ಇನ್‍ಪ್ಲೂಎನ್‍ಜಾ ಪ್ಲೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದೆ; ಜಿಲ್ಲಾಧಿಕಾರಿ ಎಚ್ಚರಿಕೆ

1 min read

ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ರಾಜ್ಯಗಳಲ್ಲಿ ಈ ರೋಗವು ಹರಡುತ್ತಿದೆ; ಜಿಲ್ಲಾಧಿಕಾರಿ

Tumkurnews
ತುಮಕೂರು; ಭಾರತದಲ್ಲಿ ಋತುಮಾನದ ಇನ್‍ಪ್ಲೂಎನ್‍ಜಾ ಪ್ಲೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್‍ಪ್ಲೂಎನ್‍ಜಾ ನಿಯಂತ್ರಣ ಹಾಗೂ ತಡೆಗಟ್ಟುವ ಚಟುವಟಿಕೆಗಳನ್ನು ಹೆಚ್ಚಿಸುವಂತೆ ಹಾಗೂ ಜಿಲ್ಲೆಯ ಸಾರ್ವಜನಿಕರಲ್ಲಿ ಫ್ಲೂ ಕುರಿತ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ತುಮಕೂರು ಡಿಹೆಚ್‍ಓ ಮತ್ತು ಟಿಹೆಚ್‍ಓ ಅವರಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ರಾಜ್ಯಗಳಲ್ಲಿ ಈ ರೋಗವು ಹರಡುತ್ತಿದ್ದು, ಈ ಸಾಂಕ್ರಾಮಿಕ ರೋಗ ಭಾದಿತ ವ್ಯಕ್ತಿಯು ಕೆಮ್ಮುವಾಗ ಅಥವಾ ಸೀನುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ರೋಗ ಹರಡಬಹುದಾಗಿದ್ದು, ಅದರಲ್ಲೂ 15 ವರ್ಷ ಒಳಗಿನ ಹಾಗೂ 65 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಪ್ಲೂ ಬರುವ ಸಾಧ್ಯತೆ ಹೆಚ್ಚಿದೆ. ಕೆಮ್ಮು, ನೆಗಡಿ ಇದ್ದವರು ಮಾಸ್ಕ್ ಧರಿಸಿಕೊಂಡು, ಸ್ವಚ್ಚತೆ ಕಾಪಾಡಿಕೊಳ್ಳಬೇಕು, ಮುನ್ನೆಚ್ಚರಿಕೆ ವಹಿಸಬೇಕು, ಆರೋಗ್ಯ ಕಾರ್ಯಕರ್ತೆಯರು ಪ್ಲೂ ಲಸಿಕೆಯನ್ನು ಪಡೆಯುವುದನ್ನು ಕಡ್ಡಾಯ ಮಾಡಬೇಕೆಂದು ತಿಳಿಸಿದರು. ಚುನಾವಣಾ ಸಮೀಪಿಸಿದಂತೆ ಕುಕ್ಕರ್, ಸೀರೆ ಇತರೆ ಉಡುಗೊರೆಗಳನ್ನು ಕೊಡುವುದರ ಮೂಲಕ ಮತದಾರರಿಗೆ ಆಮಿಷವನ್ನೊಡ್ಡಿ ಮತ ಸೆಳೆಯುವ ಪ್ರಯತ್ನ ಮಾಡುವವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು ಹಾಗೂ ವಸ್ತುಗಳನ್ನು ಜಪ್ತಿ ಮಾಡಬೇಕು. ಆರ್ ಒ ಮತ್ತು ಎಆರ್’ಓಗಳು ಈ ನಿಟ್ಟಿನಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು.
ಯುಡಿಐಡಿ ಕಾರ್ಡ್ ವಿತರಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲೂ ನಿಗದಿತ ಗುರಿ ಮುಟ್ಟಲಾಗಿದ್ದು, ಕುಣಿಗಲ್, ಗುಬ್ಬಿ, ಮಧುಗಿರಿ ತಾಲ್ಲೂಕುಗಳ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಸೂಚಿಸಿದರು.
ಮತದಾರರ ಪಟ್ಟಿ ನಿರಂತರ ಪರಿಷ್ಕರಣೆಯಡಿ ಅರ್ಜಿಗಳ ವಿಲೇವಾರಿಯನ್ನು ಆದ್ಯತೆ ಮೇರೆಗೆ ಮುಗಿಸಬೇಕು. ತುಮಕೂರು ನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಬಾಕಿ ಪ್ರಕರಣಗಳು ಇದ್ದು, ಪಾಲಿಕೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ರೂಟ್ ಮ್ಯಾಪ್ ಮತ್ತು ಸೆಕ್ಟರ್ ಮ್ಯಾಪ್‍ಗಳನ್ನು ಸರಿಯಾಗಿ ಪರಿಶೀಲಿಸಿ ಆರ್’ಓಗಳು ಸಿದ್ಧಪಡಿಸಿ ಕಳುಹಿಸಬೇಕು, ಮತಗಟ್ಟೆಗಳಲ್ಲಿ ಮೂಲಸೌಕರ್ಯಗಳನ್ನು ಪರಿಶೀಲಿಸಬೇಕು ಎಂದರು. ಆರ್.ಓ., ಎ.ಆರ್.ಓ ಹಾಗೂ ಮುಖ್ಯಾಧಿಕಾರಿಗಳು ಕಡ್ಡಾಯವಾಗಿ ಮತಗಟ್ಟೆಗಳಿಗೆ ಭೇಟಿ ನೀಡಬೇಕು ಮತ್ತು ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಬೇಕು, ಸದ್ಯದಲ್ಲೇ ಪ್ರಿಂಟಿಂಗ್ ಪ್ರೆಸ್ ಮತ್ತು ಕೇಬಲ್ ಮಾಲೀಕರ ಸಭೆ ಕರೆದು ನಿಯಮ 171-ಎ ಬಗ್ಗೆ ಮಾಹಿತಿ ನೀಡಬೇಕು. ಪಾವಗಡ, ಸಿರಾ, ಮಧುಗಿರಿ ಗಡಿ ಭಾಗದ ತಾಲ್ಲೂಕುಗಳಲ್ಲಿ ಈಗಾಗಲೇ ಗಡಿ ಸಭೆಗಳನ್ನು ನಡೆಸಿ ಚೆಕ್‌ ಪೋಸ್ಟ್ ತೆರೆಯಲಾಗಿದ್ದು, ಈ ಚೆಕ್‌ ಪೋಸ್ಟ್’ಗಳಿಗೆ ನಿಯಮಿತವಾಗಿ ಅಧಿಕಾರಿಗಳನ್ನು ನೇಮಿಸುವಂತೆ ಸೂಚಿಸಿದರು.
ಚುನಾವಣಾ ಕಾರ್ಯದ ನಿಮಿತ್ತ ಜಿಲ್ಲೆಗೆ ಆಗಮಿಸುವ ಚುನಾವಣಾ ವೀಕ್ಷಕರು ವಾಸ್ತವ್ಯ ಮಾಡುವ ಐಬಿ, ಲೈಸನ್ ಅಧಿಕಾರಿ, ಸ್ಟೆನೋಗ್ರಾಫರ್, ಗಣಕಯಂತ್ರ ಸೇರಿದಂತೆ ಮೂಲಸೌಕರ್ಯಗಳ ವ್ಯವಸ್ಥೆಯನ್ನು ಪರಿಶೀಲಿಸಬೇಕೆಂದರು.
ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಕೆ ವಿದ್ಯಾಕುಮಾರಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕಿರುವ ಕುರಿತು ಬಿಇಓಗಳಿಂದ ಪಟ್ಟಿ ಪಡೆದು ನರೇಗಾ ಕನ್ವರ್‍ಜೆನ್ಸ್ ಅನುದಾನ ಬಳಸಿ ತ್ವರಿತ ಗತಿಯಲ್ಲಿ ಬಾಲಕ ಮತ್ತು ಬಾಲಕಿಯರ ಪ್ರತ್ಯೇಕ ಶೌಚಾಲಯವನ್ನು ಶಾಲಾವರಣದಲ್ಲಿ ನಿರ್ಮಿಸಬೇಕು. ಶೌಚಾಲಯವಿಲ್ಲದ ಮತಗಟ್ಟೆಗಳ ಬಗ್ಗೆ ಪಟ್ಟಿ ಮಾಡಿ ನರೇಗಾ ಅಡಿ ಕಾರ್ಯಯೋಜನೆಯನ್ನು ಸಿದ್ದಪಡಿಸಿ ಸಲ್ಲಿಸಿ, ಅನುಮೋದನೆ ಪಡೆದು ಶೌಚಾಲಯ ನಿರ್ಮಾಣ ಮಾಡುವಂತೆ ಸೂಚಿಸಿದರು.
ಇ.ವಿ.ಎಂ., ವಿವಿಪ್ಯಾಟ್ ಮೂಲಕ ಸಾರ್ವಜನಿಕರಿಗೆ ಮತದಾನದ ಕುರಿತು ಅರಿವು ಮೂಡಿಸುವ ಕೆಲಸ ಜಿಲ್ಲೆಯಲಿ ವ್ಯಾಪಕವಾಗಿ ನಡೆದಿರುತ್ತದೆ. ಇಂದು ಕೊನೆಯ ದಿನವಾಗಿದ್ದು, ವಿವಿಪ್ಯಾಟ್‍ಗಳನ್ನು ಸುರಕ್ಷಿತವಾಗಿ ಸ್ಟ್ರಾಂಗ್ ರೂಮ್‍ನಲ್ಲಿ ಇರಿಸುವಂತೆ ಸೂಚಿಸಿದ ಅವರು, ಎಷ್ಟು ಮಂದಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ ಎಂಬುವುದರ ಕುರಿತು ವರದಿ ನೀಡಬೇಕು ಎಂದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours