ಗಣೇಶೋತ್ಸವಕ್ಕೆ ಇರುವ ನಿಬಂಧನೆಗಳೇನು?; ಜಿಲ್ಲಾಧಿಕಾರಿ ಮಾಹಿತಿ

1 min read

Tumkurnews
ತುಮಕೂರು; ಗೌರಿ-ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳು ಸಮನ್ವಯ ಸಾಧಿಸಿ ಶಾಂತಿ ಸುವ್ಯವಸ್ಥೆಗೆ ಭಂಗ ಬಾರದ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಗೌರಿ-ಗಣೇಶ ಚತುರ್ಥಿಯಂದು ಮೂರ್ತಿಯನ್ನು ಪ್ರತಿಷ್ಟಾಪಿಸುವ ಹಾಗೂ ಉತ್ಸವವನ್ನು ಆಯೋಜಿಸುವ ಸಂಬಂಧ ಆಯೋಜಕರಿಗೆ ಪರವಾನಗಿ, ಅನುಮತಿ ಕುರಿತಂತೆ ಸಾರ್ವಜನಿಕ ಸುರಕ್ಷತೆ, ಪರಿಸರ ಮಾಲಿನ್ಯ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ತಮ್ಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ತಾಲ್ಲೂಕು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ಮತ್ತು ಸಂಬಂಧಿತ ಇಲಾಖೆಗಳೊಂದಿಗೆ ಏಕಗವಾಕ್ಷಿ ಸಮಿತಿಯನ್ನು ರಚಿಸಬೇಕು. ಈ ಕುರಿತು ಸಾರ್ವಜನಿಕರಿಗೆ ತಿಳಿಸಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು, ಕಾರ್ಯಕ್ರಮದ ಆಯೋಜಕರು ಸಲ್ಲಿಸುವ ಅರ್ಜಿಯ ನಮೂನೆಯನ್ನು ಸಿದ್ದಪಡಿಸಿ ಅಗತ್ಯ ಪ್ರಚಾರ ನೀಡಬೇಕು ಎಂದರು.
ನ್ಯಾಯಾಲಯದ ನಿರ್ದೇಶನಗಳು, ಇಲಾಖೆಗಳು ಹಾಗೂ ಸಮಿತಿಯು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವ ಕುರಿತು ಕಾರ್ಯಕ್ರಮ ಆಯೋಜಕರಿಂದ ಮುಚ್ಚಳಿಕೆಯನ್ನು ಪಡೆಯಬೇಕು. ಹಾಗೂ ಸಾರ್ವಜನಿಕ ಸುರಕ್ಷತೆ ಮತ್ತು ಪರಿಸರ ಮಾಲಿನ್ಯ ಉಂಟಾಗದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಖಾತರಿಪಡಿಸಿಕೊಂಡು ಅಗತ್ಯವಿರುವ ಕಡೆ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಆಯೋಜಕರಿಗೆ ಸೂಚಿಸಬೇಕು ಎಂದು ತಿಳಿಸಿದರು.
ಪರಿಸರಕ್ಕೆ ಹಾನಿಯಾಗದ ಗಣೇಶ ಮೂರ್ತಿಗಳನ್ನು ಕೂರಿಸುವ ಬಗ್ಗೆ ಸಮಿತಿಯು ಖಚಿತ ಪಡಿಸಿಕೊಳ್ಳಬೇಕು. ಗಣೇಶ ಮೂರ್ತಿ ಪ್ರತಿಷ್ಟಾಪಿಸುವ ಸಂದರ್ಭದಲ್ಲಿ ಸಾರ್ವಜನಿಕ ರಸ್ತೆ ಮತ್ತು ಬೀದಿಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದಂತೆ ಪೆಂಡಾಲ್ ನಿರ್ಮಿಸುವಂತೆ ಕ್ರಮವಹಿಸಬೇಕು.
ಹೈ-ಟೆನ್ಷನ್ ತಂತಿ ಹಾದು ಹೋಗಿರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲು ಅನುಮತಿಯನ್ನು ನಿರ್ಬಂಧಿಸಬೇಕು ಎಂದು ಅವರು ಸೂಚನೆ ನೀಡಿದರು.
ವಿಸರ್ಜನ ಮಹೋತ್ಸವಕ್ಕೂ ಮುನ್ನ ತಹಶೀಲ್ದಾರ್ ನೇತೃತ್ವದ ಪೋಲಿಸ್ ಇಲಾಖೆಯ ಮಾರ್ಗದರ್ಶನದಲ್ಲಿ ನಾಗರೀಕ ಸಮಿತಿ, ಮೊಹಲ್ಲ ಸಮಿತಿ ಹಾಗೂ ಕಾವಲು ಸಮಿತಿ ಹಾಗೂ ಮತ್ತಿತರ ಎಲ್ಲಾ ಸಂಘ-ಸಂಸ್ಥೆಗಳ ಮುಖ್ಯಸ್ಥರೊಳಗೊಂಡಂತೆ ಕೋಮು ಸೌಹಾರ್ದ ಸಭೆಗಳನ್ನು ಆಯೋಜಿಸಬೇಕೆಂದು ಸೂಚಿಸಿದರು.
ಗಣೇಶ ವಿಸರ್ಜನೆಗಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿಗದಿತ ಸ್ಥಳವನ್ನು ಗುರುತಿಸುವುದು ಮತ್ತು ಸ್ಥಳದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಗಣೇಶೋತ್ಸವ ಯಶಸ್ವಿಯಾಗಿ ನಡೆಯಲು ನೀಡಲಾಗಿರುವ ಸೂಚನೆಗಳನ್ನು ಪಾಲಿಸಲು ಕಂದಾಯ, ಲೋಕೋಪಯೋಗಿ, ಇಂಧನ (ವಿದ್ಯುತ್ ಇಲಾಖೆ) ಅಗ್ನಿಶಾಮಕ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದ ಅವರು, ಯಾವುದೇ ಕಾರಣಕ್ಕೂ ಏಕಗವಾಕ್ಷಿ ಸಮಿತಿಯ ಅನುಮತಿ, ಪರವಾನಗಿ ಇಲ್ಲದೆ ಗಣೇಶ ಮೂರ್ತಿಯನ್ನು ಸ್ಥಾಪಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಗಣೇಶ ಮೂರ್ತಿಯನ್ನು ತರುವಾಗ ಹಾಗೂ ವಿಸರ್ಜಿಸುವಾಗ ಮೆರವಣಿಗೆ ಏರ್ಪಡಿಸಿದಲ್ಲಿ ಪ್ರತ್ಯೇಕ ಆಯೋಜಕರಿಗೆ ಪ್ರತ್ಯೇಕ ಸಮಯವನ್ನು ನಿಗದಿ ಪಡಿಸಲು ಕ್ರಮವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ವಿ. ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎನ್.ಅಂಜನಪ್ಪ ಸೇರಿದಂತೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಹಾಜರಿದ್ದರು.

About The Author

You May Also Like

More From Author

+ There are no comments

Add yours