ತುಮಕೂರು: ರಮೇಶ್ ಅರವಿಂದ್, ಪ್ರೇಮಾ, ಅನುಶ್ರೀ ಮತ್ತಿತರರ ಮೇಲೆ ದೂರು: ವಿಡಿಯೋ

1 min read

 

ರಮೇಶ್ ಅರವಿಂದ್, ಪ್ರೇಮಾ, ಅನುಶ್ರೀ ಮತ್ತಿತರರ ಮೇಲೆ ದೂರು

Tumkurnews
ಚಿಕ್ಕನಾಯಕನಹಳ್ಳಿ: ಚಿತ್ರ ನಟ ರಮೇಶ್ ಅರವಿಂದ್, ನಟಿ ಪ್ರೇಮಾ, ನಿರೂಪಕಿ ಅನುಶ್ರೀ ಹಾಗೂ ಗಗನ ಹೆಸರಿನ ರಿಯಾಲಿಟಿ ಶೋ ಸ್ಪರ್ಧಿ ಸೇರಿದಂತೆ ಜ಼ೀ-ವಾಹಿನಿಯ ಮಹಾನಟಿ ರಿಯಾಲಿಟಿ ಶೋ ನಿರ್ಮಾಪಕ, ನಿರ್ದೇಶಕರ ಮೇಲೆ ಚಿಕ್ಕನಾಯಕನಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

KTWOTA ಸಹಯೋಗದೊಂದಿಗೆ ಫ್ರೆಂಡ್ಸ್ ದ್ವಿಚಕ್ರವಾಹನ ವರ್ಕ್ ಶಾಪ್ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದವರು, ಜ಼ೀ-ವಾಹಿನಿಯ ಮಹಾನಟಿ ರಿಯಾಲಿಟಿ ಶೋ ಮತ್ತು ಅದರಲ್ಲಿ ಭಾಗವಹಿಸುವ ಈ ಎಲ್ಲಾ ನಟ-ನಟಿಯರ ವಿರುದ್ಧ ದೂರು ನೀಡಿದ್ದಾರೆ. ಕಾರಣ, ಮೆಕ್ಯಾನಿಕ್ ಕೆಲಸ ಮಾಡುವ ಶ್ರಮಿಕ ಸಮುದಾಯವನ್ನು ಜ಼ೀ ಟಿವಿಯ ಮಹಾನಟಿ ರಿಯಾಲಿಟಿ ಶೋನಲ್ಲಿ ಕೀಳಾಗಿ ನಿಂದಿಸಿ, ಅವಮಾನಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಮಹಾನಟಿ ರಿಯಾಲಿಟಿ ಶೋ ನಡೆಸುತ್ತಿದ್ದ ಒಂದು ಎಪಿಸೋಡಿನಲ್ಲಿ ಗಗನ ಎಂಬ ಹೆಸರಿನ ಸ್ಪರ್ಧಿಯೊಬ್ಬಾಕೆ,
ತನ್ನ ನಟನಾ ಕೌಶಲವನ್ನು ಪ್ರದರ್ಶಿಸುವಾಗ, ಮೆಕ್ಯಾನಿಕ್ ಒಬ್ಬನನ್ನು ಪ್ರೀತಿಸುತ್ತಿರುವ ತನ್ನ ಗೆಳತಿಯನ್ನು ಕನ್ವಿನ್ಸ್ ಮಾಡುವಂಥ ಸನ್ನಿವೇಶವನ್ನು ವೇದಿಕೆಯಲ್ಲಿ ನಿರ್ವಹಿಸುತ್ತಾಳೆ. ಆಗ ಆಕೆಯ ಸಂಭಾಷಣೆಯಲ್ಲಿ
ಮೆಕ್ಯಾನಿಕ್ ಒಬ್ಬನ ಪ್ರೀತಿಗೆ ಬಿದ್ದರೆ ಅದು ಕೊಚ್ಚೆಯಲ್ಲಿ ಬಿದ್ದಂತೆ. ಹರೆಯದ ವಯಸ್ಸಿನ ಹುಂಬ ಆಕಾಂಕ್ಷೆಯಲ್ಲಿ ಆತನನ್ನೇ ವರಿಸಿದರೆ ದೊಡ್ಡಮಟ್ಟದ ದುಡ್ಡು, ಶ್ರೀಮಂತಿಕೆ ಇಲ್ಲದೆ ಗ್ರೀಸ್ ತಿಂದುಕೊಂಡು ಬದುಕಲಾಗದು. ಎಂಬಂಥ ಒಣ ಮಾತುಗಳು ಬರುತ್ತವೆ.

ಈ ಮಾತುಗಳು ನಾಡಿನ ವೃತ್ತಿಪರ ಮೆಕ್ಯಾನಿಕ್ ಸಮುದಾಯವನ್ನು ಕೆರಳಿಸಿವೆ. ಒಂದಿಡೀ ಶ್ರಮಿಕ ವರ್ಗದ ದುಡಿಮೆಯ ಬಗ್ಗೆ, ವೃತ್ತಿಯ ಬಗ್ಗೆ ಹೀಗೆ ತಿರಸ್ಕಾರದ, ಕುಹಕದ ಮಾತಾಡಿರುವ ಆ ನಟಿ ಹಾಗೂ ಆಕೆಯ ಮಾತುಗಳಿಗೆ ಉತ್ತೇಜನ ನೀಡುವಂತೆ ಉತ್ಪ್ರೇಕ್ಷೆಯಿಂದ ವರ್ತಿಸುವ ರಮೇಶ್ ಅರವಿಂದ್, ನಟಿ ಪ್ರೇಮಾ, ನಿರೂಪಕಿ ಅನುಶ್ರೀ, ನಿರ್ಮಾಪಕ ರಾಘವೇಂದ್ರ ಹುಣಸೂರು, ನಿರ್ದೇಶಕ ಮತ್ತು ಜ಼ೀ-ಟಿವಿ ವಾಹಿನಿಯ ಮೇಲೆ ರಾಜ್ಯದ ಮೆಕ್ಯಾನಿಕ್ ಸಂಘದವರು ಎಲ್ಲಾ ಊರುಗಳಲ್ಲೂ ದೂರು ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿ ಕೂತಿರುವ ಇಂಥ ಜನಪ್ರಿಯ ವ್ಯಕ್ತಿಗಳ ಮೇಲೆ ಸಮುದಾಯಗಳ ನಡುವೆ ದ್ವೇಷ ಬಿತ್ತುವ, ಸಮಾಜದಲ್ಲಿ ಶಾಂತಿ ಭಂಗ ಉಂಟುಮಾಡುವ ಮತ್ತು ಶ್ರಮಿಕ ವರ್ಗದ ಜನರನ್ನು ಕೊಚ್ಚೆ ಎಂದು ಅವಮಾನಿಸಿ ಅವರ ಆತ್ಮಗೌರವಕ್ಕೆ ಚ್ಯುತಿ ತಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಕಠಿಣಕ್ರಮ ಕೈಗೊಳ್ಳಬೇಕೆಂದು ಕೋರಿ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿಗೆ ದೂರು ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ, ಫ್ರೆಂಡ್ಸ್ ದ್ವಿಚಕ್ರವಾಹನ ವರ್ಕ್ ಶಾಪ್ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ದಿ ಸಂಘದ, ನಿಸಾರ್ ಅಹಮದ್, ಚಂದ್ರು, ದಸ್ತಗೀರ್, ಯೋಗೀಶ್, ಮೋಮಿನ್, ಚೆನ್ನಾಚಾರ್, ಚಾಂದು, ಅಬ್ಬು, ಮತ್ತಿತರರು ಉಪಸ್ಥಿತರಿದ್ದರು. ಜೊತೆಗೆ ದಸಂಸ ತಾಲ್ಲೂಕು ಸಂಚಾಲಕ ಸಿ.ಎಸ್ ಲಿಂಗದೇವರು ಹಾಜರಿದ್ದರು.

 

 

 

About The Author

You May Also Like

More From Author

+ There are no comments

Add yours