ಹುಳಿಯಾರು ಕ್ವಾರಂಟೈನ್ ಕೇಂದ್ರದಲ್ಲಿ ಊಟವಿಲ್ಲ; ಜನರೊಂದಿಗೆ ಬೀದಿ ರಂಪ ಮಾಡಿಕೊಂಡ ಅಧಿಕಾರಿ

1 min read

ತುಮಕೂರು(ಜು.9) tumkurnews.in

ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡುವ ವಿಚಾರದಲ್ಲಿ ಅಧಿಕಾರಿ ಮತ್ತು ಸಾರ್ವಜನಿಕರ ನಡುವೆ ಹುಳಿಯಾರಿನಲ್ಲಿ ಹಾದಿ ಬೀದಿಯಲ್ಲಿ ಗಲಾಟೆ ನಡೆದಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪಟ್ಟಣದ ಬಿಸಿಎಂ ಹಾಸ್ಟೆಲ್ ನಲ್ಲಿ ಕೇವಲ ನಾಲ್ಕು ಜನರಿಗೆ ಊಟದ ವ್ಯವಸ್ಥೆ ಮಾಡಲು ಅಧಿಕಾರಿಗಳು ವಿಫಲರಾಗಿದ್ದು, ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆ ಬೀದಿಗೆ ಬಂದಿದೆ.
ಕೆಂಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆ.ಸಿ ಪಾಳ್ಯ ಗ್ರಾಮದಲ್ಲಿ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಓರ್ವ ಮಹಿಳೆಯನ್ನು ಹುಳಿಯಾರು ಪಟ್ಟಣದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಇಲ್ಲಿ ಈ ಮೊದಲೇ ಮೂವರಿದ್ದು, ಈಕೆಯನ್ನು ಸೇರಿಸಿ ನಾಲ್ವರು ಆಗಿದ್ದಾರೆ. ಈ ಯಾರಿಗೂ ಸರಿಯಾದ ರೀತಿಯಲ್ಲಿ ಊಟದ ವ್ಯವಸ್ಥೆ ಮಾಡದ ಕಾರಣ ಅವರವರೇ ಮನೆಯಿಂದ ಊಟ ತರಿಸಿಕೊಂಡು ಸೇವಿಸಿದ್ದಾರೆ.

ಈ ಬಗ್ಗೆ ಗುರುವಾರ ಬೆಳಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯನ್ನು ಸ್ಥಳಕ್ಕೆ ಕರೆಸಿ ಪ್ರಶ್ನಿಸಿದ್ದಾರೆ. ಆಗ ಮುಖ್ಯಾಧಿಕಾರಿ ಮಂಜುನಾಥ್, ‘ಕೆ.ಸಿ ಪಾಳ್ಯ ನನ್ನ ವ್ಯಾಪ್ತಿಗೆ ಬರುವುದಿಲ್ಲ, ಊಟ ಕೊಡುವುದು ನಮ್ಮ ಕೆಲಸವಲ್ಲ, ಅದು ಬಿಸಿಎಂ ಇಲಾಖೆಯ ಕೆಲಸ’ ಎಂದು ಸಮಜಾಯಿಷಿ ನೀಡಿದ್ದಾರೆ. ಈ ವೇಳೆ ಸಾರ್ವಜನಿಕರು ಮತ್ತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನಡುವೆ ತೀವ್ರವಾದ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಪಿಎಸ್ಐ ಕೆ.ಟಿ ರಮೇಶ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕೇವಲ ನಾಲ್ಕು ಜನರಿಗೆ ಊಟದ ವ್ಯವಸ್ಥೆ ಮಾಡಲು ವಿಫಲರಾಗಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

About The Author

You May Also Like

More From Author

+ There are no comments

Add yours