ರೈತರಿಗೆ ಮುಖ್ಯವಾದ ಸಂದೇಶ ನೀಡಿದ ಸಚಿವ ಮಾಧುಸ್ವಾಮಿ

1 min read

ತುಮಕೂರು ನ್ಯೂಸ್.ಇನ್; ಗುಬ್ಬಿ (ಜೂ.13)
ರೈತರು ತಮ್ಮ ಕೃಷಿ ಜಮೀನಲ್ಲಿ ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆಯಂತಹ ಒಂದೇ ಬಗೆಯ ಬೆಳೆಯ ಮೇಲೆ ಅವಲಂಬಿಸದೆ ವಿವಿಧ ರೀತಿಯ ಬೆಳೆಗಳನ್ನು ಬೆಳೆಯಬೇಕು. ಇದರಿಂದ ವಾತಾವರಣ ತಂಪಾಗಿ ಕಾಲಕಾಲಕ್ಕೆ ಮಳೆ ಬಿದ್ದು, ಉತ್ತಮ ಗಾಳಿ ದೊರೆಯುವುದಲ್ಲದೆ ನೀರಿಗೆ ಸಮಸ್ಯೆಯಾಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ರೈತರಿಗೆ ಸಲಹೆ ನೀಡಿದರು.
ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿಂದು ವನಮಹೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭೂಮಿಯ ಮೇಲೆ ನೀರು ಮತ್ತು ಗಾಳಿಯನ್ನು ಉತ್ಪಾದಿಸುವ ಯಾವುದೇ ವ್ಯಕ್ತಿ, ಶಕ್ತಿ ಇನ್ನು ಹುಟ್ಟಿಕೊಂಡಿಲ್ಲ. ಲಭ್ಯವಿರುವುದನ್ನು ಸಂರಕ್ಷಣೆ ಮಾಡುವುದೇ ನಮಗಿರುವ ಮಾರ್ಗ. ಈ ನಿಟ್ಟಿನಲ್ಲಿ ಗಿಡ ಮರಗಳನ್ನು ಬೆಳೆಸಿ ಜಿಲ್ಲೆಯನ್ನು ಅರಣ್ಯೀಕರಣಗೊಳಿಸಬೇಕೆಂದರು.
ಅರಣ್ಯೀಕರಣದಿಂದ ವಾತಾವರಣ ತಂಪಾಗುತ್ತದೆ. ವಾತಾವರಣದಲ್ಲಿರುವ ತೇವಾಂಶವನ್ನು ಗಿಡ-ಮರಗಳ ಮೂಲಕ ಮೋಡಗಳು ಆಕರ್ಷಿಸಿದಾಗ ಮಾತ್ರ ಕಾಲಕಾಲಕ್ಕೆ ಉತ್ತಮ ಮಳೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಮರಗಳನ್ನು ನಾಶ ಮಾಡದೆ ಹಸಿರನ್ನು ಉಳಿಸಬೇಕು. ಮರ ಗಿಡಗಳು ತನ್ನ ಜೀವಿತಾವಧಿಯಲ್ಲಿ ಉತ್ಪತ್ತಿ ಮಾಡುವ ಆಮ್ಲಜನಕದ ಪ್ರಮಾಣವನ್ನು ಲೆಕ್ಕಕ್ಕಿಡಲು ಸಾಧ್ಯವಿಲ್ಲ. ಹಸಿರನ್ನು ಉಳಿಸಿ ಬೆಳೆಸಿದಾಗ ಮಾತ್ರ ನಮ್ಮೆಲ್ಲರ ಉಸಿರು ಉಳಿಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಇತ್ತೀಚಿನ ದಿನಗಳಲ್ಲಿ ಮರಗಳ ನಾಶ ಹಾಗೂ ಪರಿಸರ ಮಾಲಿನ್ಯದಿಂದ ವಾತಾವರಣದ ತಾಪಮಾನ ಹೆಚ್ಚಾಗುತ್ತಿದೆ. ರೈತರು ತೆಂಗು, ಅಡಿಕೆಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಸುವ ಭರದಲ್ಲಿ ತೋಟದಲ್ಲಿದ್ದ ಹಲಸು, ಮಾವು, ಹೊಂಗೆ, ಬೇವಿನ ಮರಗಳನ್ನು ನಾಶಪಡಿಸಲಾಗುತ್ತಿದೆ. ಇದರಿಂದಲೂ ತಾಪಮಾನ ಏರಿಕೆಯಾಗತ್ತಿದೆ. ಎಷ್ಟೇ ಮಳೆ ಬಿದ್ದರೂ, ಗಿಡಗಳಿಗೆ ನೀರು ಕೊಟ್ಟರೂ 2-3 ದಿನಗಳವರೆಗೂ ಭೂಮಿಯಲ್ಲಿ ತೇವಾಂಶ ಉಳಿಯುವುದಿಲ್ಲ. ವಾಡಿಕೆ ಮಳೆಯಾದರೂ ನೀರು ಇಂಗದೆ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಳಿಲುಘಟ್ಟ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಯಶೋಧಮ್ಮ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ ಗಿರೀಶ್, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಉಮಾದೇವಿ, ಚಂದ್ರಶೇಖರ್ ಹಾಗೂ ಶೇಖರ್, ಸಾಮಾಜಿಕ ಅರಣ್ಯ ವಿಭಾಗದ ನಾಗರಾಜ್, ಕಿಡಿಗಣ್ಣಪ್ಪ, ಬಿಜೆಪಿ ಮುಖಂಡ ಎಸ್.ಡಿ ದಿಲೀಪ್ ಇದ್ದರು.

About The Author

You May Also Like

More From Author

+ There are no comments

Add yours