ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ
Tumkurnews
ತುಮಕೂರು; ಜಿಲ್ಲೆಯಾದ್ಯಂತ ಹಾದು ಹೋಗಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತವಾಗುವ ಸ್ಥಳಗಳನ್ನು ಗುರುತಿಸಿ, ವೈಜ್ಞಾನಿಕ ರೀತಿಯಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸಿ ಅಪಘಾತ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು.
ಅಪಘಾತಗಳಿಗೆ ಕಾರಣವಾಗುವಂತಹ ನ್ಯೂನ್ಯತೆಗಳನ್ನು ಗುರುತಿಸಿ ಪೊಲೀಸ್ ಅಧಿಕಾರಿಗಳು ವರದಿಯನ್ನು ಸಲ್ಲಿಸಿದ್ದು, ವರದಿ ಆಧರಿಸಿ ಇನ್ನೊಂದು ತಿಂಗಳೊಳಗಾಗಿ ಕ್ರಮವಹಿಸಿ ತಮಗೆ ವರದಿ ನೀಡುವಂತೆ ಎನ್‍ಹೆಚ್‍ಎಐ, ಕೆಶಿಪ್, ಪಿ.ಡಬ್ಲ್ಯೂ.ಡಿ., ಕೆ.ಆರ್.ಡಿ.ಸಿ.ಎಲ್. ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿಂದು ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಪಘಾತಗಳು ಸಂಭವಿಸಬಹುದಾದ ಸ್ಥಳಗಳಲ್ಲಿ ಕಡ್ಡಾಯವಾಗಿ ಸೂಚನಾ ಫಲಕಗಳು, ಸೋಲಾರ್ ಬ್ಲಿಂಕರ್ಸ್, ವೈಜ್ಞಾನಿಕವಾದ ಉಬ್ಬುಗಳನ್ನು ಅಳವಡಿಸಬೇಕು ಎಂದರು.
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಕಾಮಗಾರಿ ಪ್ರಾರಂಭಿಸುವುದಕ್ಕಿಂತ ಮುಂಚೆ ಅದಕ್ಕೆ ಪರ್ಯಾಯವಾಗಿ ಚಲಿಸಬೇಕಾದ ರಸ್ತೆಗಳಲ್ಲಿ ಸೂಚನಾ ಫಲಕಗಳು, ರೇಡಿಯಂ ಸ್ಟಿಕರ್’ಗಳನ್ನು ಮೊದಲೆ ಅಳವಡಿಸಬೇಕು ಎಂದು ಹೇಳಿದರು.
ಗ್ರಾಮೀಣ ಭಾಗದ ರಸ್ತೆಗಳು ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಕಡೆಗಳಲ್ಲಿ ವೈಜ್ಞಾನಿಕವಾದ ಉಬ್ಬುಗಳನ್ನು, ಬ್ಲಿಂಕರ್ ಹಾಗೂ ಸ್ಟ್ರೀಟ್ ಹೈಮಾಸ್ಟ್ ಲೈಟ್‍ಗಳನ್ನು ಅಳವಡಿಸಬೇಕು, ಇಲ್ಲವಾದರೆ ರಾತ್ರಿ ವೇಳೆಯಲ್ಲಿ ಅಪಘಾತಗಳು ಸಂಭವಿಸುತ್ತವೆ ಎಂದು ತಿಳಿಸಿದರು.
ರಸ್ತೆ ಬದಿಗಳಲ್ಲಿ ಸಂಚಾರಕ್ಕೆ ತೊಂದರೆಯಾಗುವ ಗಿಡ ಮರಗಳನ್ನು ಕಾಲ ಕಾಲಕ್ಕೆ ತೆರವುಗೊಳಿಸಬೇಕು. ವಾಹನ ಚಾಲಕರಿಗೆ ಕಾಣುವ ರೀತಿಯಲ್ಲಿ ಸಂಚಾರಿ ಚಿಹ್ನೆಗಳನ್ನು ಅಳವಡಿಸಬೇಕು, ಮಳೆಗಾಲ ನಿಮಿತ್ತ ರಸ್ತೆಗಳು ದುರಸ್ತಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತವೆ. ಆದ್ದರಿಂದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ವೈಟ್ ಟಾಪಿಂಗ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹೆದ್ದಾರಿಗಳಲ್ಲಿ ರಾತ್ರಿ ವೇಳೆಯಲ್ಲಿ ಭಾರಿ ಗಾತ್ರದ ವಾಹನಗಳು ದುರಸ್ಥಿಗೊಳಗಾದ ವಾಹನಗಳನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಸೂಚಿಸಿದರಲ್ಲದೆ, ಟೋಲ್ ಪ್ಲಾಜಾದ ವ್ಯಾಪ್ತಿಯಲ್ಲಿರುವ ಅಂಬ್ಯುಲೆನ್ಸ್ ಹಾಗೂ ಟೋಯಿಂಗ್ ವಾಹನ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಿರಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೆಲವು ಕಡೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಿಲ್ಲದೆ ಎಲ್ಲೆಂದರಲ್ಲಿ ಬಸ್‍ಗಳನ್ನು ನಿಲುಗಡೆಗೊಳಿಸಲಾಗುತ್ತಿದೆ, ಆದ್ದರಿಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.
ಹೆದ್ದಾರಿಗೆ ಹೊಂದಿಕೊಂಡಿರುವ ಶಾಲಾ ಕಾಲೇಜುಗಳ ಪರಿಮಿತಿಯಲ್ಲಿ ನಿಗದಿತ ವೇಗ ನಿಯಂತ್ರಣ ಫಲಕಗಳನ್ನು ಹಾಗೂ ರಸ್ತೆಯ ಎರಡು ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ತಿಪಟೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ. ಮರಿಯಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹೇಮಲತಾ, ಸುರೇಶ್ ರೆಡ್ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ತುಮಕೂರುವರೆಗೂ ಮೆಟ್ರೋ ವಿಸ್ತರಣೆ!; ಎಲ್ಲಿಯವರೆಗೆ ಬರುತ್ತೆ ಗೊತ್ತೇ?
+ There are no comments
Add yours