ಜನವರಿ 16ರಂದು ಕಾಂಗ್ರೆಸ್’ನಿಂದ ‘ನಾನೂ ನಾಯಕಿ’; ಪ್ರಿಯಾಂಕ ಗಾಂಧಿ ಆಗಮನ

1 min read

Tumkurnews
ತುಮಕೂರು; ಬೆಂಗಳೂರಿನಲ್ಲಿ ಜನವರಿ 16 ರಂದು ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕ ಆಯೋಜಿಸಿರುವ “ನಾನು ನಾಯಕಿ” ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕಗಳ ಸಕ್ರಿಯ ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರಾಜಣ್ಣ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ನಾನು ನಾಯಕಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚಿನ ಅದ್ಯತೆ ನೀಡಿರುವುದನ್ನು ನಾವು ಕಾಣಬಹುದಾಗಿದೆ. ಉಕ್ಕಿನ ಮಹಿಳೆ ಎಂದು ಕರೆಯಿಸಿಕೊಂಡಿರುವ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹೆಸರು ಕೇಳಿದರೆ ಇಂದಿಗೂ ಮೈ ನವಿರೇಳುತ್ತದೆ. ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಮಹಿಳೆಯರನ್ನು ಸಂಘಟಿಸುವ ನಿಟ್ಟಿನಲ್ಲಿ ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ನಿಟ್ಟಿನಲ್ಲಿ ಜನವರಿ 16ರ ಸೋಮವಾರ ನಾನು ನಾಯಕಿ ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ಪಾಲ್ಗೊಳ್ಳಲಿದ್ದು, ಸಕ್ರಿಯ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಜಿಲ್ಲಾ, ತಾಲೂಕು ಘಟಕಗಳ ಮಹಿಳಾ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದು ಕೋರಿದರು.
ರಾಜ್ಯ ಮತ್ತು ರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳಿಂದ ದೇಶದ ಎಲ್ಲಾ ರಂಗಗಳಲ್ಲಿಯೂ ದುಡಿದು ಸೈ ಎನಿಸಿಕೊಂಡ ಮಹಿಳೆಯರು ಅಡುಗೆ ಮನೆಯನ್ನು ನಿಭಾಯಿಸಲಾಗದೆ ಕಂಗಾಲಾಗಿದ್ದಾರೆ. ಅಡುಗೆ ಎಣ್ಣೆ, ಅಡುಗೆ ಅನಿಲ ಬೆಲೆ ಹೆಚ್ಚಳ, ದಿನಸಿ ಪದಾರ್ಥಗಳ ಬೆಲೆ ಹೆಚ್ಚಳ ಸೇರಿದಂತೆ ಅಗತ್ಯವಸ್ತುಗಳ ಬೆಲೆಗಳಿಂದ ಮಹಿಳೆಯರು ತತ್ತರಿಸಿ ಹೊಗಿದ್ದಾರೆ. ತನ್ನ ಮಕ್ಕಳು, ಗಂಡನಿಗೆ ರುಚಿಕರ ಮತ್ತು ಪೌಷ್ಠಿಕ ಆಹಾರ ಮಾಡಿ ಬಡಿಸಬೇಕೆಂದರೂ ದುಡಿದ ಹಣ ಸಾಕಾಗುತ್ತಿಲ್ಲ. ಜನ ಸಾಮಾನ್ಯರು ದಿನ ದಿನಕ್ಕೆ ಸಾಲದ ಶೂಲಕ್ಕೆ ಸಿಲುಕಿ ನೆಮ್ಮದಿಯ ಜೀವನ ಕಳೆದುಕೊಳ್ಳುತ್ತಿದ್ದಾರೆ. ಆದರೆ ಮೋದಿ ಅಪ್ತರಾಗಿರುವ ಉದ್ಯಮಿಗಳ ಸಂಪತ್ತು ಮಾತ್ರ ಎಗ್ಗಿಲ್ಲದೆ ಏರುತ್ತಿದೆ. ಇವುಗಳಿಗೆ ಕಾರಣ ಎನು ಎಂಬುದನ್ನು ಮಹಿಳೆಯರು ಅರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ಆಯೋಜಿಸಿರುವ ಈ ನಾನು ನಾಯಕಿ ಕಾರ್ಯಕ್ರಮ ದಾರಿದೀಪವಾಗಲಿದೆ ಎಂದು ಗೀತಾರಾಜಣ್ಣ ತಿಳಿಸಿದರು.
ದೇಶದಲ್ಲಿ 2014ಕ್ಕೂ ಹಿಂದೆ ಇದ್ದ ಯುಪಿಎ ಸರಕಾರ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ದಿನಸಿ, ಇಂಧನ ಬೆಲೆಗಳು ಎಷ್ಟಿತ್ತು ಎಂಬುದು ನಾವುಗಳು ತುಲನೆ ಮಾಡಬೇಕಾಗಿದೆ. ಜನರಿಗೆ ಅದರಲ್ಲಿಯೂ ಯುವಕರಿಗೆ ಮತ್ತು ಮಹಿಳೆಯರಿಗೆ ಬಣ್ಣ ಬಣ್ಣದ ಆಶ್ವಾಸ ನೀಡಿ ಅಧಿಕಾರಕ್ಕೆ ಬಂದ ನರೇಂದ್ರಮೋದಿ ನೇತೃತ್ವದ ಸರಕಾರ, ತಾನು ನೀಡಿದ್ದ ಭರವಸೆಗಳಿಗೆ ತದ್ವಿರುದ್ದವಾದ ನೀತಿಗಳನ್ನು ಜಾರಿಗೆ ತಂದು ಬಡವರು, ಹಸಿದವರು, ಮಧ್ಯಮ ವರ್ಗದವರ ಹೊಟ್ಟೆ ಉರಿಸುವ ಕೆಲಸ ಮಾಡುತ್ತಿದೆ. ಹಾಗಾಗಿ ಶೇ.50ರಷ್ಟು ಮತದಾರರಾಗಿರುವ ಮಹಿಳೆಯರು ಒಂದು ಮನಸ್ಸು ಮಾಡಬೇಕಾಗಿದೆ. ಇಂತಹ ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆದು, ಜನರಪರವಾದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಅವಿರತ ಶ್ರಮಿಸ ಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಎಲ್ಲಿಯೇ ಮಹಿಳೆಯರು ಕಾರ್ಯಕ್ರಮ ಆಯೋಜಿಸಿದರೂ ನಾನು ಬರಲು ಸಿದ್ದ ಎಂದು ಗೀತಾರಾಜಣ್ಣ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,ನಾನು ನಾಯಕಿ ಎಂಬುದು ಪ್ರತಿಯೊಬ್ಬ ಮಹಿಳೆಯೂ ಗರ್ವ ಪಡುವಂತಹ ಕಾರ್ಯಕ್ರಮವಾಗಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಮಹಿಳಾ ಶಕ್ತಿ ಏನು ಎಂಬುದನ್ನು ಇಂದಿರಾಗಾಂಧಿಯವರ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದೆ. ಹಾಗಾಗಿಯೇ ಅವರ ಮೊಮ್ಮಗಳಾದ ಪ್ರಿಯಾಂಕಗಾಂಧಿ ಅವರನ್ನು ಈ ಕಾರ್ಯಕ್ರಮಕ್ಕೆ ಕರೆಯಿಸಿ, ಮತ್ತೊಮ್ಮೆ ಮಹಿಳಾ ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ಕೆಲಸವನ್ನು ಕೆಪಿಸಿಸಿ ಮಾಡುತ್ತಿದೆ. ಎಲ್ಲರೂ ಸಕ್ರಿಯವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ, ಕೆಪಿಸಿಸಿ ವೈದ್ಯ ಘಟಕದ ಡಾ.ಫರ್ಹಾನ, ರೈತ ಘಟಕದ ಜಿ.ಆರ್.ಗೌಡ, ಎಸ್ಸಿ ಘಟಕದ ಬಿ.ಜಿ.ಲಿಂಗರಾಜು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತ, ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸುವರ್ಣಮ್ಮ, ಸುವರ್ಣ ಮತ್ತಿತರರು, ಮರಿಚನ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours