ತುಮಕೂರು ಘಟನೆಯಿಂದ ಎಚ್ಚೆತ್ತ ಸರ್ಕಾರ
Tumkurnews
ತುಮಕೂರು; ಆರೋಗ್ಯ ಸಮಸ್ಯೆಯಿಂದ ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯಬೇಕೆಂದು ಆರೋಗ್ಯ ಮತ್ತು ಕುಟುಂಬ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವರಾದ ಡಾ.ಕೆ ಸುಧಾಕರ್ ತಿಳಿಸಿದರು.
ಬಾಣಂತಿ, ಅವಳಿ ಶಿಶುಗಳ ಸಾವು ಪ್ರಕರಣ; ಏಕಪಕ್ಷೀಯ ತನಿಖೆ ಆರೋಪಕ್ಕೆ ಸಚಿವ ಸುಧಾಕರ್ ಖಡಕ್ ಪ್ರತಿಕ್ರಿಯೆ
ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಆಡಿಟೋರಿಯಂನಲ್ಲಿ ಬುಧವಾರ ವೈದ್ಯರುಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಸ್ಪತ್ರೆಗಳಿಗೆ ಡಯಾಲಿಸಿಸ್ ಮಾಡಿಸಿಕೊಳ್ಳಲು ಬರುವಂತಹ ರೋಗಿಗಳಿಗೆ ಯಾವುದೇ ರೀತಿ ಸೋಂಕು ಆಗದ ರೀತಿ ವೈದ್ಯರುಗಳು ಮತ್ತು ಶುಶ್ರೂಷಕರು ಎಚ್ಚರಿಕೆ ವಹಿಸಬೇಕು. ಇದರಿಂದ ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ತಪ್ಪುತ್ತದೆ. ಬಳಸಿದ ಉಪಕರಣಗಳನ್ನು ಮರು ಬಳಸದಂತೆ ‘ಸಿಂಗಲ್ ಯೂಸ್’ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅವಳಿ ಶಿಶು, ಬಾಣಂತಿ ಸಾವು; ವಾರದ ನಂತರ ಜಿಲ್ಲೆಗೆ ಬಂದ ಉಸ್ತುವಾರಿ ಸಚಿವ, ಹೇಳಿದ್ದೇನು?
ಜಿಲ್ಲಾ ಸರ್ಜನ್ ಡಾ.ವೀಣಾ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 10 ಡಯಾಲಿಸಿಸ್ ಯಂತ್ರಗಳಿದ್ದು, 3 ಪಾಳಿಯಲ್ಲಿ ಡಯಾಲಿಸಿಸ್ ಮಾಡಲಾಗುತ್ತಿದ್ದು, ಪ್ರತಿ ತಿಂಗಳು 500-700 ಸೈಕಲ್ ಡಯಾಲಿಸಿಸ್ ಮಾಡಲಾಗುತ್ತಿದೆ ಎಂದು ಸಚಿವರಿಗೆ ವಿವರಿಸಿದರು.
ಬಳಿಕ ಮಾತನಾಡಿದ ಸಚಿವ ಸುಧಾಕರ್, ದಂತ ಭಾಗ್ಯ ಹಾಗೂ ನೇತ್ರ ಚಿಕಿತ್ಸೆ ಕ್ಯಾಂಪ್‍ಗಳನ್ನು ಜಿಲ್ಲೆಯಾದ್ಯಂತ ನಡೆಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಆಧುನಿಕ ಹಾಸಿಗೆ ಮತ್ತು ಒಂದೇ ಮಾದರಿಯ ಹೊದಿಕೆಗಳನ್ನು ಖರೀದಿಸಬೇಕು. ಶೌಚಾಲಯಗಳನ್ನು ಸ್ವಚ್ಚವಾಗಿಡುವ ಸಂಬಂಧ ಉತ್ತಮ ಏಜೆನ್ಸಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಡಿಹೆಚ್‍ಒ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.
ಅವಳಿ ಮಕ್ಕಳು, ತಾಯಿ ಸಾವು ಪ್ರಕರಣ; ವೈದೈ, ಮೂವರು ನರ್ಸ್ ಅಮಾನತು
ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ತಾಯಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣ ಮರುಕಳಿಸದಂತೆ ಜಿಲ್ಲಾಸ್ಪತ್ರೆಗಳಲ್ಲಿ 24×7 ಸಹಾಯವಾಣಿಯನ್ನು ತೆರೆಯಲಿದ್ದು, ಈ ಸಹಾಯವಾಣಿಗೆ ಸಾಮಾಜಿಕ ಭದ್ರತೆ ಇರುವಂತಹ 4 ಮಂದಿ ಸಿಬ್ಬಂದಿಯನ್ನು ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲು ನೇಮಿಸಿಕೊಳ್ಳುವಂತೆ ಸಚಿವರು ಸೂಚಿಸಿದರು.
ಆಸ್ಪತ್ರೆಯ ಬಯೋ ಮೆಡಿಕಲ್ ತ್ಯಾಜ್ಯವನ್ನು ಸರಿಯಾಗಿ ವಿಲೇ ಮಾಡಬೇಕು ಎಂದ ಸಚಿವರು, ಮಾನವೀಯ ಮನಸ್ಥಿತಿ ಹೊಂದಿರುವಂತಹ ಆರೋಗ್ಯ ಮಿತ್ರ ಸಿಬ್ಬಂದಿಯನ್ನೂ ಸಹ ನೇಮಕ ಮಾಡಿಕೊಳ್ಳಬೇಕು. ಆಸ್ಪತ್ರೆಯ ದಟ್ಟಣೆ ಮೇರೆಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು. ಮತ್ತು ಆರೋಗ್ಯ ಮಿತ್ರ ಸಿಬ್ಬಂದಿಗೆ ನಿಯಮಿತವಾಗಿ ಗುರಿ ನೀಡಬೇಕು ಎಂದರು.
ಜಿಲ್ಲಾಸ್ಪತ್ರೆಯ ಶವಾಗಾರ ಅತ್ಯಂತ ಹಳೆಯದಾಗಿದ್ದು, ಆಧುನಿಕ ಸೌಲಭ್ಯ ಒದಗಿಸುವಂತೆ ಹಾಗೂ ಶವಾಗಾರಕ್ಕೆ ಜೆ.ಸಿ ರಸ್ತೆ ಮೂಲಕ ಪ್ರತ್ಯೇಕ ಆಗಮನ ನಿರ್ಗಮನ ವ್ಯವಸ್ಥೆ ಮಾಡುವಂತೆ ಶಾಸಕ ಜ್ಯೋತಿ ಗಣೇಶ್ ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಸಚಿವರು, ಕಾರ್ಯಪಾಲಕ ಅಭಿಯಂತರರಿಗೆ ಈ ಕುರಿತಂತೆ ಪರಿಶೀಲಿಸಲು ಸೂಚಿಸಿದರು.
ಪ್ಯಾರಾ ಮೆಡಿಕಲ್, ನರ್ಸಿಂಗ್ ಹುದ್ದೆ ನೇಮಕ; ಸಿಹಿ ಸುದ್ದಿ ನೀಡಿದ ಡಾ.ಸುಧಾಕರ್
ದಿನನಿತ್ಯ ಆಸ್ಪತ್ರೆಗೆ ಅಂದಾಜು 1600 ರೋಗಿಗಳು ಹೊರರೋಗಿಯಾಗಿ ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದು, ಈ ಲೆಕ್ಕಾಚಾರದನ್ವಯ ಪ್ರತಿ ದಿನ 800 ರಿಂದ 1000 ಎಬಿಎಆರ್‍ಕೆ ಕಾರ್ಡ್‌ಗಳು ನೋಂದಣಿಯಾಗಬೇಕು ಎಂದರು.
ನಿಯಮಿತವಾಗಿ ಎಆರ್’ಎಸ್(ಆರೋಗ್ಯ ರಕ್ಷಾ ಸಮಿತಿ) ಸಮಿತಿ ಸಭೆಗಳನ್ನು ನಡೆಸಬೇಕು. ಹೀಗೆ ಮಾಡುವುದರಿಂದ ಪಾರದರ್ಶಕತೆ ಕಾಪಾಡಿಕೊಳ್ಳುವಂತಾಗುತ್ತದೆ ಮತ್ತು ಜನರಿಗೆ ವೈದ್ಯಕೀಯ ವಿಷಯಗಳು ತಿಳಿಯುತ್ತವೆ ಎಂದು ತಿಳಿಸಿದರು.
ರೋಗಿಗಳಿಗೆ ನೀಡಲಾಗುವ ‘ಡಯಟ್ ಮೆನು’ ಸರಿಯಾಗಿರಬೇಕು. ಕ್ಯಾಟರಿಂಗ್ ವ್ಯವಸ್ಥೆ ಹೆಚ್ಚಿಸಬೇಕು, ಅಡಿಗೆ ಕೋಣೆ ಸ್ವಚ್ಛವಾಗಿರಬೇಕು ಎಂದು ಸೂಚಿಸಿದರು.
ಡಗ್ಸ್ ಮತ್ತು ಲಾಜಿಸ್ಟಿಕ್ ವೇರ್ ಹೌಸ್‍ನಿಂದ ನಿಯಮಿತವಾಗಿ ಔಷಧಗಳು ಸರಬರಾಜು ಆಗುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು ಮತ್ತು ಔಷಧಿಗಳ ಪೂರೈಕೆ ಕುರಿತು ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಿ ಡೀಲರ್’ಗಳಿಗೆ ಮುಂಚಿತವಾಗಿ ಇಂಡೆಂಟ್ ನೀಡಬೇಕು ಎಂದರು.
ಎಂ.ಆರ್.ಐ ಮತ್ತು ಸಿಟಿ ಸ್ಕ್ಯಾನ್‍ಗಳನ್ನು ವೈದ್ಯರುಗಳು ಶಿಫಾರಸ್ಸು ಮಾಡಿದಾಗ ಅದನ್ನು ಸ್ಥಾನಿಕ ವೈದ್ಯಾಧಿಕಾರಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರು ದೃಢೀಕರಿಸಬೇಕು. ರೋಗಿಗಳಿಗೆ ಅವಶ್ಯಕತೆ ಇದ್ದಲ್ಲಿ ಮಾತ್ರ ಎಂ.ಆರ್.ಐ ಮತ್ತು ಸಿಟಿ ಸ್ಕ್ಯಾನ್‍ಗಳನ್ನು ಶಿಫಾರಸ್ಸು ಮಾಡಬೇಕು. ಅನಾವಶ್ಯಕವಾಗಿ ಶಿಫಾರಸ್ಸು ಮಾಡಬಾರದು. ಪ್ರತಿ ಶುಕ್ರವಾರ ಜಿಲ್ಲಾ ಶಸ್ತ್ರ ಚಿಕಿತ್ಸಕರು ಪರಿಶೀಲನಾ ಸಭೆಯನ್ನು ನಡೆಸಿದಲ್ಲಿ ವ್ಯವಸ್ಥೆ ಸರಿಹೋಗಲಿದೆ ಎಂದು ಅಭಿಪ್ರಾಯಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ವೆಂಟಿಲೇಟರ್, ಆಕ್ಸಿಜನ್ ಪ್ಲಾಂಟ್, ಆ್ಯಂಬುಲೆನ್ಸ್, ಖಾಲಿ ಹುದ್ದೆಗಳು, ಮುಂತಾದವುಗಳ ಕುರಿತು ಸಚಿವರು ಚರ್ಚಿಸಿ ಸಮಗ್ರ ಮಾಹಿತಿಯನ್ನು ಪಡೆದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಂದೀಪ್ ಮಾತನಾಡಿ, ಜನಸಾಮಾನ್ಯರಿಗೆ ಎಲ್ಲಾ ರೀತಿಯ ಉತ್ತಮ ಚಿಕಿತ್ಸೆ ಹಾಗೂ ಸೌಕರ್ಯವನ್ನು ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳ ಮೂಲಕ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಘಟಿಸಿದ ತಾಯಿ-ಶಿಶುಗಳ ಸಾವಿನ ಪ್ರಕರಣ ಮತ್ತೆ ಮರು ಕಳಿಸಬಾರದು. ಸರ್ಕಾರಿ ಆಸ್ಪತ್ರೆಯಲ್ಲಿ ಲಂಚ ಕುರಿತಂತೆ ಯಾವುದೇ ರೂಪದಲ್ಲಿ ದೂರು ಬರಬಾರದು. ದೂರು ಬಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಬಾಲಮಂದಿರಕ್ಕೆ ಭೇಟಿ;
ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಕೆ ಸುಧಾಕರ್, ಸದಾಶಿವನಗರದಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿ ಆರೋಗ್ಯ ಇಲಾಖೆ ವತಿಯಿಂದ ತಾಯಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣದ ನತದೃಷ್ಟ ಬಾಲಕಿಯ ಶಿಕ್ಷಣ, ಭದ್ರತೆ ಹಾಗೂ ಭವಿಷ್ಯಕ್ಕಾಗಿ ಮಗುವಿನ ಪರವಾಗಿ 10 ಲಕ್ಷ ರೂ.ಗಳ ಚೆಕ್ಕನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಅವರಿಗೆ ವಿತರಿಸಿದರು.
ಮಗುವಿನೊಂದಿಗೆ ಮಾತನಾಡಿದ ಸಚಿವರು, ಬಾಲಕಿಯ ಕೈಗೆ ಈ ಸಂದರ್ಭ ಹೊಸ ಬಟ್ಟೆ, ಹಣ್ಣು ಮತ್ತು ಸಿಹಿ ತಿಂಡಿಗಳನ್ನು ವಿತರಿಸಿದರು. ತದ ನಂತರ ಬಾಲಕಿಯರ ಬಾಲ ಮಂದಿರವನ್ನು ಪರಿಶೀಲಿಸಿದ ಸಚಿವರು, ಅಲ್ಲಿನ ಮಕ್ಕಳೊಂದಿಗೆ ಕೆಲ ಸಮಯ ಕಳೆದರು.
+ There are no comments
Add yours