Tumkurnews
ಬೆಂಗಳೂರು; ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020ರ ಅನುಸಾರ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳುವಂತೆ ಸರ್ಕಾರ ರಾಜ್ಯದ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020 ಕುರಿತಾದ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ಎಲ್ಲಾ ವಯಸ್ಸಿನ ಆಕಳು, ಕರು, ಗೂಳಿ, ಎತ್ತು ಹಾಗೂ 13 ವರ್ಷದೊಳಗಿನ ಕೋಣ ಹಾಗೂ ಎಮ್ಮೆಗಳ ಹತ್ಯೆಯನ್ನು ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಡಿ ನಿಷೇಧಿಸಿದೆ. ಅಕ್ರಮ ಸಾಗಾಣಿಕೆಯ ಗೋವುಗಳನ್ನು ವಶಪಡಿಸಿಕೊಂಡ ನಂತರ ಸಾಗಾಣಿಕೆದಾರರ ವಿರುದ್ಧ ಪ್ರಕರಣ ದಾಖಲಿಸಿ, ಗೋವುಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ ರಕ್ಷಿಸಲ್ಪಟ್ಟಂತಹ ಜಾನುವಾರುಗಳನ್ನು ಜಿಲ್ಲೆಯ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಗೋಶಾಲೆಗಳಿಗೆ ಮಾತ್ರ ಸುರಕ್ಷಿತವಾಗಿ ಹಸ್ತಾಂತರಿಸಬೇಕು.
ಕಾಯ್ದೆಯ ಸೆಕ್ಷನ್ 5 ಪ್ರಕಾರ, ಯಾವುದೇ ವ್ಯಕ್ತಿ ಯಾವುದೇ ರೀತಿಯಲ್ಲೂ ರಾಜ್ಯದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಲ್ಲುವ ಉದ್ದೇಶಕ್ಕೆ ಜಾನುವಾರುಗಳನ್ನು ಸಾಗಿಸಬಾರದು ಅಥವಾ ಸಾಗಣೆಗೆ ಅವಕಾಶ ಮಾಡಿಕೊಡಬಾರದು. ನಿಯಮ ಉಲ್ಲಂಘಿಸಿ ಸಾಗಣೆ ಮಾಡಿದರೆ ಅದು ಅಪರಾಧ ಕೃತ್ಯವಾಗಲಿದೆ. ಆದರೆ, ಕೃಷಿ ಮತ್ತು ಪಶುಸಂಗೋಪನೆ ಉದ್ದೇಶಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರ ನಿಗದಿಪಡಿಸಿರುವ ನಿಯಮಗಳ ಅನುಸಾರ ಜಾನುವಾರು ಸಾಗಣೆ ಮಾಡಬಹುದು. ಗೋಹತ್ಯೆ ನಿಷೇಧ ಕಾಯ್ದೆ-2020 ಸೆಕ್ಷನ್ 8ರ ಪ್ರಕಾರ ಕಾನೂನು ಬಾಹಿರ ಕಸಾಯಿಖಾನೆಗಳನ್ನು ಸಬ್ ಇನ್ಸ್‌ಪೆಕ್ಟರ್ ದರ್ಜೆಗಿಂತ ಕಡಿಮೆ ಇಲ್ಲದ ಪೊಲೀಸ್ ಅಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರಿಯು ಜಪ್ತಿ ಮಾಡುವ ಅಧಿಕಾರ ಹೊಂದಿದ್ದು, ಜಪ್ತಿ ಮಾಡಿದ ನಂತರ ಮುಟ್ಟುಗೋಲಿಗಾಗಿ ಆಯಾ ಉಪವಿಭಾಗೀಯ ದಂಡಾಧಿಕಾರಿಗಳ ಮುಂದೆ ವರದಿ ಮಾಡಬೇಕು, ವರದಿಯನ್ನು ಸ್ವೀಕರಿಸಿದ ನಂತರ ದಂಡಾಧಿಕಾರಿಗಳು ಅಪರಾಧವನ್ನು ಅಧಿನಿಯಮದಡಿಯಲ್ಲಿ ಎಸಗಲಾಗಿದೆ ಅಥವಾ ಎಸಗಬೇಕೆಂದು ಉದ್ದೇಶಿಸಲಾಗಿದೆಯೇ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು, ಅಕ್ರಮ ಕಸಾಯಿಖಾನೆಗಳ ಬಗ್ಗೆ ನಿಗಾವಹಿಸಬೇಕು, ವಶಪಡಿಸಿಕೊಳ್ಳಲಾದ ಜಾಗಗಳ ಮಾರಾಟ, ಬಾಡಿಗೆ ಹಾಗೂ ಯಾವುದೇ ಚಟುವಟಿಕೆ ನಡೆಸದಂತೆ ನಿಯಮ 8 (4) ಅಡಿಯಲ್ಲಿ ಮುಟ್ಟುಗೋಲು ಹಾಕಲು ಅವಕಾಶವಿದೆ. ಸಂಪೂರ್ಣವಾಗಿ ಜಾನುವಾರು ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ, ಪೊಲೀಸ್ ಇಲಾಖೆಗಳ ಹಾಗೂ ಕಂದಾಯ ಸೇರಿದಂತೆ ಇಲಾಖೆಗಳು ಪರಸ್ಪರ ಸಹಕಾರದಿಂದ ವ್ಯವಸ್ಥಿತವಾಗಿ ಶ್ರಮಿಸುತ್ತವೆ.
+ There are no comments
Add yours