ವಿಕಲಚೇತನರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕೌಶಲ್ಯಯುತರಾಗಬೇಕು; ಜಿಪಂ ಸಿಇಒ

1 min read

Tumkurnews
ತುಮಕೂರು; ವಿಕಲಚೇತನರು ಯಾರೂ ಕೂಡ ತಮ್ಮ ದೈಹಿಕ ಸ್ಥಿತಿ ಬಗ್ಗೆ ಚಿಂತಿತರಾಗದೆ, ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕೌಶಲ್ಯಯುತರಾಗಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ ವಿದ್ಯಾಕುಮಾರಿ ತಿಳಿಸಿದರು.
ನಗರದ ಬಾಲಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮತ್ತಿತರ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು ಏರ್ಪಡಿಸಿದ್ದ “ವಿಶ್ವ ವಿಕಲಚೇತನರ ದಿನಾಚರಣೆ-2022” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರು ಘನತೆ-ಗೌರವದಿಂದ ನೆಮ್ಮದಿಯಾಗಿ ಜೀವಿಸಲು ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರೂ ತಮ್ಮ ಹಕ್ಕುಗಳು ಹಾಗೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಹೊಂದಿರಬೇಕು. ವಿಕಲತೆ ಶರೀರಕ್ಕೆ ಹೊರತು ಮನಸ್ಸಿಗಲ್ಲ, ವಿಕಲಚೇತನರಲ್ಲಿ ವಿಶೇಷ ಶಕ್ತಿ ಇದ್ದು, ಜನ್ಮತಃ ಆಥವಾ ಇನ್ನಾವುದೋ ಕಾರಣಗಳಿಂದ ವಿಕಲರಾದವರು, ಆ ಬಗ್ಗೆ ಪಶ್ಚಾತ್ತಾಪ ಪಡದೇ ಸಮಸ್ಯೆಯನ್ನು ಎದುರಿಸಿ ಬದುಕನ್ನು ರೂಪಿಸಿಕೊಳ್ಳಬೇಕು, ಜೀವನದ ಸಾಧನೆಯ ಹಾದಿಯಲ್ಲಿ ಅಂಜದೇ ಮುನ್ನುಗ್ಗಬೇಕು, ಎಲ್ಲರಂತೆ ವಿಕಲಚೇತನರು ಸರಿಸಮಾನರು ಎಂದು ಹೇಳಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಡಾ.ರಮೇಶ ಎಂ. ಮಾತನಾಡಿ, ಎಲ್ಲರನ್ನೂ ಒಳಗೊಂಡ ಸಮಾಜದ ನಿರ್ಮಾಣಕ್ಕೆ ಪರಿವರ್ತಕ ಪರಿಹಾರಗಳು ಸುಗಮ್ಯ ಮತ್ತು ಸಮಾನ ಜಗತ್ತನ್ನು ಉತ್ತೇಜಿಸುವಲ್ಲಿ ಅವಿಷ್ಕಾರದ ಪಾತ್ರ ಎನ್ನುವ ಘೋಷವಾಕ್ಯದ ಹಿನ್ನೆಲೆಯಲ್ಲಿ ಈ ವರ್ಷ “ವಿಶ್ವ ವಿಕಲ ಚೇತನರ ದಿನಾಚರಣೆ-2022 ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಗವೈಕಲ್ಯವನ್ನು ಮೆಟ್ಟಿನಿಂತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಕಲಚೇತನ ವ್ಯಕ್ತಿಗಳು, ವಿಶೇಷ ಶಿಕ್ಷಕರು ಹಾಗೂ ವಿಕಲಚೇತನ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
“ವಿಶ್ವ ವಿಕಲಚೇತನರ ದಿನಾಚರಣೆ-2022ರ ಪ್ರಯುಕ್ತ ವಿಕಲಚೇತನ ಮತದಾರರಿಗಾಗಿ ‘ಮತದಾನ, ಮತದಾರರ ಜಾಗೃತಿ’  ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಾಥಾವು ನಗರದ ಟೌನ್ ಹಾಲ್ ಸರ್ಕಲ್‍ನಿಂದ ಹೊರಟು ಜಿಲ್ಲಾ ಬಾಲಭವನ  ತಲುಪಿತು. ವಿಕಲಚೇತನರಲ್ಲಿ ಮತದಾನ, ಮತದಾರರ ಜಾಗೃತಿ ಬಗ್ಗೆ ಅರಿವು ಮೂಡಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ, ಸಂಘ ಸಂಸ್ಥೆಯ ಮುಖಂಡರು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥತರಿದ್ದರು.

About The Author

You May Also Like

More From Author

+ There are no comments

Add yours