ಇಡೀ ವ್ಯವಸ್ಥೆಯನ್ನೇ ಕೆಟ್ಟದು ಎಂದು ಬಿಂಬಿಸುತ್ತಿದ್ದಾರೆ; ಕೆ.ಆರ್.ಎಸ್ ಪಕ್ಷದ ವಿರುದ್ಧ ಬೃಹತ್ ಪ್ರತಿಭಟನೆ

1 min read

Tumkurnews
ತುಮಕೂರು; ಭಾರತ ಸರ್ಕಾರದ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಡವರಿಗೆ ಸರಕಾರ ನೀಡುವ ಉಚಿತ ಅಕ್ಕಿ ಮತ್ತಿತರ ದಿನಸಿ ಪದಾರ್ಥಗಳನ್ನು ವಿತರಿಸುತ್ತಿರುವ ಸರಕಾರಿ ನ್ಯಾಯಬೆಲೆ ಅಂಗಡಿಗಳ ಮೇಲೆ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರೆಂದು ಕೆಲ ವ್ಯಕ್ತಿಗಳು ಏಕಾಏಕಿ ದಾಳಿ ನಡೆಸಿ, ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಇವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಸರಕಾರಿ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ನೇತೃತ್ವದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ಕೆಲಸಗಾರರು ನಗರದ ಟೌನ್‍ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕೊಲೆಯಾಗಿ 3 ವರ್ಷಗಳ ಬಳಿಕ ಬೆಳಕಿಗೆ ಬಂದ ಪ್ರಕರಣ!; ಐವರ ಬಂಧನ
ಈ ವೇಳೆ ಮಾತನಾಡಿದ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ನ್ಯಾಯಬೆಲೆ ಅಂಗಡಿಗಳು ಕೋರೋನ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು, ರಾಜ್ಯದ ಸುಮಾರು 4.85 ಕೋಟಿ ಜನರಿಗೆ ಪಡಿತರ ಹಂಚುವ ಮೂಲಕ ಉದಾತ್ತ ಸೇವೆ ಮಾಡಿದೆ. ಆದರೆ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರೆಂದು ಹೇಳುವ ಕೆಲವರು, ಏಕಾಏಕಿ ಅಂಗಡಿಗೆ ನುಗ್ಗಿ, ದಾಖಲೆಗಳನ್ನು ಪರಿಶೀಲಿಸುವುದು, ತೂಕದಲ್ಲಿ ಸಣ್ಣ ವ್ಯತ್ಯಾಸ ಬಂದರೂ ಕೆಲಸಗಾರರು ಮತ್ತು ಅಂಗಡಿ ಮಾಲೀಕರನ್ನು ಬಾಯಿಗೆ ಬಂದಂತೆ ಬೈಯುವುದರಲ್ಲದೆ, ಈ ದೃಶ್ಯಗಳನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ಇಡಿ ವ್ಯವಸ್ಥೆಯನ್ನು ಕೆಟ್ಟದ್ದು ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ. ನಾವು ತಪ್ಪು ಮಾಡಿದರೆ ಶಿಕ್ಷಿಸಲು ಆಹಾರ ಇಲಾಖೆ, ಜಿಲ್ಲಾಡಳಿತವಿದೆ. ಅದನ್ನು ಬಿಟ್ಟು ಒಂದು ಪಕ್ಷದ ಹೆಸರಿನಲ್ಲಿ ಅಂಗಡಿ ಮಾಲೀಕರಿಗೆ, ಪಡಿತರ ಚೀಟಿದಾರರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದರು.
ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಹಾಗೆಂದ ಮಾತ್ರಕ್ಕೆ ಬೇಕಾಬಿಟ್ಟಿ ನಡೆದುಕೊಳ್ಳುವುದಕ್ಕೆ ನಾವು ಅಸ್ಪದ ಕೊಡುವುದಿಲ್ಲ. ನಿಮಗೆ ನಮ್ಮ ಕಾರ್ಯವೈಖರಿ ಬಗ್ಗೆ ಅನುಮಾನವಿದ್ದರೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಿ, ಅದನ್ನು ಬಿಟ್ಟು ಸಾರ್ವಜನಿಕರ ಎದುರು ಅಂಗಡಿ ಮಾಲೀಕರು ಕಳ್ಳರು ಎಂಬಂತೆ ಬಿಂಬಿಸುವುದು ಸರಿಯಲ್ಲ. ಇದು ನಮ್ಮ ಮನೋಸ್ಥೈರ್ಯವನ್ನು ಕುಗ್ಗಿಸುವ ಕೆಲಸವಾಗಿದೆ. ನಿಮ್ಮ ಧಮಕಿಗಳಿಗೆ ನಾವು ಬಗ್ಗುವುದಿಲ್ಲ. ನೀವು ಕಾನೂನು ಕೈಗೆ ತೆಗೆದುಕೊಳ್ಳಲು ಮುಂದಾದರೆ, ನಾವುಗಳು ಸಹ ಅದೇ ಸ್ಥಿತಿಗೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಕೃಷ್ಣಪ್ಪ ಎಚ್ಚರಿಸಿದರು.
ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ನಟರಾಜು ಮಾತನಾಡಿ, ಕಳೆದ 60-70 ವರ್ಷಗಳಿಂದ ನ್ಯಾಯಬೆಲೆ ಅಂಗಡಿ ತೆರೆದು ಬಡವರಿಗೆ ಪಡಿತರ ಹಂಚುವ ಕೆಲಸ ಮಾಡುತ್ತಿದ್ದೇವೆ. ಬಯೋಮೆಟ್ರಿಕ್ ಬಂದ ನಂತರ ಪ್ರತಿಯೊಬ್ಬರ ಪಡಿತರ ಹಂಚಿಕೆ ಮಾಡಿದ ತಕ್ಷಣವೇ ಪಡಿತರದಾರರ ಮೊಬೈಲ್ ಸಂಖ್ಯೆಗೆ ಮೇಸೆಜ್ ಬರುತ್ತದೆ. ಮೋಸ ಮಾಡಲು ಸಾಧ್ಯವಿಲ್ಲ. ಹೀಗಿದ್ದೂ ಪಡಿತರ ಅಂಗಡಿ ಮಾಲೀಕರು ಮೋಸ ಮಾಡುತ್ತಿದ್ದಾರೆ ಎಂದು ಬಿಂಬಿಸಲು ಹೊರಟಿದ್ದಾರೆ. ಇವರಿಗೆ ಕಾನೂನು ಕೈಗೆತ್ತಿಕೊಳ್ಳಲು ಅಧಿಕಾರ ನೀಡಿದವರು ಯಾರು? ಆರು ತಿಂಗಳಿನಿಂದ ಕಮಿಷನ್ ನೀಡಿಲ್ಲ, ಆದರೂ ಸಹ ಕೈಯಿಂದ ಕೆಲಸಗಾರರಿಗೆ ಕೂಲಿ ನೀಡಿ, ಅಂಗಡಿ ನಡೆಸುತ್ತಿದ್ದೇವೆ. ಪಡಿತರದಾರರೇ ನಮ್ಮ ಆಸ್ತಿ ಎಂದರು.
ಹೆಬ್ಬೂರಿನ ಆರ್. ರಂಗಯ್ಯ ಮಾತನಾಡಿ, ನಾವು 30 ವರ್ಷಗಳಿಂದಲೂ ನ್ಯಾಯ ಬೆಲೆ ಅಂಗಡಿ ನಡೆಸಿಕೊಂಡು ಬರುತ್ತಿದ್ದೇವೆ. ಎಂದೂ ಸಹ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿಲ್ಲ. ಈ ಕಾರ್ಯವನ್ನು ಸಮಾಜ ಸೇವೆ ರೀತಿಯ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಈಗ ಕೆ.ಆರ್.ಎಸ್. ಪಕ್ಷದವರು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಇವರ ಆರೋಪದಲ್ಲಿ ಸತ್ಯಾಂಶವಿಲ್ಲ. ಕೆ.ಆರ್.ಎಸ್. ಪಕ್ಷದವರು ನಮ್ಮ ಧೋರಣೆಯನ್ನು ಬದಲಿಸಿಕೊಳ್ಳಬೇಕು ಎಂದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಕ್‍ಲೈನ್ ರವಿಕುಮಾರ್, ಗುಬ್ಬಿ ಶಿವಕುಮಾರ್, ಕೊರಟಗೆರೆಯ ಚಿಕ್ಕರಂಗಣ್ಣ ಸೇರಿದಂತೆ ಹಲವರು ಮಾತನಾಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪಡಿತರ ಅಂಗಡಿ ಮಾಲೀಕರಾದ ಆರ್.ಕಾಮರಾಜು, ರಂಗಧಾಮಯ್ಯ, ಹೆಬ್ಬೂರು ಆರ್. ರಂಗಯ್ಯ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

About The Author

You May Also Like

More From Author

+ There are no comments

Add yours