ಲೋಕಾಯುಕ್ತ, ಕೋರ್ಟು ಎಂದು ಅಲೆಯಬೇಕಾಗುತ್ತದೆ, ಹುಷಾರ್!; ಪಿಡಿಒಗಳಿಗೆ ವಾರ್ನಿಂಗ್
Tumkurnews
ತುಮಕೂರು: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾನೂನಿನ ಅಡಿಯಲ್ಲಿಯೇ ಸಹಾಯ ಮಾಡಬೇಕು. ಸಣ್ಣ ವ್ಯತ್ಯಾಸ ಕಂಡು ಬಂದರೂ ಲೋಕಾಯುಕ್ತ, ಕೋರ್ಟು ಎಂದು ಅಲೆಯುವುದರ ಜೊತೆಗೆ, ನಿರಂತರವಾಗಿ ಸಮಸ್ಯೆಗೆ ಒಳಗಾಗಬೇಕಾಗುತ್ತದೆ ಎಂದು ಶಾಸಕ ಬಿ.ಸುರೇಶಗೌಡ ಪಿಡಿಓಗಳಿಗೆ ಎಚ್ಚರಿಕೆ ನೀಡಿದರು.
ತಾ.ಪಂ ಸಭಾಂಗಣದಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಡಿಓಗಳ ಸಭೆ ನಡೆಸಿ ಮಾತನಾಡಿದ ಅವರು, ಯಾರಿಗೆ ಸಹಾಯ ಮಾಡಬೇಕೆಂದಿದ್ದರು ಕಾನೂನಿನ ಅಡಿಯಲ್ಲಿ ಸಹಾಯಮಾಡಿ, ಅನುಕಂಪ, ಒತ್ತಡಕ್ಕೆ ಒಳಗಾಗಿ ಕಾನೂನು ಮೀರಿದರೆ, ಸಹಾಯ ಪಡೆದವರೇ ಬ್ಲಾಕ್ ಮೇಲ್ ಮಾಡುವ ಸಾಧ್ಯತೆ ಇದೆ. ಹಾಗಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕಳೆದ ಎರಡು ತಿಂಗಳ ಹಿಂದೆ ನಡೆದ ಪಿಡಿಓಗಳ ಸಭೆಯಲ್ಲಿ ಪ್ರತಿ ಗ್ರಾಮಪಂಚಾಯಿತಿಯಲ್ಲಿ
ಬಡವರಿಗೆ ನಿವೇಶನ ನೀಡಲು ಜಾಗ ಗುರುತಿಸುವುದು, ಸ್ಮಶಾನಕ್ಕೆ ಜಾಗ ಗುರುತಿಸುವುದು, ಕಸ ವಿಲೇವಾರಿ ಘಟಕ ನಿರ್ಮಾಕ್ಕೆ ಜಾಗ ಗುರುತಿಸುವಂತೆ ನಿರ್ದೇಶನ ನೀಡಲಾಗಿತ್ತು. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಆಗಿದೆ. ಕೆಲವು ಗ್ರಾಮಪಂಚಾಯಿತಿಗಳಲ್ಲಿ ಕೆಲಸ ಆಗಿಲ್ಲ. ಇದು ಕಡೆಯ ವಾರ್ನಿಂಗ್, ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು
ಸ್ಮಶಾನಕ್ಕೆ ಜಾಗ ಗುರುತಿಸುವಲ್ಲಿ ಯಾವುದೇ ಕಾರ್ಯಕ್ರಮಗಳನ್ನು ರೂಪಿಸದ ಮಲ್ಲಸಂದ್ರ ಗ್ರಾಮಪಂಚಾಯಿತಿ ಪಿಡಿಓಗೆ ಕಾರಣ ಕೇಳಿ ನೋಟೀಸ್ ನೀಡುವಂತೆ ಇಓ ಹರ್ಷಕುಮಾರ್ ಅವರಿಗೆ ಸೂಚಿಸಿದ ಶಾಸಕರು, ಸೂಚನೆ ನೀಡಿ ಎರಡು ತಿಂಗಳು ಕಳೆದರೂ ಕ್ರಮ ಕೈಗೊಳ್ಳಲು ವಿಫಲವಾಗಿರುವ ಮಲ್ಲಸಂದ್ರ ಗ್ರಾ.ಪಂ ಪಿಡಿಓ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಡವರಿಗೆ ನೆರವಾಗದಿದ್ದರೆ ಇಷ್ಟೊಂದು ವ್ಯವಸ್ಥೆ ಇದ್ದು ಏನು ಪ್ರಯೋಜನ, ಸಭೆ ನಡೆಸಿದ್ದರ ಫಲ ಏನು ಎಂದ ಶಾಸಕರು, ಪಿಡಿಓ ನೀಡುವ ಉತ್ತರದ ಮೇಲೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಸೂಚಿಸಿದರು.
ಸರಕಾರಿ ಗೋಮಾಳ ಒತ್ತುವರಿಯಾಗಿದ್ದರೆ ಸರ್ವೆ ಮಾಡಿಸಿ ಒತ್ತುವರಿ ತೆರವಿಗೆ ಮುಂದಾಗುವಂತೆ ಪಿಡಿಓಗಳಿಗೆ ಸೂಚಿಸಿದ ಶಾಸಕರು, ದಾಖಲೆಗಳನ್ನು ಇಟ್ಟುಕೊಂಡು ಕೆಲಸ ಮಾಡಿ. ನೂರಾರು ಜನರು ಮನೆಯಿಲ್ಲದೆ ಬೀದಿಯಲ್ಲಿದ್ದಾರೆ. ಅವರಿಗೆ ಸೂರು ನೀಡುವುದು ನಿಮ್ಮ ಕರ್ತವ್ಯ ಆಗಬೇಕು. ಎಲ್ಲವೂ ಕಾನೂನಿನ ಅಡಿಯಲ್ಲಿಯೇ ನಡೆಯಬೇಕೆಂದು ತಾಕೀತು ಮಾಡಿದರು.
ಗ್ರಾಮಪಂಚಾಯಿತಿಯ ಪರಿಶಿಷ್ಟ ಜಾತಿಯ ಜನರು ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದು, ಪಂಚಾಯತಿಗೆ ವರ್ಗಾವಣೆಯಾಗದ ಕಾರಣ ಅವರಿಗೆ 11 ಬಿ ಖಾತೆ ನೀಡುತ್ತಿದ್ದು ಸಾಕಷ್ಟು ತೊಂದರೆಯಾಗುತ್ತಿದ್ದು, ಇದೇ ರೀತಿ ಗ್ರಾಮಾಂತರ ವ್ಯಾಪ್ತಿ ಹಲವು ಗ್ರಾ.ಪಂಗಳಲ್ಲಿ ಸಮಸ್ಯೆ ಇದ್ದು, ಇದನ್ನು ಬಗೆಹರಿಸಲು ಕಂದಾಯ ಮಂತ್ರಿಗಳು, ಸರಕಾರದ ಮುಖ್ಯಕಾರ್ಯದರ್ಶಿ ಹಾಗು ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಪತ್ರ ಬರೆದು ಕ್ಲಾರಿಪಿಕೇಷನ್ ಪಡೆದುಕೊಳ್ಳುವಂತೆ ಇಓ ಅವರಿಗೆ ಸೂಚಿಸಿದ ಶಾಸಕರು, ಸದನದಲ್ಲಿಯೂ ಈ ವಿಚಾರ ಪ್ರಸ್ತಾಪಿಸುವ ಭರವಸೆ ನೀಡಿದರು.
ಬೆಳ್ಳಾವೆ ಗ್ರಾಮದಲ್ಲಿ ಒಂದು ಸರಕಾರಿ ಪದವಿ ಕಾಲೇಜು ನಿರ್ಮಾಣಕ್ಕೆ ಅಗತ್ಯವಿರುವ ಸುಮಾರು ಹತ್ತು ಎಕರೆ ಜಾಗವನ್ನು ಗುರುತಿಸುವಂತೆ ಬೆಳ್ಳಾವೆ ಪಿಡಿಓ ಅವರಿಗೆ ಸೂಚಿಸಿದ ಶಾಸಕ ಬಿ.ಸುರೇಶಗೌಡ, ಆ ಭಾಗದಲ್ಲಿ ಬಡವರ ಕೂಲಿ ಕಾರ್ಮಿಕರ ಮಕ್ಕಳಿಗೆ ಪದವಿ ಕಾಲೇಜಿನ ಅಗತ್ಯವಿದೆ. ಹಾಗಾಗಿ ತುರ್ತಾಗಿ ಜಾಗ ಗರುತಿಸುವಂತೆ ತಾಕೀತು ಮಾಡಿದರು.
ಸಿರಿವರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕೆಲ ರಾಜಕೀಯ ಪಕ್ಷಗಳ ಸಭೆ ನಡೆದಿರುವ ದೂರು ಬಂದಿದೆ.ಗ್ರಾ.ಪಂ ಜಾಗದಲ್ಲಿ ಯಾವುದೇ ಪಕ್ಷದ ಸಭೆ ನಡೆದರು ತಪ್ಪು, ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ನಾನು ಗ್ರಾ.ಪಂ ಆಡಳಿತದಲ್ಲಿ ಮೂಗು ತೂರಿಸುವುದಿಲ್ಲ. ಅದಕ್ಕೆಂದೆ ಪ್ರತ್ಯೇಕ ಸ್ವತಂತ್ರ ವ್ಯವಸ್ಥೆ ಇದೆ. ಕೋ ಅರ್ಡಿನೇಟ್ ಮಾಡುವುದಷ್ಟೆ ನಮ್ಮ ಕೆಲಸ. ಜನರಿಗೆ ಕುಡಿಯುವ ನೀರು, ರಸ್ತೆ, ಚರಂಡಿ, ಘನತಾಜ್ಯ ವಿಲೇವಾರಿ, ಬಡ ಜನರಿಗೆ ನಿವೇಶನ, ಸೂರು ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂಬುದೆ ನಮ್ಮ ಅದ್ಯತೆ. ಈ ನಿಟ್ಟಿನಲ್ಲಿ ಕ್ರಮವಹಿಸಿ, ಸಾಧ್ಯವಾದಷ್ಟು ಸಮಸ್ಯೆ ರಹಿತ ಪಂಚಾಯಿತಿ ರೂಪಿಸಿ, ಸಮಸ್ಯೆಗೆ ಹೆದರಿ, ವರ್ಗಾವಣೆ ಮೊರೆ ಹೋಗಬೇಡಿ ಎಂದು ಶಾಸಕ ಸುರೇಶಗೌಡ ಸಲಹೆ ನೀಡಿದರು.
ಆರೋಗ್ಯ ಇಲಾಖೆಯಲ್ಲಿ ಉದ್ಯೋಗ; ಆಕಾಂಕ್ಷಿಗಳಿಗೆ ಶುಭ ಸುದ್ದಿ
ಕೌಶಲ್ಯಾಭಿವೃದ್ದಿ ಸಂಸ್ಥೆಯಿಂದ ಉದ್ಯೋಗ ಮೇಳ ನಡೆಸುವ ಸುತ್ತೋಲೆ ಬಂದಿದ್ದು, ಎಲ್ಲಾ ಪಿಡಿಓಗಳು ತಮ್ಮ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿದ್ಯಾವಂತ ನಿರುದ್ಯೋಗಿಗಳ ಪಟ್ಟಿ ನೀಡುವಂತೆ ಸೂಚಿಸಿದ ಶಾಸಕರು, ಮುಂದಿನ ಆಗಸ್ಟ್ ನಲ್ಲಿ ಸುಮಾರು ಒಂದು ನೂರು ಕಂಪನಿಗಳು ಉದ್ಯೋಗಕ್ಕಾಗಿ ಸಂದರ್ಶನ ನಡೆಸುತ್ತಿದ್ದು, ಈ ವಿಷಯ ಜನರಿಗೆ ತಿಳಿಯುವಂತೆ ಮಾಡಬೇಕೆಂದರು.
ಸಭೆಯಲ್ಲಿ ಇಓ ಹರ್ಷಕುಮಾರ್, ಸಹಾಯಕ ನಿರ್ದೇಶಕ ಮಂಜುನಾಥ್, ಗ್ರಾಮಾಂತರ ವ್ಯಾಪ್ತಿಯ ಎಲ್ಲಾ ಪಿಡಿಓಗಳು ಪಾಲ್ಗೊಂಡಿದ್ದರು.
ಭೂಮಿ ಸಂಬಂಧಿತ ಪ್ರಕರಣಗಳಿಗೆ ಶೀಘ್ರ ಪರಿಹಾರ ಒದಗಿಸಿ; ಶಿವಾನಂದ ಬಿ.ಕರಾಳೆ
+ There are no comments
Add yours