ಸೂಕ್ಷ್ಮವಲಯದಲ್ಲಿ ಬೆಟ್ಟ ಅಗೆತ; ಅಧಿಕಾರಿಗಳೇ ನೇರ ಪಾಲುದಾರರು; ದೇವರಾಯನದುರ್ಗ ಬೆಟ್ಟದಲ್ಲಿ ಜೆಸಿಬಿ ಘರ್ಜನೆ
Tumkurnews
ತುಮಕೂರು; ಐತಿಹಾಸಿಕ ಪ್ರವಾಸಿ ತಾಣ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಗುಡ್ಡ ಬಗೆದು ಜೀವ ವೈವಿದ್ಯತೆ ನಾಶದ ಜತೆಗೆ ಸರ್ಕಾರಿ ಗೋಮಾಳವನ್ನು ಅತಿಕ್ರಮಿಸುವ ದೊಡ್ಡ ಹುನ್ನಾರ ನಡೆದಿದೆ. ಇದರಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ, ಪರಿಸರ ಹೋರಾಟಗಾರ ಜ್ಞಾನಸಿಂಧುಸ್ವಾಮಿ ಆರೋಪಿಸಿದ್ದಾರೆ.
ಊರ್ಡಿಗೆರೆ ಹೋಬಳಿಯಲ್ಲಿ ಬರುವ ದುರ್ಗದಹಳ್ಳಿಯ ಸರ್ವೇ ನಂ.4ರ ಗೋಮಾಳಲ್ಲಿರುವ ಸುಮಾರು 49 ಎಕರೆ ಪ್ರದೇಶವನ್ನು ಅಕ್ರಮವಾಗಿ ಜೆಸಿಬಿಯಿಂದ ಅಗೆಯಲಾಗಿದೆ. ಹಣವಿರುವ ಕುಳಗಳಿಂದ ಅಧಿಕಾರಿಗಳೂ ಇದರಲ್ಲಿ ಶಾಮಿಲಾಗಿದ್ದು, ಈಗಾಗಲೇ ರೆಸಾರ್ಟ್ ನಿರ್ಮಿಸಲು ನೂರಾರು ಗಿಡಗಳನ್ನು ಅನುಮತಿ ಪಡೆಯದೇ ಕಡೆದು ಹಾಕಿದ್ದಾರೆ. ಈ ಕುರಿತು ಊರಿನ ಯಾರಿಗೂ ಮಾಹಿತಿ ಇಲ್ಲ. ಸುಮಾರು 15 ದಿನಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಅಕ್ರಮವಾಗಿ ನಿರ್ಮಾಣವಾಗುತ್ತಿರುವ ರೆಸಾರ್ಟ್‌ಗೆ ಅಧಿಕಾರಿಗಳು ಕೃಪಾಕಟಾಕ್ಷವಿದೆ ಎಂದು ಆರೋಪಿಸಿದರು.
ಈ ಸೂಕ್ಷ ಸೂಕ್ಷ್ಮ ಜೀವವೈವಿದ್ಯತೆ ಇರುವ ಪ್ರದೇಶದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಲು ಅಧಿಕಾರಿಗಳು ತೆಗೆದುಕೊಂಡ ಲಂಚವೆಷ್ಟು ಎಂಬುವುದನ್ನು ಬಹಿರಂಗಪಡಿಸಬೇಕು. ಸಾವಿರಾರು ಜಾತಿಯ ಸಸ್ಯಗಳನ್ನು ನಾಶ ಮಾಡಲಾಗಿದೆ. ಪ್ರವಾಸಿ ತಾಣವನ್ನು ಗುರಿಯಾಗಿಸಿ ಲಾಭ ಕಂಡುಕೊಳ್ಳುವ ಲಂಚಕೋರ ಅಧಿಕಾರಿಗಳು ಯಾರೆಂದು ಜಿಲ್ಲಾಡಳಿತ ಬಹಿರಂಗಪಡಿಸಬೇಕು. ಯಾವುದೇ ಒಂದು ಜಾಗದಲ್ಲಿ ಅಭಿವೃದ್ಧಿ ಅಥವಾ ಕಟ್ಟಡ ನಿರ್ಮಾಣಕ್ಕೆ ಗ್ರಾಪಂ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಅನುಮತಿ ಕೊಡಬೇಕು. ಇಲ್ಲಿ ಕಂದಾಯ ಅಧಿಕಾರಿಗಳೇ ಶಾಮಿಲಾಗಿರುವ ಎಲ್ಲ ಸಾಧ್ಯತೆಗಳಿದ್ದು, ಅರಣ್ಯ ಇಲಾಖೆಗೂ ಹಣ ವರ್ಗಾವಣೆಯಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಜೀವವೈವಿದ್ಯತೆ ನಾಶ; ದೇವರಾಯನದುರ್ಗದ ತಪ್ಪಲಿನಲ್ಲಿ ಬರುವ ದುರ್ಗದಹಳ್ಳಿಯು ಸಂರಕ್ಷಿತ ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮವಾಗಿದೆ. ಈ ಗ್ರಾಮದ ಸುತ್ತಮುತ್ತಲಿನಲ್ಲಿ ವಾಸಿಸುವ ಕಾಡುಪಾಪ, ಚಿರತೆ, ಮೊಲ, ಉಡ, ಕಾಡುಬೆಕ್ಕು, ಹೆಬ್ಬಾವು, ಸುಮಾರು 30ಕ್ಕೂ ಹೆಚ್ಚು ಬಗೆಯ ಹಾವುಗಳು, 10ಕ್ಕಿಂತ ಹೆಚ್ಚು ವಿಧದ ಕಪ್ಪೆಗಳು, 163 ಬಗೆಯ ಪಕ್ಷಿಗಳು, 7 ಬಗೆಯ ಚೇಳುಗಳು, ಮುಳ್ಳು ಹಂದಿ, ಕಾಡು ಹಂದಿ, ಕರಡಿ ಸೇರಿ ನೂರಾರು ಜಾತಿಯ ಗಿಡ-ಮರಗಳು ಇಲ್ಲಿವೆ. ಜತೆಗೆ ನವಿಲುಗಳ ವಾಸಸ್ಥಾನವೂ ಇದ್ದು, ರೆಸಾರ್ಟ್ ನಿರ್ಮಾಣದಿಂದ ಇವುಗಳಿಗೆ ಕಂಟಕ ಎದುರಾಗುತ್ತದೆ. ಈಗಾಗಲೇ ನವಿಲುಗಳ ಮೊಟ್ಟೆಗಳು ನಾಶವಾಗಿವೆ. ಅಷ್ಟಲ್ಲದೇ ಭಾರತದಲ್ಲಿ ಅಪರೂಪವಾಗಿ ಕಂಡು ಬರುವ ಜೇಡ ಪ್ರಬೇಧವೂ ಈ ದೇವರಾಯನದುರ್ಗದ ಅರಣ್ಯದಲ್ಲಿವೆ. ಅಭಿವೃದ್ಧಿಯ ಹೆಸರಿನಲ್ಲಿ ಮತ್ತು ಕಾನೂನು ಬಾಹಿರ ಚಟುವಟಿಕೆಯಿಂದ ಇಲ್ಲಿನ ಜೀವವೈವಿದ್ಯಕ್ಕೆ ಬಹುದೊಡ್ಡ ಆಪತ್ತು ಎದುರಾಗಿದೆ ಜಿಲ್ಲಾಧಿಕಾರಿ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗ್ರಾಮಸ್ಥರೊಂದಿಗೆ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದು ಜ್ಞಾನಸಿಂಧುಸ್ವಾಮಿ ಎಚ್ಚರಿಸಿದರು.
ಗ್ರಾಮಸ್ಥ ರಾಮು ಮಾತನಾಡಿ, ನಮ್ಮ ತಾತನ ಕಾಲದಿಂದಲೂ ನಾವು ಈ ಅರಣ್ಯಪ್ರದೇಶದಲ್ಲಿ ದನಗಳನ್ನು ಮೇಯಿಸುತ್ತಿದ್ದೇವೆ. ನಾವು ದನ ಮೇಯಿಸುವಾಗ ಯಾರಾದರೂ ಅಧಿಕಾರಿಗಳು ನಮ್ಮನ್ನು ಕಂಡರೆ ಹಿಡಿದು ನಮ್ಮಲ್ಲಿರುವ ಕುಡುಗೋಲು, ಕೊಡಲಿ ಇನ್ನೀತರೆ ವಸ್ತುಗಳನ್ನು ಕಿತ್ತುಕೊಂಡು ಕಳುಹಿಸಿದ್ದಾರೆ. ಆದರೆ, ಈಗ ಕಾನೂನು ಬಾಹಿರವಾಗಿ ರಾಜಾರೋಷವಾಗಿ ಗುಡ್ಡ ಅಗೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಯು ಇದನ್ನು ಪ್ರಶ್ನಿಸುತ್ತಿಲ್ಲ. ನಮ್ಮ ಕಣ್ಣ ಮುಂದೆ ನಿತ್ಯ ಇರುತ್ತಿದ್ದ ಹಲವು ಜಾತಿಯ ಪಕ್ಷಿಗಳು ವಿನಾಶದ ಅಂಚಿಗೆ ತಲುಪುತ್ತಿವೆ. ಈ ಭಾಗದಲ್ಲಿ ಗುಡ್ಡವನ್ನು ಅಗೆಯುದರಿಂದ ಮುಂದೆ ಗುಡ್ಡ ಕುಸಿತವಾಗಬಹುದು. ಆಗ ಗ್ರಾಮಸ್ಥರಿಗೆ ಏನಾದರೂ ಆದರೆ ಯಾರು ಜವಾವ್ದಾರಿ, ಅರಣ್ಯ ಇಲಾಖೆ ಮತ್ತು ಜಿಲ್ಲಾಧಿಕಾರಿಗಳೇ ಇದಕ್ಕೆ ಹೊಣೆಯಾಗಬೇಕಾಗುತ್ತದೆ. ನಮ್ಮ ಕುರಿಗಳನ್ನು ಮೇಯಿಸುತ್ತಿದ್ದ ಜಾಗದಲ್ಲೇ ರೆಸಾರ್ಟ್‌ನಿರ್ಮಿಸುತ್ತಿದ್ದು, ಕುರಿಗಳಿಗೆ ಹುಲ್ಲು ಇಲ್ಲದಂತಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳೇ ಮಧ್ಯ ಪ್ರವೇಶಿಸಿ ಅಕ್ರಮವಾಗಿ ನಡೆಯುತ್ತಿರುವ ಚಟುವಟಿಕೆಗೆ ತಕ್ಷಣ ಕಡಿವಾಣ ಹಾಕಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಯಾರು ಬೇಕಾದರೂ ಸರ್ಕಾರಿ ಜಾಗ ದೋಚಬಹುದೇ?
ಸರ್ಕಾರಿ ಜಾಗವನ್ನು ಯಾರೂ ಕೆಳಲ್ಲ ಎನ್ನುವ ದೃಷ್ಟಿಯಲ್ಲಿ ಯಾರೂ ಬೇಕಾದರೂ ಲಪಟಾಯಿಸಬಹುದು ಎನ್ನುವ ಹಣವಂತರು ಇದಕ್ಕೆ ಕೈ ಹಾಕಿದ್ದು, ರೆಸಾರ್ಟ್ ನಿರ್ಮಾಣ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಅರಣ್ಯದಲ್ಲಿ ಅಧಿಕಾರಿಗಳ ಬಲ ಇಲ್ಲದೇ ಒಂದು ಹುಲ್ಲುಕಡ್ಡಿಯನ್ನೂ ಕೀಳಲು ಸಾಧ್ಯವಿಲ್ಲ. ಸೂಕ್ಷ್ಮ ಪ್ರದೇಶದಲ್ಲಿ ಈಗಾಗಲೇ ಜೆಸಿಬಿಗಳು ಘರ್ಜಿಸುತ್ತಿವೆ. ಹಣ ವರ್ಗಾವಣೆಯಾಗಿದೆ. ಅಧಿಕಾರಿಗಳಿಗೆ ಲಂಚ ಮುಟ್ಟಿದೆ, ಕಾನೂನು ಬಾಹಿರ ಕೆಲಸ ಆರಂಭವಾಗಿದೆ. ಇದು ಭ್ರಷ್ಟ ಸರ್ಕಾರದ ವ್ಯವಸ್ಥೆಯಲ್ಲಿ ನಡೆಯುವ ಕೆಲಸವಾಗಿದೆ ಎಂದು ಪರಿಸರ ಹೋರಾಟಗಾರ ದೂರಿದರು.
+ There are no comments
Add yours