ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು
Tumkurnews
ತುಮಕೂರು; ನವೆಂಬರ್ 2 ರಿಂದ 4 ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆಯನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಂಚಾಲಕ ಸಿ.ಯತಿರಾಜು, ಜಾಗತಿಕ ಹೂಡಿಕೆದಾರರ ಸಮಾವೇಶ ಬೆಂಗಳೂರಿನಲ್ಲಿ ಪ್ರಾರಂಭಗೊಂಡಿದೆ. ನಿರಂತರವಾಗಿ ರೈತರಾದ ನಾವೆಲ್ಲಾ ಲೋಕಲ್ ಇನ್‍ವೆಸ್ಟರ್ ಆಗಿ ಲಾಭ-ನಷ್ಟಕ್ಕೆ ಜಗ್ಗದೇ ನಾವೇ ಉದ್ಯೋಗ ಕೊಡುತ್ತಿರುವುದು ಸರ್ಕಾರಗಳ ಗಮನಕ್ಕೆ ಬರುತ್ತಿಲ್ಲ. ದೊಡ್ಡ ಹಣವಂತರ ಜಾಗತಿಕ ಹೂಡಿಕೆ ಮಾತ್ರ ಕಾಣುತ್ತಿದೆ. ಓಟು ಹಾಕಿ ಅವರನ್ನು ಆಡಳಿತಕ್ಕೆ ತಂದಿರುವ ಸಣ್ಣ ಹೂಡಿಕೆದಾರರ ಹಿತಾಸಕ್ತಿಯನ್ನು ಮೊದಲು ಕಾಪಾಡದೇ ಕೇವಲ ಮತ ಪಡೆಯಲಷ್ಟೇ ಸೀಮಿತ ಗೊಳಿಸಿ ಬಹುಸಂಖ್ಯಾಂತರನ್ನು ತುಳಿಯುವ ನೀತಿಗಳನ್ನು ಜಾರಿ ಮಾಡುವುದರ ವಿರುದ್ಧ ಅವರ ಕಣ್ಣು ತೆರೆಸಲು ಬಲಿಷ್ಟ ಹೋರಾಟ ಮಾಡಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಅಜ್ಜಪ್ಪ ಮಾತನಾಡಿ ಬಗರ್ ಹುಕುಂ ಸಾಗುವಳಿದಾರರು ಬಹಳ ವರ್ಷಗಳಿಂದ ಸ್ವಂತ ಬಂಡವಾಳ ಹೂಡಿ ತೋಟ-ತುಡಿಕೆ ಮಾಡಿ ಜೀವನ ಸಾಗಿಸುತ್ತಿದ್ದರೂ ಅವರ ಸ್ವಾಭಿಮಾನ ಬದುಕಿಗೆ ಹಕ್ಕುಪತ್ರ ನೀಡಲು ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಕೇವಲ ಪ್ರಚಾರ ಸಮಾವೇಶ ನಡೆಸುವುದು ಬೆಲೆ ಏರಿಕೆ, ತೆರಿಗೆ ಹೆಚ್ಚಳ, ಬಲವಂತದ ಭೂಸ್ವಾದೀನದಲ್ಲೇ ತಮ್ಮ ಅಧಿಕಾರವನ್ನು ನಡೆಸಿ ರೈತ ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ಜಿಲ್ಲಾ ಉಪಾಧ್ಯಕ್ಷ ಬಿ.ಉಮೇಶ್ ಮಾತನಾಡಿ, ಇದುವರೆಗೆ ನಡೆದಿರುವ ಜಾಗತಿಕ ಬಂಡವಾಳದಾರರ ಹೂಡಿಕೆದಾರರ ಸಭೆಗಳ ಬಗ್ಗೆ ಶ್ವೇತಪತ್ರ ಹೋರಡಿಸಬೇಕು. ಅದು ದೇಶಕ್ಕೆ ನೀಡಿದ ಕೊಡುಗೆಯನ್ನು ಜನತೆಗೆ ತಿಳಿಸಬೇಕು. ಡಾಲರ್ ಎದುರು ರೂಪಾಯಿ ಬೆಲೆ ಕುಸಿತ, ಅಂತರಾಷ್ಟ್ರೀಯವಾಗಿ ದೇಶದ ಹಸಿವಿನ ಸ್ಥಾನ ಹೆಚ್ಚಳ ಮತ್ತು ಎಲ್ಲಾ ವಿಭಾಗದ ಜನರು ಹೋರಾಟ ನಡೆಸುತ್ತಿದ್ದರೂ ಅವರ ಸಮಸ್ಯೆಗಳ ಬಗ್ಗೆ ಗಮನ ನೀಡದೇ ಎಲ್ಲರನ್ನು ಮುರ್ಖರನ್ನಾಗಿಸಿ ತಾವು ಮಾಡಿದ್ದೇ ಸರಿ ಎಂಬ ದೋರಣೆ ಸರಿಯಲ್ಲ. ಎಲ್ಲರನ್ನು ಒಳಗೊಂಡು ಮುನ್ನಡೆಯುವ ರಾಜಕೀಯ ಇಚ್ಚಾಶಕ್ತಿಯನ್ನು ಕೇಂದ್ರ-ರಾಜ್ಯ ಸರ್ಕಾರಗಳು ಒಳಗೊಳ್ಳಬೇಕು ಎಂದರು. ಪ್ರತಿಭಟನೆಯಲ್ಲಿ ಜಾಗತಿಕ ಬಂಡವಾಳದಾರರ ಸಭೆಯನ್ನು ರದ್ದು ಮಾಡಬೇಕು, ರೈತರ ಬಗರ್ ಹುಕಂ ಹಾಗೂ ಅರಣ್ಯ ಭೂಮಿ ಸಾಗುವಳಿಯನ್ನು ಸಕ್ರಮ ಮಾಡಬೇಕು, ರೈತರ, ದಲಿತರ ಬಗರ್ ಹುಕುಂ ಭೂಮಿಯನ್ನು ಮಠ, ಮಂದಿರ, ಟ್ರಸ್ಟ್ ಮತ್ತು ರಿಯಲ್ ಎಸ್ಟೇಟ್ ಕಬಳಿಕೆಯಿಂದ ರಕ್ಷಿಸಬೇಕು. ಈಗ ಆಗಿರುವ ಕಾನೂನು ಬಾಹಿರ ಕಬಳಿಕೆಯಿಂದ ಭೂಮಿ ವಾಪಸ್ಸು ಪಡೆದು ಮತ್ತೇ ಸ್ವಾಧೀನದಲ್ಲಿದ್ದ ರೈತರಿಗೆ ಹಂಚಬೇಕು. ಬಲವಂತದ ಭೂ ಸ್ವಾಧೀನ ನಿಲ್ಲಿಸಬೇಕು ಅತಿವೃಷ್ಠಿಯಿಂದ ಸಂಪೂರ್ಣ ಹಾಳಾಗಿ ಕುಸಿತಗೊಂಡಿರುವ ಹೇಮಾವತಿ ನಾಲೆಯನ್ನು ಸರ್ಕಾರ ತಕ್ಷಣ ದುರಸ್ಥಿಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದೊಡ್ಡನಂಜಯ್ಯ, ಬಸವರಾಜು, ನರಸಿಂಹಮೂರ್ತಿ, ಶಿರಾ ತಾಲ್ಲೂಕು ರಾಚಪ್ಪ, ಆಶ್ವತ್ಥಪ್ಪ, ತುಮಕೂರು ಕರಿಬಸಯ್ಯ, ತುರುವೇಕೆರೆ ಯಾದವಮೂರ್ತಿ, ಸಿ.ಎನ್.ಹಳ್ಳಿ ಚಂದ್ರಪ್ಪ, ಕುಣಿಗಲ್ ಬೋರಣ್ಣ, ಜನಾಂದೋಳನ ಸಂಘಟನೆಯ ಪಂಡಿತ್ ಜವಾಹರ್, ಸಿಐಟಿಯು ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡ ನಂದೀಶ್ ಮತ್ತಿತರರಿದ್ದರು.
+ There are no comments
Add yours