Tumkurnews
ತುಮಕೂರು; ಗ್ರಂಥಾಲಯಗಳು ಜನಸಾಮಾನ್ಯರು ಮತ್ತು ಮಕ್ಕಳ ಜ್ಞಾನ ಹೆಚ್ಚಿಸಲು ಬಹಳ ದೊಡ್ಡ ಪಾತ್ರ ವಹಿಸಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾದ ಮೇಲೆ ಜನರ ಅಭ್ಯಾಸಗಳು ಬೇರೆ ಬೇರೆ ಕಡೆ ವಾಲುತ್ತಿವೆ. ಪುಸ್ತಕ ಓದುವ ಮಾನಸಿಕತೆ ಕಡಿಮೆಯಾಗುತ್ತಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಜನರು ಮತ್ತು ಮಕ್ಕಳಲ್ಲಿ ಓದುವಂತಹ ಅಭ್ಯಾಸ ಸೃಷ್ಠಿ ಮಾಡುವ ಕೆಲಸ ಮಾಡುತ್ತಿದೆ ಎಂದರು.
ತಿಪಟೂರು ನಗರದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು, ನಗರ ಕೇಂದ್ರ ಗ್ರಂಥಾಲಯ, ತುಮಕೂರು ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಏರ್ಪಡಿಸಿದ್ದ ಓದಿನೆಡೆಗೆ ನಮ್ಮ ನಡಿಗೆ ಜಾಥಾಕ್ಕೆ ಡೋಲು ಭಾರಿಸಿ ಹಸಿರು ನಿಶಾನೆ ತೋರುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಂಥಾಲಯಗಳಲ್ಲಿ ಪುಸ್ತಕವನ್ನು ಓದುವ ಮೂಲಕ ಜ್ಞಾನೋದಯ ಪಡೆಯಲು ಜನರು ಮುಂದಾಗಬೇಕು. ಹಾಗಾಗಿ ಈ ಜಾಥಾ ನಡೆಸಲಾಗಿದೆ ಎಂದರು.
ನಮ್ಮ ಇಲಾಖೆಯಿಂದ ಇ-ಲೈಬ್ರರಿ ಸಹ ಆರಂಭಿಸಲಾಗಿದೆ. ಪೋರ್ಟಲ್‍ನಲ್ಲಿ ಜನರು ಸದಸ್ಯತ್ವ ಪಡೆದು ಸದುಪಯೋಗಪಡೆದುಕೊಳ್ಳಬೇಕು ಎಂದು ಅವರು ಹೇಳಿದರ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೆಷ್ಟು ವಿಚಾರ ತಿಳಿದುಕೊಳ್ಳಬೇಕೋ ಅಷ್ಟನ್ನೆಲ್ಲ ವಿಚಾರಗಳನ್ನು ತಿಳಿದು ಜ್ಞಾನ ಪಡೆಯಲು ಮುಂದಾಗಬೇಕು,
ಒಳ್ಳೆಯ ವಾತಾವರಣದಲ್ಲಿ ಗ್ರಂಥಾಲಯ ಆರಂಭಿಸುವ ಪ್ರಯತ್ನ ಮಾಡುತ್ತಿದ್ದೇವೆ. ಹಾಗಾಗಿ ಜನರು ಗ್ರಂಥಾಲಯಗಳಿಗೆ ಹೆಚ್ಚು ಹೆಚ್ಚು ಹೋಗಿ ಪುಸ್ತಕ ಓದುವ ಅಭ್ಯಾಸ ಮತ್ತಷ್ಟು ರೂಢಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ನಗರದ ಪುರಭವನದಿಂದ ಆರಂಭವಾದ ಜಾಥಾವು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶಿಕ್ಷಣದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಘೋಷಣೆಗಳ ಮೂಲಕ ಅರಿವು ಮೂಡಿಸಲಾಯಿತು.
ನಂತರ ಜಾಥಾವು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಹಾಗೂ ಸಿಬ್ಬಂದಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ಕಲ್ಪತರು ಕಾಲೇಜಿನ ಸಭಾಂಗಣಕ್ಕೆ ತಲುಪಿತು.
ಜಾಥಾದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶಕುಮಾರ್ ಎಸ್. ಹೊಸಮನಿ, ಆಡಳಿತಾಧಿಕಾರಿ ಬಸವರಾಜ ತಳವಾರ್, ಉಪವಿಭಾಗಾಧಿಕಾರಿ ಕಲ್ಪಶ್ರೀ, ತಹಶೀಲ್ದಾರ್ ಚಂದ್ರಶೇಖರ್, ನಗರಸಭೆ ಆಯುಕ್ತ ಉಮಾಕಾಂತ್, ಗ್ರಂಥಾಲಯದ ಉಪನಿರ್ದೇಶಿ ಸರೋಜಮ್ಮ ಸೇರಿದಂತೆ 5 ವಲಯಗಳ ಉಪನಿರ್ದೇಶಕರುಗಳು ಪಾಲ್ಗೊಂಡಿದ್ದರು.
+ There are no comments
Add yours