬಂದಿದೆ. ಆದರೆ ಪತ್ತೆ ಕಾರ್ಯ ಸಾಧ್ಯವಾಗುತ್ತಿಲ್ಲ. ಬಸ್ ಹತ್ತುವ ಸಮಯದಲ್ಲಿ ಸೃಷ್ಟಿಯಾಗುವ ನೂಕುನುಗ್ಗಲನ್ನು ಬಳಸಿಕೊಂಡು ಕಳ್ಳರು ಪ್ರಯಾಣಿಕರ ಜೇಬಿಗೆ ಕನ್ನ ಹಾಕುತ್ತಿದ್ದಾರೆ. ಪ್ರಯಾಣಿಕರು ಬಸ್ ಹತ್ತುವಾಗ ಪ್ರಯಾಣಿಕರ ಬಟ್ಟೆಯ ಮೇಲೆ ಕೊಳೆ ಅಥವಾ ಐಸ್ಕ್ರೀಂ ಹಾಕಿದಂತೆ ನಟಿಸಿ, ಅವರು ಅದನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ಬ್ಯಾಗ್, ಮೊಬೈಲು, ಹಣ ಎಗರಿಸುವುದನ್ನು ಮಾಡುತ್ತಿದ್ದಾರೆ.
ನಿದ್ದೆಯ ಸಮಯದಲ್ಲಿ ಲಗೇಜು ಮಾಯ: ದೂರದೂರಿನ ಪ್ರಯಾಣಿಕರು ರಾತ್ರಿ ವೇಳೆ ನಿಲ್ದಾಣದಲ್ಲಿ ನಿದ್ದೆಗೆ ಜಾರಿದಾಗ ಅವರ ಪಕ್ಕದಲ್ಲಿರುವ ಲಗೇಜ್ಗಳನ್ನು ಮಾಯ ಮಾಡುವುದು ಕೂಡ ಆಗುತ್ತಿದೆ. ಇದರ ಜೊತೆಗೆ ಬಸ್’ನಲ್ಲಿ ಲಗೇಜು ಕ್ಯಾಬಿನ್’ನಲ್ಲಿ ಇರಿಸಿದ್ದ ಬ್ಯಾಗುಗಳನ್ನು ಕೂಡ ಎಗರಿಸುತ್ತಿದ್ದಾರೆ. ಶನಿವಾರ ಮಹಿಳೆಯೊಬ್ಬರು ಬಸ್ ಹತ್ತುವಾಗ 8 ಸಾವಿರ ರೂ.ಗಳನ್ನು ಕಳೆದುಕೊಂಡಿದ್ದಾರೆ. ಸೋಮವಾರ ಮತ್ತೊಬ್ಬ ಮಹಿಳೆ ಸುಮಾರು 20 ಸಾವಿರ ಬೆಲೆಬಾಳುವ ಮೊಬೈಲ್ ಕಳೆದುಕೊಂಡಿದ್ದಾರೆ. ನಿತ್ಯ ಕನಿಷ್ಟ ಮೂರ್ನಾಲ್ಕು ಜನರ ಹಣ, ವಸ್ತುಗಳು ಕಳ್ಳತನವಾಗಿತ್ತಿದೆ.
ದೂರು ನೀಡಿದರೂ ಪ್ರಯೋಜನವಿಲ್ಲ: ಪ್ರಯಾಣಿಕರ ಪ್ರಕಾರ, ನಿಲ್ದಾಣದ ಕೆಲವು ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದರೂ ಸಹ ಕಳ್ಳರು ಕ್ಯಾಮರ ಕಣ್ಣು ತಪ್ಪಿಸಿ ಪರಾರಿಯಾಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಮಹಿಳೆಯರ ಚಿನ್ನದ ಸರ, ಪರ್ಸ್ ಮತ್ತು ಮಧ್ಯಮ ವರ್ಗದ ಜನರ ಮೊಬೈಲ್ ಪೋನ್ಗಳು ಹೆಚ್ಚಾಗಿ ಕಳ್ಳತನವಾಗುತ್ತಿವೆ. “ಬಸ್ ಹತ್ತುವ ಅವಸರದಲ್ಲಿ ವ್ಯಾನಿಟಿಯಲ್ಲಿದ್ದ ಮೊಬೈಲ್ ಯಾವಾಗ ಮಾಯವಾಯಿತೋ ತಿಳಿಯಲೇ ಇಲ್ಲ. ನನ್ನ ಹಿಂದೆ ಇಬ್ಬರು ಹೆಂಗಸರು ಇದ್ದರು, ನನ್ನನ್ನು ತಳ್ಳಿದಂತೆ ಮಾಡಿ ಗಮನ ಬೇರೆ ಕಡೆ ಸೆಳೆದು ವ್ಯಾನಿಟಿ ಬ್ಯಾಗಿನಲ್ಲಿದ್ದ ಮೊಬೈಲ್ ಫೋನ್ ಕದ್ದಿದ್ದಾರೆ. ನಿಲ್ದಾಣದ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ, ಲಿಖಿತ ದೂರು ಪಡೆಯುತ್ತಿಲ್ಲ” ಎಂದು ಸಂತ್ರಸ್ತ ಮಹಿಳಾ ಪ್ರಯಾಣಿಕರೊಬ್ಬರು “ಪ್ರತಿನಿಧಿ”ಯ ಎದುರು ತಮ್ಮ ಅಳಲು ತೋಡಿಕೊಂಡರು.
ಸಿಸಿ ಕ್ಯಾಮರ ಇದ್ದರೂ ಪ್ರಯೋಜನವಿಲ್ಲ: ಬಸ್ ನಿಲ್ದಾಣದಲ್ಲಿ ಹತ್ತಾರು ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ ಕಳ್ಳರು ಸಿಸಿ ಕ್ಯಾಮರ ಸರಿಯಾಗಿ ಕೆಲಸ ಮಾಡದ ಜಾಗದಲ್ಲಿ ಮತ್ತು ಕ್ಷಣ ಮಾತ್ರದಲ್ಲಿ ತಮ್ಮ ಕೈ ಚಳಕ ತೋರುತ್ತಿರುವುದರಿಂದ ಸಿಸಿ ಕ್ಯಾಮರಾ ಇದ್ದರೂ ಪ್ರಯೋಜನವಾಗುತ್ತಿಲ್ಲ. ಜೊತೆಗೆ ಬಸ್ ನಿಲ್ದಾಣದ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗುವ ದೃಶ್ಯಗಳು ಕೇವಲ ಎರಡು ದಿನಗಳು ಮಾತ್ರ ಸ್ಟೋರೇಜ್ ಇರುತ್ತವೆ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಾರೆ. ನಿಲ್ದಾಣದ ಈ ಅವ್ಯವಸ್ಥೆಗಳು ಕಳ್ಳರಿಗೆ ವರದಾನವಾಗಿದೆ. ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಯ ಪ್ರತಿಕ್ರಿಯೆ ಪಡೆಯಲು ದೂರವಾಣಿ ಕರೆ ಮಾಡಲಾಯಿತಾದರೂ ಅವರು ಕರೆ ಸ್ವೀಕರಿಸಲಿಲ್ಲ. ಒಟ್ಟಾರೆಯಾಗಿ ತುಮಕೂರು ಬಸ್ ನಿಲ್ದಾಣವು ಸ್ಮಾರ್ಟ್ ಸಿಟಿಯ ಭಾಗವಾಗಿದ್ದರೂ, ಪ್ರಯಾಣಿಕರ ಸುರಕ್ಷತೆಯ ವಿಷಯದಲ್ಲಿ ಇನ್ನೂ “ಸ್ಮಾರ್ಟ್” ಆಗಬೇಕಿದೆ.


