ಬೆಂಗಳೂರು: ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (KSAT)ವು 2022ನೇ ಸಾಲಿನ 6ರಿಂದ 8ನೇ ತರಗತಿ ಪದವೀಧರ ಪ್ರಾಥಮಿಕ ಶಿಕ್ಷಕರ (GPSTR) ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿ ಮಹತ್ವದ ಆದೇಶ ಪ್ರಕಟಿಸಿದೆ. ಈ ಪ್ರಕರಣಗಳಲ್ಲಿ ವಿವಾಹಿತ ಮಹಿಳಾ ಅಭ್ಯರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಮಾನ್ಯತೆ ಕುರಿತ ವಿವಾದ ಪ್ರಮುಖ ವಿಷಯವಾಗಿತ್ತು.
ರಾಜ್ಯದ ಬೆಂಗಳೂರು ದಕ್ಷಿಣ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ದಕ್ಷಿಣ ಕನ್ನಡ, ಹಾಸನ, ಮೈಸೂರು, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು 21-03-2022ರಂದು 6ರಿಂದ 8ನೇ ತರಗತಿ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದರು. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಎಲ್ಲ ಅರ್ಜಿದಾರರೂ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದರು.
21 ಮತ್ತು 22 ಮೇ 2022ರಂದು ಲಿಖಿತ ಪರೀಕ್ಷೆ ನಡೆದಿದ್ದು, 17-08-2022ರಂದು ಫಲಿತಾಂಶ ಪ್ರಕಟಿಸಲಾಗಿತ್ತು. ನಂತರ ದಾಖಲಾತಿ ಪರಿಶೀಲನೆ ವೇಳೆ ವಿವಾಹಿತ ಮಹಿಳಾ ಅಭ್ಯರ್ಥಿಗಳಿಂದ ತಂದೆಯ ಆದಾಯ ಪ್ರಮಾಣಪತ್ರದ ಜೊತೆಗೆ ಪತಿಯ ಆದಾಯ ಪ್ರಮಾಣಪತ್ರವನ್ನೂ ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಹಲವರು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು.
18-11-2022ರಂದು ಪ್ರಕಟವಾದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅನೇಕ ಮಹಿಳಾ ಅಭ್ಯರ್ಥಿಗಳ ಹೆಸರು ಸೇರಿರಲಿಲ್ಲ. ಇದನ್ನು ಪ್ರಶ್ನಿಸಿ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಿದ್ದರು. ಕೆಲವರು ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿ, ತಂದೆಯ ಆದಾಯ ಆಧಾರಿತ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ತಿರಸ್ಕರಿಸಿರುವ ಕ್ರಮ ಪ್ರಶ್ನಿಸಿದ್ದರು.
ಈ ಸಂಬಂಧ ಹೈಕೋರ್ಟ್ 30-01-2023ರಂದು ನೀಡಿದ ಆದೇಶದಲ್ಲಿ, ಅರ್ಜಿದಾರರನ್ನು ಅವರು ಅರ್ಜಿ ಸಲ್ಲಿಸಿದ್ದ ಮೀಸಲಾತಿ ವರ್ಗಗಳಲ್ಲೇ ಪರಿಗಣಿಸಬೇಕು ಎಂದು ಸೂಚಿಸಿ, ಸಂಬಂಧಿತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿತ್ತು. ನಂತರ ಸರ್ಕಾರ 27-02-2023ರಂದು ಪರಿಷ್ಕೃತ ಆಯ್ಕೆ ಪಟ್ಟಿ ಮತ್ತು 08-03-2023ರಂದು ಮುಖ್ಯ ಆಯ್ಕೆ ಪಟ್ಟಿ ಪ್ರಕಟಿಸಿತು.
ಆದರೆ ಈ ಆದೇಶವನ್ನು ಪ್ರಶ್ನಿಸಿ ಇತರ ಅಭ್ಯರ್ಥಿಗಳು ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. 12-10-2023ರಂದು ವಿಭಾಗೀಯ ಪೀಠವು ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದುಪಡಿಸಿ, ಪ್ರಕರಣವನ್ನು ಆಡಳಿತ ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆಸುವಂತೆ ಸೂಚಿಸಿತು. ಅದರ ಬಳಿಕ 19-10-2023ರಂದು ಅರ್ಹ ಅಭ್ಯರ್ಥಿಗಳ ಕೌನ್ಸೆಲಿಂಗ್ ಪಟ್ಟಿ ಪ್ರಕಟಿಸಲಾಯಿತು. ಈ ಪಟ್ಟಿಯಲ್ಲಿ ಹಲವರ ಹೆಸರು ಕೈಬಿಡಲಾಗಿತ್ತು.
ಅರ್ಜಿದಾರರ ವಾದದ ಪ್ರಕಾರ, ಸರ್ಕಾರದ ಅಧಿಸೂಚನೆ ಮತ್ತು ಫಾರ್ಮ್-F ನಲ್ಲಿ ತಂದೆ/ಪೋಷಕರ ಆದಾಯವನ್ನು ಮಾತ್ರ ಉಲ್ಲೇಖಿಸಲಾಗಿದೆ. ಪತಿಯ ಆದಾಯವನ್ನು ಕಡ್ಡಾಯಗೊಳಿಸಿಲ್ಲ. ಮಹಿಳೆಯ ಜಾತಿ ಜನ್ಮದಿಂದ ನಿರ್ಧಾರವಾಗುತ್ತದೆ; ಮದುವೆಯಾದ ನಂತರ ಜಾತಿ ಬದಲಾಗುವುದಿಲ್ಲ ಎಂದು ಅವರು ವಾದಿಸಿದರು.
ಸರ್ಕಾರದ ಪರವಾಗಿ ಸಲ್ಲಿಸಲಾದ ಪ್ರತಿವಾದದಲ್ಲಿ, 12-12-1986ರ ಸರ್ಕಾರದ ಆದೇಶದ ಪ್ರಕಾರ ವಿವಾಹಿತ ಮಹಿಳೆಯ ಕುಟುಂಬ ಆದಾಯ ಲೆಕ್ಕಾಚಾರದಲ್ಲಿ ಪತಿಯ ಆದಾಯವೇ ಪರಿಗಣಿಸಬೇಕೆಂದು ತಿಳಿಸಲಾಗಿದೆ ಎಂದು ಸರ್ಕಾರ ವಾದಿಸಿತು.
ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ, 15 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಒಟ್ಟು 67,892 ಅಭ್ಯರ್ಥಿಗಳು ಅರ್ಹರಾಗಿದ್ದು, 22,432 ಅಭ್ಯರ್ಥಿಗಳನ್ನು 1:2 ಪಟ್ಟಿಗೆ ಆಯ್ಕೆ ಮಾಡಲಾಗಿತ್ತು. ನಂತರ 13,352 ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಗೆ ಸೇರಿದ್ದರು. ಇವರಲ್ಲಿ 8,376 ಮಹಿಳೆಯರು, 4,973 ಪುರುಷರು ಹಾಗೂ 3 ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳಿದ್ದರು.
ಈ ಸಂಪೂರ್ಣ ಪ್ರಕರಣದಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪರಿಶೀಲನೆ, ವಿವಾಹಿತ ಮಹಿಳೆಯರ ಮೀಸಲಾತಿ ಹಕ್ಕು, ಹಾಗೂ ನೇಮಕಾತಿ ಪ್ರಕ್ರಿಯೆಯ ಮಾನ್ಯತೆ ಕುರಿತಂತೆ ವ್ಯಾಪಕ ಕಾನೂನು ಚರ್ಚೆ ನಡೆದಿದ್ದು, KSAT ಮುಂದೆ ಹಲವು ಅರ್ಜಿಗಳು ಒಟ್ಟಿಗೆ ವಿಚಾರಣೆಗೆ ಬಂದಿದ್ದವು.
