ನರೇಗಾ ಯೋಜನೆಯಡಿ ಸ್ಮಶಾನ ಅಭಿವೃದ್ಧಿ: ಪಂಚಾಯತಿ ಕಾರ್ಯಕ್ಕೆ ಶ್ಲಾಘನೆ

1 min read

 

ನರೇಗಾದಡಿ ಪೆಮ್ಮೇದೇವರಹಳ್ಳಿ ಸ್ಮಶಾನ ಅಭಿವೃದ್ಧಿ

Tumkurnews
ತುಮಕೂರು: ಕೊರಟಗೆರೆ ತಾಲ್ಲೂಕು ತುಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಮ್ಮೇದೇವರಹಳ್ಳಿ ಗ್ರಾಮದ ಸಾರ್ವಜನಿಕ ಸ್ಮಶಾನವನ್ನು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿದೆ.
ಪೆಮ್ಮೇದೇವರಹಳ್ಳಿ, ವೀರನಗರ ಹಾಗೂ ತಾಂಡ ಗ್ರಾಮದ ಜನರಿಗೆ ಇರುವ ಏಕೈಕ ಸ್ಮಶಾನ ಇದಾಗಿದ್ದು, ಈ ಮೂರು ಗ್ರಾಮಗಳಲ್ಲಿ ಯಾವುದೇ ಸಾವು ಸಂಭವಿಸಿದರೆ ಅವರು ಇಲ್ಲಿನ ಪೆಮ್ಮೇದೇವರಹಳ್ಳಿ ಸಾರ್ವಜನಿಕ ಸ್ಮಶಾನಕ್ಕೆ ಬರಲೇಬೇಕು. ಆದರೆ ಇಲ್ಲಿನ ಸ್ಮಶಾನದಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆ ಗ್ರಾಮಸ್ಥರು ಕೊರಗುತ್ತಿದ್ದರು. ಇದನ್ನು ಮನಗಂಡ ಗ್ರಾಮ ಪಂಚಾಯಿತಿಯು 2023-24ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಸುಮಾರು 3 ಲಕ್ಷ ರೂಪಾಯಿ ವೆಚ್ಚದಲ್ಲಿ ಇಲ್ಲಿನ 1 ಎಕರೆ ವಿಸ್ತೀರ್ಣದ ಸ್ಮಶಾನವನ್ನು ಅಭಿವೃದ್ಧಿ ಪಡಿಸಿದೆ.
ಸ್ಮಶಾನದ ಸುತ್ತಲೂ 1200ಕ್ಕೂ ಅಧಿಕ ಕತ್ತಾಳಿಗಿಡಗಳನ್ನು ಬೆಳೆಸುವ ಮೂಲಕ ಸ್ಮಶಾನದ ಗಡಿಯನ್ನು ನಿರ್ಮಿಸಲಾಗಿದೆ. ತಗ್ಗು-ದಿಣ್ಣೆಗಳಿಂದ ಕೂಡಿದ್ದ ಭೂಪ್ರದೇಶವನ್ನು ಸಮತಟ್ಟಾಗಿ ಮಾಡಲಾಗಿದೆ. ಅಲ್ಲದೆ ಸ್ಮಶಾನದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಹಾಗೂ ಬಿಸಿಲು ಮಳೆಯಿಂದ ರಕ್ಷಣೆ ಪಡೆಯಲು ಸೂಕ್ತ ಕಟ್ಟಡ, ನೀರಿನ ತೊಟ್ಟಿ, ಸ್ಮಶಾನದ ಮುಂಭಾಗ ಆಕರ್ಷಕ ಕಾಂಪೌಂಡ್‌, ಪ್ರವೇಶದ್ವಾರ, ಭವ್ಯವಾದ ನಾಮಫಲಕ, ಬಯೋ ಫೆನ್ಸಿಂಗ್, ಜಂಗಲ್‌ ಕ್ಲಿಯರೆನ್ಸ್ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರಿಂದಾಗಿ ಸ್ಮಶಾನಕ್ಕೆ ಬರುವಂತಹ ಜನರು ಸೂಕ್ತ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಲು ನರೇಗಾ ಯೋಜನೆ ಸಹಕಾರಿಯಾಗಿದೆ.
ಪೆಮ್ಮೇದೇವರಹಳ್ಳಿ, ವೀರನಗರ ಹಾಗೂ ಪೆಮ್ಮೇದೇವರಹಳ್ಳಿ ತಾಂಡದಲ್ಲಿ ಯಾವುದಾದರೂ ಸಾವು ಸಂಭವಿಸಿದರೆ, ಹೆಣವನ್ನು ಹೂಣಲು, ವಿಧಿ-ವಿಧಾನ ಸೇರಿದಂತೆ ಅಗತ್ಯ ಅಂತ್ಯಕ್ರಿಯೆ ಮಾಡಲು ಉತ್ತಮ ಸೌಲಭ್ಯವಿಲ್ಲದೆ ಕಂಗಾಲಾಗಿದ್ದ ಗ್ರಾಮಸ್ಥರಿಗೆ ಇದೀಗ ಮಹಾತ್ಮಗಾಂಧಿ ನರೇಗಾ ಯೋಜನೆ ಆಸರೆಯಾಗಿದೆ. ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಇದೀಗ ನರೇಗಾದಡಿ ಈಡೇರಿದೆ.
***
ಪೆಮ್ಮೇದೇವರಹಳ್ಳಿ, ವೀರನಗರ, ತಾಂಡದ ಸುಮಾರು 350ಕ್ಕೂ ಅಧಿಕ ಕುಟುಂಬಗಳಿಗೆ ಇದ್ದಂತಹ ಏಕೈಕ ಸಾರ್ವಜನಿಕ ಸ್ಮಶಾನವನ್ನು ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಿರುವುದು ಸಂತೋಷದ ವಿಷಯ. ಇದರಿಂದಾಗಿ ನಮ್ಮ ಗ್ರಾಮದ ಜನರಿಗೆ ಕೂಲಿ ಕೆಲಸದ ಜೊತೆ ವ್ಯವಸ್ಥಿತವಾದ ಸ್ಮಶಾನವನ್ನೂ ಅಭಿವೃದ್ಥಿಪಡಿಸಿರುವುದು ನನಗೆ ಖುಷಿ ತಂದಿದೆ. ಅಲ್ಲದೆ ಗ್ರಾಮ ಪಂಚಾಯಿತಿ ವತಿಯಿಂದ ಸ್ಮಶಾನಕ್ಕೆ ಸೂಕ್ತ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆಯೂ ಸಿಕ್ಕಿದೆ.
ರಮೇಶ್‌, ಗ್ರಾಮ ಪಂಚಾಯಿತಿ ಸದಸ್ಯರು, ತುಂಬಾಡಿ ಗ್ರಾ.ಪಂ.
***
ನರೇಗಾ ಯೋಜನೆಯಡಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸ್ಮಶಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅದೇ ರೀತಿ ತುಂಬಾಡಿ ಗ್ರಾಮ ಪಂಚಾಯಿತಿಯಲ್ಲಿಯೂ ಸ್ಮಶಾನ ಅಭಿವೃದ್ಧಿಪಡಿಸಲಾಗಿದೆ. ಸರ್ಕಾರದ ಆಸ್ತಿಗಳನ್ನು ಸಂರಕ್ಷಿಸಿ, ಅವುಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಅಷ್ಟೇ ಅಲ್ಲದೇ ಸರ್ಕಾರಿ ಶಾಲೆ, ಅಂಗನವಾಡಿ ಕಟ್ಟಡಗಳನ್ನೂ ಸಹ ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ.
-ಡಾ.ಡಿ.ದೊಡ್ಡಸಿದ್ದಯ್ಯ, ಕಾರ್ಯನಿರ್ವಾಹಕ ಅಧಿಕಾರಿಗಳು, ಕೊರಟಗೆರೆ ತಾಲ್ಲೂಕು ಪಂಚಾಯಿತಿ.

About The Author

You May Also Like

More From Author

+ There are no comments

Add yours