ರಾಜ್ಯದ ವಸತಿ ಶಾಲೆಗಳಲ್ಲಿನ್ನು ಸ್ಥಳೀಯ ಮಕ್ಕಳಿಗೂ ಸೀಟು ಲಭ್ಯ

0 min read

ತುಮಕೂರು ನ್ಯೂಸ್.ಇನ್; ಸಿರಾ(ಜೂ.12):
ರಾಜ್ಯದಲ್ಲಿ ಇನ್ನು ಮುಂದೆ ವಸತಿ ಶಾಲೆಗಳ ಪ್ರವೇಶಾತಿಯಲ್ಲಿ ಶೇ.25ರಷ್ಟು ಸೀಟುಗಳನ್ನು ಸ್ಥಳೀಯ ಮಕ್ಕಳಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದರು.
ಸಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿ ರಂಗನಾಥಪುರದಲ್ಲಿ ಪರಿಶಿಷ್ಟ ವರ್ಗಗಳ ಇಲಾಖೆಯ ವಸತಿ ಶಾಲಾ ಸಮುಚ್ಚಯದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 135 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಈ ವಸತಿ ಶಾಲೆಗಳು ಇರುವ ಗ್ರಾಮಗಳ ಮಕ್ಕಳಿಗೆ ಇದುವರೆಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಕೇವಲ ವಸತಿ ಶಾಲೆಯನ್ನು ಹೊರಗಿನಿಂದ ನೋಡಿ ಸಮಾಧಾನ ಪಡಬೇಕಾಗಿತ್ತು. ಆದರೆ ಇದುವರೆಗೂ ಕಾನೂನನ್ನು ಬದಲಿಸಿ ಇನ್ನು ಮುಂದೆ ವಸತಿ ಶಾಲೆಗಳು ಇರುವ ತಾಲೂಕಿನ ಸ್ಥಳೀಯ ಮಕ್ಕಳಿಗೆ ಶೇ. 25 ರಷ್ಟು ಸೀಟುಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು.
ವಸತಿ ಶಾಲೆಗಳು ಇರುವ ಗ್ರಾಮಗಳಲ್ಲಿ ಸ್ಥಳೀಯ ಮಕ್ಕಳು ಕೇವಲ ಕಟ್ಟಡ ನೋಡಿ ಸಂತೋಷ ಪಡಬಾರದು. ಈ ವಸತಿ ಶಾಲೆಯ ಸೌಲಭ್ಯವೂ ಸ್ಥಳೀಯ ಮಕ್ಕಳಿಗೆ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಸ್ಥಳೀಯ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉತ್ತೀರ್ಣರಾಗಿ ಸರ್ಕಾರ ಒದಗಿಸಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸದ್ಯ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವ ವಸತಿ ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ. ಹಾಗಾಗಿ ಸರ್ಕಾರದ ವತಿಯಿಂದಲೇ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯಡಿ ಸುಮಾರು 4 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಇಡೀ ರಾಜ್ಯದಲ್ಲಿ ಶೇ. 96 ರಷ್ಟು ಫಲಿತಾಂಶ ಪಡೆದು ಮುಂದಿದ್ದಾರೆ.
ಈ ಬಾರಿ ಇನ್ನು 52 ವಸತಿ ಶಾಲೆಗಳನ್ನು ಮಂಜೂರು ಮಾಡುವಂತಹ ಕೆಲಸ ನಡೆಯಲಿದೆ. ವಸತಿ ಶಾಲೆಗಳು ಸುಗಮವಾಗಿ ನಡೆಯಲು ಸ್ಥಳೀಯ ಗ್ರಾಮಸ್ಥರ ಸಹಕಾರವೂ ಅತಿ ಮುಖ್ಯ. ಈ ನಿಟ್ಟಿನಲ್ಲಿ ಸ್ಥಳೀಯ ಜನತೆ ಸರ್ಕಾರದ ವಸತಿ ಶಾಲೆಗಳ ಸುಲಲಿತ ಸೇವೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಿರಾ ತಾಲ್ಲೂಕು ಬುಕ್ಕಾಪಟ್ಟಣದ ರಂಗನಾಥಪುರದಲ್ಲಿ ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ವರ್ಗಗಳ ವಸತಿ ಶಾಲೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಶೀಘ್ರವಾಗಿ ಈ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳ ಕಲಿಕೆಗೆ ಅನುವು ಮಾಡಿಕೊಡಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ಈ ವಸತಿ ಶಾಲೆ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಕ್ಷೇತ್ರದಲ್ಲಿ 5 ಹಾಸ್ಟೆಲ್ ನಿರ್ಮಾಣಕ್ಕೆ 125 ರಿಂದ 130 ಕೋಟಿ ರೂ. ಹಣ ತಂದು ನಿರ್ಮಾಣ ಮಾಡಲಾಗುತ್ತಿದೆ. ಗುತ್ತಿಗೆದಾರರು ಆದಷ್ಟು ಬೇಗ ಈ ವಸತಿ ಶಾಲೆಯ ಕಟ್ಟಡ ಕಾಮಗಾರಿ ಮುಗಿಸಬೇಕು ಎಂದು ಅವರು ಹೇಳಿದರು.

About The Author

You May Also Like

More From Author

+ There are no comments

Add yours