ಸಿದ್ಧಗಂಗಾ ಮಠದ ಗೋಕಟ್ಟೆಗೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರು ದುರ್ಮರಣ
Tumkurnews.in
ತುಮಕೂರು; ಸಿದ್ಧಗಂಗಾ ಮಠದ ಗೋಕಟ್ಟೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸೇರಿ ಒಟ್ಟು ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ನಡೆದಿದೆ.
ಸಿದ್ಧಗಂಗಾ ಮಠದಲ್ಲಿ ಆರನೇ ತರಗತಿ ಓದುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಶಂಕರ್(11), ರಾಮನಗರ ಜಿಲ್ಲೆಯ ಹರ್ಷಿತ್(11) ಹಾಗೂ ಪೋಷಕರಾದ ಬೆಂಗಳೂರಿನ ಬಾಗಲಗುಂಟೆ ನಿವಾಸಿ ಲಕ್ಷ್ಮೀ(34) ಹಾಗೂ ಯಾದಗಿರಿ ಜಿಲ್ಲೆ, ಅಫಜಲಪುರ ನಿವಾಸಿ ಮಹದೇವಪ್ಪ(44) ಮೃತ ದುರ್ದೈವಿಗಳು
ಘಟನೆ ವಿವರ; ಬೆಂಗಳೂರಿನ ಬಾಗಲಗುಂಟೆ ನಿವಾಸಿ ಲಕ್ಷ್ಮಿ ಅವರು ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ತಮ್ಮ ಪುತ್ರ ರಂಜಿತ್’ನನ್ನು ನೋಡಲು ಬಂದಿದ್ದರು. ಈ ವೇಳೆ ಮಧ್ಯಾಹ್ನದ ಊಟದ ನಂತರ ರಂಜಿತ್ ಕೈ ತೊಳೆಯಲು ಮಠದ ಗೋಕಟ್ಟೆ ಬಳಿ ತೆರಳಿದ್ದಾನೆ. ಆಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ರಂಜಿತ್’ನ ಸ್ನೇಹಿತರಾದ ಶಂಕರ್ ಮತ್ತು ಹರ್ಷಿತ್ ಆತನನ್ನು ಕಾಪಾಡಲು ಕೂಡಲೇ ನೀರಿಗೆ ಜಿಗಿದಿದ್ದಾರೆ. ಆದರೆ ಈಜು ಬಾರದೇ ಮುಳುಗಲಾರಂಭಿಸಿದ್ದಾರೆ. ಆಗ ಮಕ್ಕಳನ್ನು ರಕ್ಷಿಸಲು ಲಕ್ಷ್ಮಿ ನೀರಿಗೆ ಇಳಿದಿದ್ದು, ಆಕೆಯೂ ನೀರಲ್ಲಿ ಮುಳುಗಿದ್ದಾರೆ. ಆಗ ಅಲ್ಲಿಯೇ ಇದ್ದ ಮಹದೇವಪ್ಪ ಇವರುಗಳನ್ನು ರಕ್ಷಿಸಲು ಗೋಕಟ್ಟೆಗೆ ಜಿಗಿದಿದ್ದಾರೆ. ಆದರೆ ದುರಾದೃಷ್ಟವಶಾತ್ ರಂಜಿತ್’ನನ್ನು ಉಳಿಸಲು ಮುಂದಾಗಿದ್ದ ಈ ನಾಲ್ವರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ರಂಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
(ನಾಲ್ವರನ್ನು ಬಲಿ ಪಡೆದ ಗೋಕಟ್ಟೆ)
ಗೃಹಲಕ್ಷ್ಮಿ ಪುನಃ ಮುಂದೂಡಿಕೆ; ಸಿಎಂ ಸಿದ್ದರಾಮಯ್ಯ ಹೇಳಿಕೆ
+ There are no comments
Add yours