ಬಿಜೆಪಿ-ಜೆಡಿಎಸ್ ಮೈತ್ರಿ: ತುಮಕೂರಿನಲ್ಲಿ ಆರಂಭದಲ್ಲೇ ಅಪಸ್ವರ: ದೇವೇಗೌಡರ ಸ್ಪರ್ಧೆಗೆ ವಿರೋಧ
– ಅಶೋಕ್ ಆರ್.ಪಿ ತುಮಕೂರು, Tumkurnews
ತುಮಕೂರು: ಮುಂಬರುವ ಲೋಕಸಭಾ ಚುನಾವಣೆಯ ನಿಮಿತ್ತವಾಗಿ ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಈ ಮೈತ್ರಿ ಯಾವ ಪರಿಣಾಮ ಬೀರಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯುತ್ತಾರೆ ಎನ್ನುವ ಕುತೂಹಲ ಕ್ಷೇತ್ರದ ಜನರನ್ನು ಕಾಡುತ್ತಿದೆ.
ದೇವೇಗೌಡ ಸ್ಪರ್ಧೆ ಸಾಧ್ಯತೆ: ಸದ್ಯದ ಮಾಹಿತಿಯಂತೆ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಅಭ್ಯರ್ಥಿಯಾಗಿ ಹೆಚ್.ಡಿ ದೇವೇಗೌಡ ಅವರು ಸ್ಪರ್ಧಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ವಿರುದ್ಧ ದೇವೇಗೌಡ ಅವರು ಸೋಲು ಕಂಡರು. ಇದೀಗ ಅದೇ ಬಿಜೆಪಿ ಮೈತ್ರಿಯೊಂದಿಗೆ ಕಾಂಗ್ರೆಸ್ ವಿರುದ್ಧ ಸೆಣೆಸಾಡಲು ದೇವೇಗೌಡರು ತಯಾರಿ ನಡೆಸುತ್ತಿದ್ದಾರೆ.
ಹೆಚ್.ಡಿ.ಡಿ ಹಾದಿ ಸುಗಮೇ?: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಹೆಚ್.ಡಿ ದೇವೇಗೌಡ ಸ್ಪರ್ಧಿಸುವುದು ಹಾಗೂ ಗೆಲುವು ಸಾಧಿಸುವುದು ಅಷ್ಟು ಸುಲಭವೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಏಕೆಂದರೆ ಕಳೆದ ಬಾರಿಯ ಚುನಾವಣೆಯಲ್ಲಿ ಇದೇ ಬಿಜೆಪಿ ವಿರುದ್ಧ ಹೆಚ್.ಡಿ.ಡಿ ಸ್ಪರ್ಧಿಸಿದ್ದರು. ಇದೀಗ ಅದೇ ಬಿಜೆಪಿಯೊಂದಿಗೆ ಚುನಾವಣೆ ಪ್ರಚಾರ ನಡೆಸುವುದು, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಗೆಲುವಿಗಾಗಿ ತಂತ್ರ ಹೆಣೆಯುವುದು, ಅದರಲ್ಲಿ ಯಶಸ್ವಿಯಾಗುವುದು ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದು ಜನಾಭಿಪ್ರಾಯ.
ಒಳ ಏಟಿನ ಭೀತಿ ತಪ್ಪಿದ್ದಲ್ಲ: ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರು ಸ್ಪರ್ಧಿಸಿದರೆ ಒಳ ಏಟಿನ ಭೀತಿ ಎದುರಿಸಬೇಕಾಗುತ್ತದೆ. ಬಿಜೆಪಿ, ಜೆಡಿಎಸ್ ಎರಡೂ ಕಡೆ ದೇವೇಗೌಡರ ವಿರುದ್ಧ ಕೆಲಸ ಮಾಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲೂ ದೇವೇಗೌಡರ ವಿರುದ್ಧವಾಗಿ ಕೆಲ ಮುಖಂಡರು ಕೆಲಸ ಮಾಡುವ ಮೂಲಕ ಒಳ ಏಟು ನೀಡಲಾಗಿತ್ತು. ಹೀಗಾಗಿ ಬಿಜೆಪಿ ಮೈತ್ರಿಯಲ್ಲೂ ಅದು ಪುನರಾವರ್ತನೆ ಆಗುವ ಆತಂಕ ಇದ್ದಿದ್ದೆ.
ಬಸವರಾಜ್ ಅಪಸ್ವರ: ಮೈತ್ರಿ ಆರಂಭದಲ್ಲೇ ಹಾಲಿ ಬಿಜೆಪಿ ಸಂಸದ ಜಿ.ಎಸ್ ಬಸವರಾಜು ಅವರು ದೇವೇಗೌಡರ ಸ್ಪರ್ಧೆಗೆ ಅಪಸ್ವರ ಎತ್ತಿದ್ದಾರೆ. “ಹಾಸನದ ಗೊರೂರು ಡ್ಯಾಂನಿಂದ ತುಮಕೂರಿಗೆ ಹೇಮಾವತಿ ನದಿ ನೀರು ಹರಿಸಲು ದೇವೇಗೌಡರು ವಿರೋಧ ಮಾಡಿದ್ದರು. ಈ ಹೇಳಿಕೆಯೇ ಕಳೆದ ಚುನಾವಣೆಯಲ್ಲಿ ನನ್ನ ಗೆಲುವಿಗೆ ಕಾರಣವಾಯಿತು. ಈ ವಿಚಾರ ಇನ್ನೊಮ್ಮೆ ಸುದ್ದಿಯಾದರೆ ದೇವೇಗೌಡರ ನೆಂಟರು ಕೂಡ ಅವರಿಗೆ ಓಟು ಹಾಕಲ್ಲ” ಎಂದು ಜಿ.ಎಸ್ ಬಸವರಾಜು ಮತ್ತೊಮ್ಮೆ ಕಿಡಿಕಾರಿದ್ದಾರೆ. ಈ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, “ಸಂಸದರಾಗಿ ತುಮಕೂರಿಗೆ ಬಸವರಾಜು ಕೊಡುಗೆ ಏನು?” ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಪರಸ್ಪರ ಮೈತ್ರಿ ನಾಯಕರು ವಾಕ್ಸಮರದಲ್ಲಿ ತೊಡಗಿದ್ದು, ಕಾರ್ಯಕರ್ತರು ಚಿಂತಾಕ್ರಾಂತರಾಗಿ, ದಿಕ್ಕು ತೋಚದಂತಾಗಿದ್ದಾರೆ.
ಮುನ್ನೆಲೆಗೆ ಬಂದ ಹೇಮಾವತಿ: ತುಮಕೂರಿಗೆ ಹೇಮಾವತಿ ನೀರು ಹರಿಸಲು ದೇವೇಗೌಡರು ವಿರೋಧ ಮಾಡಿದ್ದರು ಎಂಬುದನ್ನು ಬಿಜೆಪಿ ಸಂಸದ ಜಿ.ಎಸ್ ಬಸವರಾಜು ಎಳೆದು ಚರ್ಚೆಗೆ ತಂದಿದ್ದಾರೆ. ಹೀಗಾಗಿ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರ ಸ್ಪರ್ಧೆಗೆ ಬಿಜೆಪಿಯಲ್ಲಿ ವಿರೋಧವಿರುವುದು ಬಹಿರಂಗಗೊಂಡಿದೆ. ಒಟ್ಟಾರೆಯಾಗಿ ಮೈತ್ರಿ ಆರಂಭದಲ್ಲೇ ಬಿಜೆಪಿ-ಜೆಡಿಎಸ್ ನಡುವೆ ಬಿರುಕು ಮೂಡಿದ್ದು, ಮುಂದೆ ಏನೇನಾಗುತ್ತದೆ ಎಂದು ಕಾದು ನೋಡಬೇಕಿದೆ.
+ There are no comments
Add yours