ಬೆಂಗಳೂರು- ಪೂನಾ ರಸ್ತೆ ಗುಂಡಿಗಳಿಂದ ಹೈರಾಣಾದ ಜನ; ಶೀಘ್ರ ದುರಸ್ತಿಗೆ ಸಂಸದ ಬಸವರಾಜ್ ಸೂಚನೆ

1 min read

 

Tumkurnews
ತುಮಕೂರು: ಪ್ರತಿ ದಿವಸ ಬೆಂಗಳೂರು- ಪೂನಾ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಶೀಘ್ರವಾಗಿ ರಸ್ತೆಯನ್ನು ದುರಸ್ತಿಪಡಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಂಸದ ಜಿ.ಎಸ್ ಬಸವರಾಜ್ ಸೂಚಿಸಿದರು.
ಕೇಂದ್ರ ಸರ್ಕಾರದಿಂದ ನೆಲಮಂಗಲ ಟೋಲ್ ನಿಂದ -ತುಮಕೂರು ರಾಜಾ ಟೈಲ್ಸ್ ವರೆಗೆ ಸುಮಾರು 44 ಕಿಮೀ ರಸ್ತೆಯನ್ನು 6 ಪಥದ ರಸ್ತೆಯಾಗಿ ಹಾಗೂ ಎರಡು ಕಡೆ ಸರ್ವಿಸ್ ರಸ್ತೆ ನಿರ್ಮಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರದ ಬೆವಿಕಂನ ನೂತನ ವೃತ್ತ ಕಚೇರಿಯ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾಸನ-ಮಂಗಳೂರು, ತುಮಕೂರು-ಹೊನ್ನಾವರ, ಬೆಂಗಳೂರು-ಪೂನಾ, ದಾಬಸ್ ಪೇಟೆ- ದೇವನಹಳ್ಳಿ ಹೀಗೆ ಹಲವಾರು ರಾಷ್ಟ್ರೀಯ ಹೆದ್ಧಾರಿಗಳ ಹೆಬ್ಬಾಗಿಲಿನಂತಿರುವ, ಈ ರಸ್ತೆಯ ಸಮಸ್ಯೆಗಳ ಬಗ್ಗೆ ಒಂದು ತಾಂತ್ರಿಕ ವರದಿ ಸಿದ್ಧಪಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಶಾಸಕ ಜಿ.ಬಿ ಜ್ಯೋತಿಗಣೇಶ್ ಮಾತನಾಡಿ, ರಾಜ್ಯದ 20 ಜಿಲ್ಲೆಗಳಿಗಿಂತ ಹೆಚ್ಚು ಜನಪ್ರನಿಧಿಗಳಿಂದ, ಸಾರ್ವಜನಿಕರಿಂದ ಈ ರಸ್ತೆ ಗುಂಡಿಗಳ ಸಮಸ್ಯೆ ಬಗ್ಗೆ ಪ್ರತಿದಿನ ನನ್ನ ಬಳಿ ಹೇಳಿಕೊಳ್ಳುತ್ತಿದ್ದಾರೆ. ದಾಬಸ್ ಪೇಟೆ ಕೈಗಾರಿಕಾವಲಯದ ಟ್ರಾಫಿಕ್, ದಾಬಸ್ ಪೇಟೆಯಿಂದ ವಿಮಾನ ನಿಲ್ದಾಣ ರಸ್ತೆ ಸಂಪರ್ಕ, ವೇ ಸೈಡ್ ಅಮೆನಿಟೀಸ್, ಹೊಸ ರಿಂಗ್ ರಸ್ತೆ ಸಂಪರ್ಕ, ಹೀಗೆ 44 ಕಿಮೀ ಉದ್ದದ ಈ ರಸ್ತೆಯ ಸಮಸ್ಯೆಗಳು ಹಾಗೂ ತುಮಕೂರು ನಗರ ಮಟ್ಟದ ಸಮಸ್ಯೆಗಳಾದ ಅಕ್ಕತಂಗಿ ಕೆರೆ ಪಕ್ಕದ ಸರ್ವೀಸ್ ರಸ್ತೆ, ಜಗನ್ನಾಥಪುರದ ಕೆಳ ಸೇತುವೆ, ತುಮಕೂರು ನಗರದ ಪ್ರವೇಶ, ಬಟವಾಡಿ ಬಳಿ ಸ್ಕೈವಾಕ್, ವಿವಿಧ ಕೆಳಸೇತುವೆಗಳಲ್ಲಿ ನಿಲ್ಲುವ ನೀರು, ಕರಾಬುಹಳ್ಳಗಳಲ್ಲಿ ಅಗತ್ಯ ಸಾಮಾರ್ಥ್ಯದ ಸೇತುವೆ ನಿರ್ಮಾಣ, ದುರಸ್ತಿ, ಮಳೆಯಿಂದ ಆದ ಪರಿಣಾಮಗಳು ಬಗ್ಗೆ ವಿವರಿಸಿದ ಶಾಸಕರು ಈ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕಾಗಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಯಾವುದೇ ಇಲಾಖೆಯ ಸಮಸ್ಯೆಗಳಿದ್ದರೂ, ತಕ್ಷಣ ನನ್ನ ಗಮನಕ್ಕೆ ತನ್ನಿ, ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಭೆ ನಡೆಸಿ ಸೂಕ್ತ ಸಮಸ್ಯೆ ಪರಿಹರಿಸಲಾಗುವುದು, ಹೆದ್ದಾರಿಯ ಎರಡು ಕಡೆಯಿಂದಲೂ ಕೆಲಸ ಆರಂಭವಾದರೆ ಬೇಗ ಕಾಮಗಾರಿ ಪೂರ್ಣಗೊಳ್ಳಲು ಸಹಕಾರಿಯಾಗಲಿದೆ, ಸಂಸದರು, ಶಾಸಕರು, ದಿಶಾ ಸಮಿತಿ ಸದಸ್ಯರು ಹೇಳಿರುವ ಸಾರ್ವಜನಿಕ ಸಮಸ್ಯೆಗಳ ಪ್ರತಿಯೊಂದು ಅಂಶಗಳ ಸಾಧಕ-ಭಾದಕಗಳ ಬಗ್ಗೆ ನಕ್ಷೆ ಸಹಿತ ಮಾಹಿತಿ ಸಿದ್ಧಪಡಿಸಿ, ವರದಿ ಸಲ್ಲಿಸುವಂತೆ ಸೂಚಿಸಿದರು
ನಿವೃತ್ತ ಜಲಸಂಪನ್ಮೂಲ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನಿಯರ್ ಆಗಿದ್ದ ಕೆ.ಜೈಪ್ರಕಾಶ್ ಹಲವಾರು ಸಮಸ್ಯೆಗಳು ಹಾಗೂ ಪರಿಹಾರದ ಬಗ್ಗೆ ಸಮಗ್ರವಾಗಿ ವಿವರಿಸಿದರು.
ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ ವಿದ್ಯಾಕುಮಾರಿ, ಅಧೀಕ್ಷಕ ಇಂಜಿನಿಯರ್ ಲೋಕೇಶ್ ಕೆ.ಎಲ್, ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಚಿತ್ರದುರ್ಗದ ಪಿಡಿ ಅಧಿಕಾರಿ ಗೌರವ್ ಹಾಗೂ ಜಿಲ್ಲಾ ಅಧಿಕಾರಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಭಾಗವಹಿಸಿದ್ದರು.

About The Author

You May Also Like

More From Author

+ There are no comments

Add yours