ತುಮಕೂರು: ಭೀಕರ ಬಿಸಿಲು: ಸಾವಿರಾರು ಮೀನುಗಳು ಸಾವು
ಜಲಚರಗಳಿಗೂ ತಟ್ಟಿತು ಬಿಸಿಲ ಬೇಗೆ!: ಸಾವಿರಾರು ಮೀನುಗಳು ಸಾವು
Tumkurnews
ತುಮಕೂರು: ಜಿಲ್ಲೆಯಲ್ಲಿ ಬಿಸಿಲು ವಿಪರೀತ ಏರಿಕೆಯಾಗಿದ್ದು, ಶಿರಾ ತಾಲ್ಲೂಕಿನಲ್ಲಿ ಸಾವಿರಾರು ಜಲಚರಗಳು ಬಲಿಯಾಗಿವೆ.
ಶಿರಾ ತಾಲ್ಲೂಕಿನ ದೊಡ್ಡಗೂಳ ಗ್ರಾಮದ ಕೆರೆಯಲ್ಲಿ ಬಿಸಿಲಿನ ಬೇಗೆಗೆ ನೀರು ಕಡಿಮೆಯಾಗಿದ್ದು, ಬಿಸಿಲಿನ ತಾಪಕ್ಕೆ ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿವೆ.
ಶಿರಾದಲ್ಲಿ ಉಷ್ಣಾಂಶ 37 ಡಿಗ್ರಿವರಗೆ ಇದ್ದು, ಜನ ಹೈರಾಣಾಗಿದ್ದಾರೆ. ಕಳೆದ ಬಾರಿಯೂ ಮಳೆಯಾಗಿರಲಿಲ್ಲ, ಈ ಬಾರಿಯೂ ಮಳೆ ಇಲ್ಲ. ಮಳೆ ಬೀಳದ ಪರಿಣಾಮ ಹಿಂದಿನ ವರ್ಷಗಳಲ್ಲಿ ತುಂಬಿದ್ದ ಕೆರೆಕಟ್ಟೆಗಳು ಸಂಪೂರ್ಣವಾಗಿ ಖಾಲಿಯಾಗಿವೆ. ಅಳಿದುಳಿದ ನೀರಿನಲ್ಲಿ ಜೀವ ಉಳಿಸಿಕೊಂಡಿದ್ದ ಜಲಚರಗಳು ಈಗ ಭೀಕರ ಬಿಸಿಲಿನಿಂದಾಗಿ ಕೆರೆಯ ನೀರು ಬಿಸಿಯಾಗಿ ಉಸಿರಾಟಕ್ಕೆ ತೊಂದರೆಯಾಗಿ ಪ್ರಾಣ ಬಿಟ್ಟಿವೆ.
ಯಾರೂ ಗಮನಿಸಿಲ್ಲ: ಕೆರೆಯಲ್ಲಿ ನೀರು ಕಡಿಮೆಯಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಇರುವ ನೀರು ಕಲುಷಿತಗೊಂಡು ಮೀನುಗಳು ಸತ್ತಿವೆ. ಕಳೆದೊಂದು ವಾರದಿಂದಲೂ ಮೀನು ಸಾಯುತ್ತಿದ್ದರೂ ಗ್ರಾಮದ ಯಾರೊಬ್ಬರೂ ಭೇಟಿ ನೀಡಿ ಪರಿಶೀಲಿಸಿರಲಿಲ್ಲ, ಸತ್ತ ಮೀನುಗಳನ್ನು ತೆರವುಗೊಳಿಸುವ ಕಾರ್ಯವೂ ನಡೆದಿರಲಿಲ್ಲ. ಹೀಗಾಗಿ ದುರ್ವಾಸನೆ ಉಂಟಾಗಿತ್ತು. ಬಳಿಕ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸತ್ತ ಮೀನುಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಗಿದ್ದು, ಮೀನುಗಳ ಮಾರಣ ಹೋಮಕ್ಕೆ ಜನ ಬೇಸರ ವ್ಯಕ್ತಪಡಿಸಿದ್ದಾರೆ.
+ There are no comments
Add yours