ಕೆ.ಎನ್ ರಾಜಣ್ಣ ಹೇಳಿಕೆಗೆ ಪ್ರಾಶಸ್ತ್ಯ ಕೊಡಬೇಕಾಗಿಲ್ಲ: ಕುಣಿಗಲ್ ಶಾಸಕ ರಂಗನಾಥ್
ಹಾದಿ ಬೀದಿಯಲ್ಲಿ ಮಾತನಾಡುವವರಿಗೆ ತಲೆಕೆಡಿಸಿಕೊಳ್ಳುವಂಥ ಅವಶ್ಯಕತೆ ಇಲ್ಲ: ರಂಗನಾಥ್
Tumkur news
ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಟ ಮಂತ್ರ ಮಾಡಿಸಿದ್ದಾರೆ ಎಂಬ ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿಕೆಗೆ ಪ್ರಾಶಸ್ತ್ಯ ಕೊಡಬೇಕಿಲ್ಲ ಎಂದು ಕುಣಿಗಲ್ ಕಾಂಗ್ರೆಸ್ ಶಾಸಕ ಎಚ್.ಡಿ ರಂಗನಾಥ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಮೌಢ್ಯವನ್ನು ನಂಬುವುದಿಲ್ಲ. ಸುಮ್ಮನೆ ಹೇಳಿಕೆಗೆ ಸಣ್ಣಪುಟ್ಟವರು ಮಾತನಾಡುತ್ತಾರೆ. ಅದಕ್ಕೆಲ್ಲ ಪ್ರಾಶಸ್ತ್ಯ ಕೊಡುವ ಅವಶ್ಯಕತೆಯಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ನಿಮಗೆಲ್ಲ ಗೊತ್ತಿದೆ. ಅವರೊಬ್ಬರು ವಕೀಲರು, ಸಮಾಜದಲ್ಲಿ ಮೂಢನಂಬಿಕೆಗಳನ್ನು ಹೋಗಲಾಡಿಸಬೇಕು ಎಂಬ ದೃಷ್ಟಿಯಿಂದ ಜವಾಬ್ದಾರಿ ತೆಗೆದುಕೊಂಡಿರುವಂತಹ ನಾಯಕರು. ನಾನು ಕೂಡ ಒಬ್ಬ ವಿಜ್ಞಾನ ವಿದ್ಯಾರ್ಥಿಯಾಗಿ ಅದನ್ನೆಲ್ಲ ನಂಬುವುದಿಲ್ಲ. ಸುಮ್ಮನೆ ಹಾದಿ ಬೀದಿಯಲ್ಲಿ ಮಾತನಾಡುವವರಿಗೆ ತಲೆಕೆಡಿಸಿಕೊಳ್ಳುವಂಥ ಅವಶ್ಯಕತೆ ಇಲ್ಲ ಎಂದು ಶಾಸಕ ಕೆ.ಎನ್ ರಾಜಣ್ಣ ಹೇಳಿಕೆಗೆ ತಿರುಗೇಟು ನೀಡಿದರು.
ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂಬ ರಾಜಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರಂಗನಾಥ್, ಅಸಹಾಯಕರಾಗಿದ್ದರೆ ಮುಖ್ಯಮಂತ್ರಿ ಅವರು ಹೇಗೆ ಮೀಸಲಾತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಸುಮ್ಮನೆ ಈ ರೀತಿ ಹೇಳಿಕೆಗಳನ್ನು ಹಗುರವಾಗಿ ಕೊಡುವಂತದ್ದು ನಮ್ಮ ಪಕ್ಷದಲ್ಲಿ ಶೋಭೆ ತರುವಂತದ್ದಲ್ಲ. ನಮ್ಮ ಮುಖ್ಯಮಂತ್ರಿ ಸ್ಟ್ರಾಂಗ್, ನಮ್ಮ ಉಪ ಮುಖ್ಯಮಂತ್ರಿ ಸ್ಟ್ರಾಂಗ್, ನಮ್ಮ ಪಕ್ಷ ಸ್ಟ್ರಾಂಗ್ ಎಂದು ಕುಣಿಗಲ್ ಶಾಸಕ ಡಾ ರಂಗನಾಥ್ ಹೇಳಿದರು.


