ಹೆಚ್‍ಎಎಲ್ ಹೆಲಿಕಾಪ್ಟರ್ ಘಟಕ ಉದ್ಘಾಟನೆ
Tumkurnews
ತುಮಕೂರು; ಜಿಲ್ಲೆಯ ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ ಬಿದರೆಹಳ್ಳ ಕಾವಲ್‍ನಲ್ಲಿ ನಿರ್ಮಾಣಗೊಂಡಿರುವ ಹೆಚ್‍ಎಎಲ್ ಹೆಲಿಕಾಪ್ಟರ್ ಘಟಕವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 13, 2023ರಂದು ಉದ್ಘಾಟಿಸಲಿದ್ದಾರೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದ್ದಾರೆ.
ಸದರಿ ಹೆಚ್‍ಎಎಲ್ ಹೆಲಿಕಾಪ್ಟರ್ ಘಟಕವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ 2016ರಲ್ಲಿ ಶಂಕುಸ್ಥಾಪನೆಗೊಂಡು ಈಗ ಪ್ರಧಾನಮಂತ್ರಿಗಳಿಂದಲೇ ಪ್ರಾರಂಭಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಬಸವರಾಜ್ ತಿಳಿಸಿದ್ದಾರೆ.
ಹೆಚ್.ಎ.ಎಲ್. ಘಟಕವನ್ನು ವಿಸ್ತರಿಸಲು ಹೆಚ್‍ಎಎಲ್‍ನ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದು, ಇದನ್ನು ಕಾರೇಹಳ್ಳಿಯ ಹತ್ತಿರ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ. ಈ ಸ್ಥಳವು ಸೂಕ್ತವಾಗಿರುವುದಿಲ್ಲವಾದ್ದರಿಂದ ಬಿದರೇಹಳ್ಳ ಕಾವಲ್ ಹತ್ತಿರದ ಅರಣ್ಯ ಇಲಾಖೆಗೆ ಸೇರಿದ ಜಾಗವು ಸೂಕ್ತವಾಗಿರುವುದರಿಂದ ಅಲ್ಲಿ ಏರ್ ಪೋರ್ಸ್‍ಸಿಯನ್ನು ಪ್ರಾರಂಭಿಸಲು ಅರಣ್ಯ ಇಲಾಖೆಯಿಂದ 1300 ಎಕರೆ ಜಾಗವನ್ನು ಪಡೆದು ಅರಣ್ಯ ಇಲಾಖೆಗೆ ಪ್ರತಿಯಾಗಿ ಬೇರೆ ಪ್ರದೇಶವನ್ನು ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಇದರಿಂದ ಇಲ್ಲಿ ಸುಮಾರು ಹೆಚ್ಚಿನ ಜನರಿಗೆ ಉದ್ಯೋಗ ದೊರೆಯಲು ಅವಕಾಶವಾಗುತ್ತದೆ ಎಂದು ತಿಳಿಸಿದ್ದಾರೆ.
ಹೆಚ್.ಎ.ಎಲ್. ಘಟಕವು ಪ್ರಾರಂಭಗೊಂಡಾಗ ಇಲ್ಲಿನ ಸುತ್ತಮುತ್ತಲ ರೈತರು ಹೆಲಿಕಾಪ್ಟರ್ ಘಟಕಕ್ಕೆ ತಮ್ಮ ಜಮೀನನ್ನು ಬಿಟ್ಟು ಕೊಟ್ಟಿರುವುದರಿಂದ ಪ್ರತಿಯಾಗಿ ಅವರುಗಳಿಗೆ ಗುಬ್ಬಿ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ನಿರುದ್ಯೋಗಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಉದ್ಯೋಗದ ಅವಕಾಶವನ್ನು ಒದಗಿಸುವುದು ಅವಶ್ಯಕವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 13ರಂದು ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ ಬಿದರೆಹಳ್ಳ ಕಾವಲ್‍ನಲ್ಲಿ ನಿರ್ಮಾಣಗೊಂಡಿರುವ ಹೆಚ್‍ಎಎಲ್ ಹೆಲಿಕಾಪ್ಟರ್ ಘಟಕವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರಾರಂಭೋತ್ಸವ ನಡೆಸಲು ಉದ್ದೇಶಿಸಲಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಬಂಧಿಸಿದ ಕಂದಾಯ ಸಚಿವರು, ರಕ್ಷಣಾ ಮಂತ್ರಿಗಳು, ಮಾರ್ಗದರ್ಶಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈಗಾಗಲೇ ಪೂರ್ಣ ಮಾಹಿತಿಯನ್ನು ಪಡೆದಿದ್ದಾರೆ ಎಂದು ಬಸವರಾಜ್ ತಿಳಿಸಿದ್ದಾರೆ.
+ There are no comments
Add yours