ಸೇವೆ ಖಾಯಂ ಮಾಡದ ಸರ್ಕಾರ; ತುಮಕೂರಿನಲ್ಲಿ ನೀರು ಪೂರೈಕೆ ಸ್ಥಗಿತ!

1 min read

Tumkurnews
ತುಮಕೂರು; ಸೇವೆ ಖಾಯಂ ಅಥವಾ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ಮಹಾನಗರ ಪಾಲಿಕೆಯ ಜಿಲ್ಲಾ ನೀರು ಸರಬರಾಜು ನೌಕರರ ಸಂಘ, ರಾಜ್ಯ ಮುನಿಸಿಫಲ್ ಕಾರ್ಮಿಕರ ಸಂಘ ಹಾಗೂ ವಾಹನ ಚಾಲಕರ ಸಂಘದ ವತಿಯಿಂದ ನಗರದಲ್ಲಿ ನೀರು ಪೂರೈಕೆ ಸೇರಿದಂತೆ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ ಪಾಲಿಕೆ ಕಚೇರಿ ಆವರಣದಲ್ಲಿ ಮುಷ್ಕರ ನಡೆಸಲಾಯಿತು.
ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಪೆಂಡಾಲ್ ಹಾಕಿಕೊಂಡು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿರುವ ಗುತ್ತಿಗೆ, ಹೊರ ಗುತ್ತಿಗೆಯ ನೀರು ಸರಬರಾಜು ನೌಕರರು, ವಾಹನ ಚಾಲಕರು ಹಾಗೂ ಮುನಿಸಿಫಲ್ ಕಾರ್ಮಿಕರು ಬಜೆಟ್‍ನಲ್ಲಿ ತಮ್ಮ ಸೇವೆಗಳನ್ನು ಖಾಯಂಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂಬ ನಂಬಿಕೆ, ಆಶಾಭಾವನೆ ಹೊಂದಿದ್ದೆವು. ಆದರೆ ಸರ್ಕಾರ ನಮ್ಮ ಸೇವೆ ಖಾಯಮಾತಿಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಅನಿರ್ಧಿಷ್ಠಾವಧಿ ಹೋರಾಟ ಅನಿವಾರ್ಯವಾಗಿದೆ ಎಂದರು.
ಎಲ್ಲಾ ಗುತ್ತಿಗೆ, ಹೊರ ಗುತ್ತಿಗೆ ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನದ ಅಡಿಯಲ್ಲಿ ದುಡಿಯುತ್ತಿರುವ ಎಲ್ಲಾ ಗುತ್ತಿಗೆ, ಹೊರ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರು, ನೀರು ಸರಬರಾಜು ವಿಭಾಗದ ವಾಹನ ಚಾಲಕರು, ಒಳ ಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರು ಹಾಗೂ ಪಾರ್ಕ್, ಸ್ಮಶಾನ, ಘನತ್ಯಾಜ್ಯ ಘಟಕ, ಯುಜಿಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರ ಸೇವೆಗಳನ್ನು ಖಾಯಂ ಮಾಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ, ಕಳೆದ 20-25 ವರ್ಷಗಳಿಂದ ನಿರಂತರವಾಗಿ ನೀರು ಸರಬರಾಜು ಸೇವೆ ಮಾಡಿಕೊಂಡು ಬಂದಿದ್ದೇವೆ. ಬಜೆಟ್‍ನಲ್ಲಿ 210 ಜನರ ಸೇವೆ ಖಾಯಂ ಮಾಡುವಂತೆ ಮುಖ್ಯಮಂತ್ರಿಗಳಿಗೆ 3-4 ಬಾರಿ ಸಿಎಂಗೂ ಮನವಿ ಮಾಡಿದ್ದೇವು. ಆ ಸಂದರ್ಭದಲ್ಲಿ ನೇರ ಪಾವತಿ ಅಥವಾ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದಾಗಿ ಹೇಳಿದ್ದರು. ಆದರೆ ಯಾವುದೇ ಭರವಸೆ ಈಡೇರಿಲ್ಲ. ಹಾಗಾಗಿ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿದ್ದೇವೆ. ಸೇವೆ ಖಾಯಮಾತಿ ಮಾಡಬೇಕು ಅಥವಾ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು.
ವಾಹನ ಚಾಲಕರ ಘಟಕದ ಅಧ್ಯಕ್ಷ ಪ್ರಕಾಶ್ ಮಾತನಾಡಿ, ನಾವು ಸಹ ಕಳೆದ 25 ವರ್ಷಗಳಿಂದ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದೇವೆ. ನಮಗೂ ಯಾವುದೇ ರೀತಿಯ ಸೇವಾ ಭದ್ರತೆ ಇಲ್ಲ. ಹಲವು ಬಾರಿ ಮನವಿ ಮಾಡಿದರೂ ಸಹ ಬೇಡಿಕೆ ಈಡೇರಿಲ್ಲ. ಬೇಡಿಕೆ ಈಡೇರುವವರೆಗೂ ಹೋರಾಟ ಮಾಡುತ್ತೇವೆ. ನೇರ ಪಾವತಿಯಾಗಬೇಕು ಅಥವಾ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲದು ಎಂದರು.
ಇಂದಿನಿಂದ ಪಾಲಿಕೆಯ ಎಲ್ಲಾ ವಿಭಾಗಗಳ ಗುತ್ತಿಗೆ, ಹೊರ ಗುತ್ತಿಗೆ ನೌಕರರು ಅನಿರ್ಧಿಷ್ಠಾವಧಿ ಧರಣಿ ಕೈಗೊಂಡಿರುವುದರಿಂದ ನಗರದ ಜನರಿಗೆ ಕುಡಿಯುವ ನೀರು, ಕಸ, ಯುಜಿಡಿ, ಸ್ವಚ್ಚತೆ ಸಮಸ್ಯೆಗಳು ಎದುರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದಷ್ಟು ಬೇಗ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಈ ನೌಕರರ ಸಮಸ್ಯೆ ಬಗೆಹರಿಸಲು ಮುಂದಾಗಬೇಕಾಗಿದೆ.

ಕಡ್ಡಾಯವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು; ಅಧಿಕಾರಿಗಳಿಗೆ ಡಿಸಿ ಸೂಚನೆ

About The Author

You May Also Like

More From Author

+ There are no comments

Add yours