ಅಭಿಮಾನೋತ್ಸವ ಆಚರಣೆ ಯಡಿಯೂರಪ್ಪನವರಿಗೆ ಇಷ್ಟವಿರಲಿಲ್ಲ: ವಿಜಯೇಂದ್ರ
ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರಪ್ಪನವರ 50ನೇ ವರ್ಷದ ಅಭಿಮಾನೋತ್ಸವ ಸಮಾರಂಭದ ಅಂಗವಾಗಿ ಗುರುವಾರ ನಗರದ ಸ್ನೇಹಸಂಗಮ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ವಿಜಯೇಂದ್ರ ಮಾತನಾಡಿದರು
Tumkur news
ತುಮಕೂರು: ಅಭಿಮಾನೋತ್ಸವ ಆಚರಣೆ ಯಡಿಯೂರಪ್ಪನವರಿಗೆ ಇಷ್ಟವಿರಲಿಲ್ಲ. ಆದರೆ, ರಾಜ್ಯದ ಲಕ್ಷಾಂತರ ಕಾರ್ಯಕರ್ತರು, ಅವರ ಅಭಿಮಾನಿಗಳ ಅಪೇಕ್ಷೆಯಂತೆ ಚಿತ್ರದುರ್ಗದಲ್ಲಿ ಅವರ ಅಭಿಮಾನೋತ್ಸವ ಆಚರಿಸಲಾಗುತ್ತಿದೆ. ಪಕ್ಷಾತೀತವಾಗಿ ಯಡಿಯೂರಪ್ಪನವರ ಅಭಿಮಾನಿಗಳು ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಯಶಸ್ವಿಗೊಳಿಸಿ, ಜನಪರವಾಗಿ ದುಡಿದ ನಾಯಕ ಯಡಿಯೂರಪ್ಪನವರಿಗೆ ಗೌರವ ಸಲ್ಲಿಸೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮನವಿ ಮಾಡಿದರು.
ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರಪ್ಪನವರ 50ನೇ ವರ್ಷದ ಅಭಿಮಾನೋತ್ಸವ ಸಮಾರಂಭದ ಅಂಗವಾಗಿ ಗುರುವಾರ ನಗರದ ಸ್ನೇಹಸಂಗಮ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ವಿಜಯೇಂದ್ರ ಮಾತನಾಡಿದರು.
ಬಿ.ಎಸ್. ಯಡಿಯೂರಪ್ಪ ಎಂದರೆ ಹೋರಾಟ, ಪರಿಶ್ರಮ, ತ್ಯಾಗದ ಸಂಕೇತ. ರೈತರ, ಬಡವರ, ಮಹಿಳೆಯರ ಪರ 50 ವರ್ಷಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದ ಯಡಿಯೂರಪ್ಪನವರು ಅಧಿಕಾರ ಅನುಭವಿಸಿದ್ದು ಕೇವಲ 5 ವರ್ಷ ಮಾತ್ರ. ನಗರ ಭಾಗದಲ್ಲಿ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿಹಳ್ಳಿಗೆ ತಲುಪಿಸಿ ಪಕ್ಷವನ್ನು ಬೆಳೆಸಿದ್ದರಲ್ಲಿ ಇವರ ಶ್ರಮ ಸಾಕಷ್ಟಿದೆ ಎಂಬುದು ಎಲ್ಲರಿಗೂ ಗೊತ್ತು. ಇಂತಹ ನಾಯಕನ 50 ವರ್ಷಗಳ ಹೋರಾಟದ ಬದುಕು ಸಂಭ್ರಮಿಸುವ ಬಿಎಸ್ವೈ ಅಭಿಮಾನೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಕನಸಿನಲ್ಲಿಯೂ ಕಲ್ಪಿಸಿಕೊಳ್ಳಲಾಗದ ಕಾಲಘಟ್ಟದಲ್ಲಿ ಬಿ.ಎಸ್. ಯಡಿಯೂರಪ್ಪನವರು ರೈತರ, ಬಡವರ ಪರ ಹೋರಾಟ ಮಾಡಿಕೊಂಡು ಜೊತೆಜೊತೆಯಲ್ಲಿ ಪಕ್ಷವನ್ನೂ ಕಟ್ಟಿಬೆಳೆಸಿದರು. ಒಂದು ಕಾಲದಲ್ಲಿ ಇವರೊಬ್ಬರೇ ಬಿಜೆಪಿ ಶಾಸಕರಾಗಿದ್ದರು. ನಮ್ಮ ಪಕ್ಷಕ್ಕೆ ಬನ್ನಿ ಮಂತ್ರಿ ಮಾಡುತ್ತೇವೆ ಎಂದು ಆಡಳಿತ ಪಕ್ಷದ ನಾಯಕರೂ ಆಹ್ವಾನಿಸಿದರೂ ಬಿಎಸ್ವೈ ಪಕ್ಷ ಬಿಡಲಿಲ್ಲ, ಇವರು ಯಾವತ್ತೂ ಅಧಿಕಾರಕ್ಕಾಗಿ ಹಪಹಪಿಸಲಿಲ್ಲ ಎಂದರು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿತ್ತು. ಒಬ್ಬರೇ ಹೋಗಿ ಸಂತ್ರಸ್ತರ ನೆರವಿಗೆ ನಿಂತರು. ರಾಯಚೂರು, ಕೊಪ್ಪಳ, ಬೀದರ್ ಜಿಲ್ಲೆಗಳಲ್ಲಿ ಬಡವರು ಮನೆ ಕಳೆದುಕೊಂಡಾಗ ಕೇಂದ್ರ ಸರ್ಕಾರದ ಒಂದು ಲಕ್ಷ ರೂ. ಅನುದಾನದ ಜೊತೆ ನಾಲ್ಕು ಲಕ್ಷ ಸೇರಿಸಿ ಐದು ಲಕ್ಷ ರೂ.ಗಳಲ್ಲಿ ಮನೆ ನಿರ್ಮಿಸಿಕೊಟ್ಟರು. ಆಗ ಕುಟುಂಬದವರೊಂದಿಗೆ ದೀಪಾವಳಿ ಆಚರಿಸಬೇಕಾದ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂತ್ರಸ್ತರೊಂದಿಗೆ ದೀಪಾವಳಿ ಆಚರಿಸಿ ಅವರು ಕುಟುಂಬಗಳಲ್ಲಿ ಬೆಳಕು ಮೂಡಿಸಿದರು ಎಂದು ಬಿ.ವೈ. ವಿಜಯೇಂದ್ರ ಸ್ಮರಿಸಿಕೊಂಡರು.
ಮಾಜಿ ಉಪ ಮುಖ್ಯಮಂತ್ರಿ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಯಡಿಯೂರಪ್ಪನವರು 50 ವರ್ಷ ಕಾಲ ಸಾಮಾಜಿಕ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಹಳ್ಳಿಹಳ್ಳಿ ತಿರುಗಿ ಬಿಜೆಪಿ ಕಟ್ಟಿದರು. ಒಂದು ಶಾಸಕ ಸ್ಥಾನದಿಂದ 110 ಸ್ಥಾನ ತಲುಪಿ ಬಿಜೆಪಿ ಅಧಿಕಾರಕ್ಕೆ ತರಲು ಪ್ರಮುಖ ಕಾರಣಕರ್ತರು ಯಡಿಯೂರಪ್ಪನವರು. ಅವರು ಕಟ್ಟಿದ ಪಕ್ಷದ ಫಲಾನುಭವಿಗಳು ನಾವೆಲ್ಲಾ ಎಂದು ಹೇಳಿದರು.
ಅಭಿಮಾನೋತ್ಸವ ಬೇಡ ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು, ಕಾಂಗ್ರೆಸ್ ಸರ್ಕಾರದ ದುರಾಡಳಿತ, ಕುರ್ಚಿ ಕಾದಾಟದ ವಿರುದ್ಧ ಜನರನ್ನು ಜಾಗೃತಿಗೊಳಿಸಲು ಅಭಿಮಾನೋತ್ಸವ ಅಗತ್ಯವಿದೆ. ಅದು ಅದ್ದೂರಿಯಾಗಿ ನಡೆದು ಯಶಸ್ವಿಯೂ ಆಗುತ್ತದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
ಮಾಜಿ ಸಚಿವ ಗೋಪಾಲಯ್ಯ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯ ದೊರಕಿಸಲು ನಿರಂತರ ಹೋರಾಟ ಮಾಡುತ್ತ, ಜನರ ಸೇವೆಗೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡ ಅಪರೂಪದ ನಾಯಕ ಯಡಿಯೂರಪ್ಪನವರು. ಇಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಮಟ್ಟಕ್ಕೆ ಬೆಳೆದಿದೆಯೆಂದರೆ ಅದರ ಹಿಂದೆ ಯಡಿಯೂರಪ್ಪನವರ ದೊಡ್ಡ ಶ್ರಮ, ತ್ಯಾಗ ಇದೆ ಎಂಬುದು ಎಲ್ಲರಿಗೂ ಗೊತ್ತು. ಇಂತಹ ನಾಯಕನ ಕೊಡುಗೆ ಸ್ಮರಿಸಿ ಗೌರವ ಸಲ್ಲಿಸಲು ಅಭಿಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕಾಗಿದೆ ಎಂದು ಹೇಳಿದರು.
ಗ್ರಾಮಾಂತರ ಶಾಸಕ ಬಿ.ಸುರೇಶ್ಗೌಡ ಮಾತನಾಡಿ, ಯಡಿಯೂರಪ್ಪನವರಂತಹ ಹೋರಾಟಗಾರರನ್ನು ನಾವು ಇನ್ಯಾರನ್ನೂ ನೋಡಲಾಗುವುದಿಲ್ಲ. ಅವರ ಹೆಸರು ಕೇಳಿದರೆ ಕಾರ್ಯಕರ್ತರಲ್ಲಿ ಹುರುಪು ಮೂಡುತ್ತದೆ. ಅವರು ಬಿಜೆಪಿಯ ಶಕ್ತಿಯಾಗಿದ್ದಾರೆ. ಅವರ ರಾಜಕೀಯ ಜೀವನ ಇಂದಿನವರಿಗೆ ಮಾದರಿಯಾಗಿದೆ. ಅವರ ಸೇವೆ, ಕೊಡುಗೆ ಸ್ಮರಣೀಯ ಎಂದರು.
ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲು ತೆರೆಯಲು ಯಡಿಯೂರಪ್ಪನವರ ಕೊಡುಗೆ ಗಣನೀಯ. ಯಡಿಯೂರಪ್ಪನವರು ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಲು ದೊಡ್ಡ ಶ್ರಮ, ತ್ಯಾಗ ಮಾಡಿದ್ದಾರೆ. ಇಂದು ಬಿಜೆಪಿಯಲ್ಲಿ ಮುಖ್ಯಮಂತ್ರಿಗಳು, ಮಂತ್ರಿಗಳು, ಸಂಸದರಾಗಿದ್ದರೆ ಅದು ಯಡಿಯೂರಪ್ಪನವರು ಪಕ್ಷಕ್ಕೆ ಹಾಕಿಕೊಟ್ಟ ತಳಹದಿ. ಅವರ ಅಭಿಮಾನೋತ್ಸವಕ್ಕೆ ತುಮಕೂರು ಕ್ಷೇತ್ರದಿಂದ ಹತ್ತು ಸಾವಿರ ಜನರು ತೆರಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಮಧುಗಿರಿ ಜಿಲ್ಲಾಧ್ಯಕ್ಷ ಚಿದಾನಂದಗೌಡ, ಮಾಜಿ ಶಾಸಕ ಪ್ರೀತಂ ಗೌಡ, ಡಾ. ಎಂ.ಆರ್. ಹುಲಿನಾಯ್ಕರ್, ಎಂ.ಡಿ. ಲಕ್ಷ್ಮೀನಾರಾಯಣ, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಮುಖಂಡರಾದ ಅನಿಲ್ಕುಮಾರ್, ಬಿ.ಕೆ. ಮಂಜುನಾಥ್, ಡಿ. ಕೃಷ್ಣಕುಮಾರ್, ವೈ.ಹೆಚ್. ಹುಚ್ಚಯ್ಯ, ಬ್ಯಾಟರಂಗೇಗೌಡ, ದಿಲೀಪ್ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಹೆಚ್. ಹನುಮಂತರಾಜು ಸೇರಿದಂತೆ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಿದ್ದರು.


