ಅವಧಿಗೂ ಮುಂಚೆ ಬೇಸಿಗೆ ಎದುರಿಸಲು ಸಿದ್ದರಾಗಿ: ಶಾಸಕ ಜಿ.ಬಿ.ಜ್ಯೋತಿಗಣೇಶ್
Tumkur news
ತುಮಕೂರು: ಈ ಬಾರಿ ಅವಧಿಗೂ ಮುಂಚೆಯೇ ಬೇಸಿಗೆ ಪ್ರಾರಂಭವಾಗಿರುವ ಅನುಭವ ನಮ್ಮೆಲ್ಲರಿಗೂ ಆಗುತ್ತಿದೆ. ತುಮಕೂರು ನಗರದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ನಗರ ಶಾಸಕ ಜ್ಯೋತಿ ಗಣೇಶ್ ಸೂಚಿಸಿದರು.
ಬೇಸಿಗೆ ಎದುರಿಸಲು ಅಧಿಕಾರಿಗಳು ಈ ಕೂಡಲೇ ಕಾರ್ಯಪ್ರವೃತ್ತರಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬವಣೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಕಳೆದ 6 ವರ್ಷಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಿದ್ದೇವೆ. ಈ ಬಾರಿಯೂ ಸಹ ಸಾರ್ವಜನಿಕರಿಗೆ ನೀರಿನ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಹಾಗೂ ತುಮಕೂರು ಮಹಾನಗರಪಾಲಿಕೆ ವತಿಯಿಂದ ಟಾಸ್ಕ್ ಫೋರ್ಸ್ ರಚಿಸಿ ನೀರಿನ ಬವಣೆ ಉಂಟಾದ ಪ್ರದೇಶಗಳಲ್ಲಿ ತುರ್ತಾಗಿ ನೀರಿನ ಸಮಸ್ಯೆ ಪರಿಹರಿಸಲು ಸಹಾಯವಾಣಿ ತೆರೆಯಲು ಕ್ರಮಹಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯ ವಸತಿ ವಂಚಿತರಿಗೆ ಹಾಗೂ ಪೌರಕಾರ್ಮಿಕರಿಗೆ ವಸತಿ ನೀಡಲು ಪ್ರಯತ್ನ: ಜ್ಯೋತಿಗಣೇಶ್
ಪಾಲಿಕೆ ಅಧಿಕಾರಿಗಳೊಂದಿಗೆ ಶುಕ್ರವಾರ ತುರ್ತು ಸಭೆ ನಡೆಸಿದ ಅವರು, ಪಾಲಿಕೆಯ ಕುಡಿಯುವ ನೀರಿನ ಸಂಗ್ರಹಗಾರದ ಮಟ್ಟ, ನೀರಿನ ಶುದ್ಧೀಕರಣ ಘಟಕಗಳ ಸ್ಥಿತಿ, ಮಹಾನಗರಪಾಲಿಕೆ ಬೋರ್ವೆಲ್ಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು.
ಬುಗುಡನಹಳ್ಳಿ ಜಲಸಂಗ್ರಹಾರದಲ್ಲಿ ಪ್ರಸ್ತುತ ದಿನದವರೆಗೂ 231 ಎಂ.ಸಿ.ಎಫ್.ಟಿ ನೀರು ಸಂಗ್ರಹವಾಗಿದ್ದು, ಮುಂದಿನ ಎರಡು ತಿಂಗಳವರೆಗೂ ನಗರಕ್ಕೆ ನೀರು ಸರಬರಾಜು ಮಾಡಬಹುದು ಹಾಗೂ ಹೆಬ್ಬಾಕ ಅಮಾನಿಕೆರೆ ಜಲಸಂಗ್ರಹಾರದಲ್ಲಿ ಪ್ರಸ್ತುತ ದಿನದವರೆಗೂ. 90 ಎಂ.ಸಿ.ಎಫ್.ಟಿ ನೀರು ಸಂಗ್ರಹವಾಗಿದ್ದು, 60 ಎಂ.ಸಿ.ಎಫ್.ಟಿ ಯಷ್ಟು ಬಳಸಲು ಯೋಗ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬೇಸಿಗೆ ಕಾಲವಾಗಿರುವುದರಿಂದ ನೀರಿನ ಬೇಡಿಕೆ ಅತ್ಯಂತ ಹೆಚ್ಚಿರುತ್ತದೆ. ಜಲ ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಿಸಲು ಇರುವ ಮೋಟಾರ್ ಪಂಪುಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು, ಹೆಚ್ಚುವರಿಯಾಗಿ ಇನ್ನೆರಡು ಮೋಟಾರು ಪಂಪುಗಳನ್ನು ದಾಸ್ತಾನು ಮಾಡಿಟ್ಟುಕೊಂಡಿರಬೇಕು, ಯಾವ ಸಂದರ್ಭದಲ್ಲಿಯೂ ಮೋಟಾರ್ ಪಂಪ್ಗಳ ಸಮಸ್ಯೆ ಉಂಟಾಗಬಾರದು, ಮುನ್ನೆಚರಿಕೆಯಾಗಿ ವಾಟರ್ ಟ್ಯಾಂಕರ್’ಗಳನ್ನು ಸಹ ಸುಸ್ಥಿತಿಯಲ್ಲಿಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು: ಮಹಾನಗರ ಪಾಲಿಕೆಯಿಂದ ಮಹತ್ವದ ಸೂಚನೆ: ತಪ್ಪಿದಲ್ಲಿ ಬೀಳುತ್ತೆ ದಂಡ!
ಪಾಲಿಕೆಯ ಬೋರ್ವೆಲ್ಗಳ ಇಂದಿನ ಸ್ಥಿತಿಗತಿಯ ಬಗ್ಗೆ ಶೀಘ್ರವಾಗಿ ಮಾಹಿತಿ ನೀಡಿ, ದುರಸ್ಥಿ ಮಾಡಬೇಕಾಗಿರುವ ಬೋರ್ವೆಲ್ಗಳನ್ನು ತಕ್ಷಣವೇ ದುರಸ್ಥಿ ಮಾಡಲು ಶೀಘ್ರ ಕ್ರಮವಹಿಸಲು ಶಾಸಕರು ನಿರ್ದೇಶನ ನೀಡಿದರು.
ಶುಚಿತ್ವಕ್ಕೆ ಆದ್ಯತೆ ನೀಡಿ: ಬೇಸಿಗೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುವುದರಿಂದ ವಾರ್ಡ್’ಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಯು.ಜಿ.ಡಿ ನೀರು ರಸ್ತೆಗಳಲ್ಲಿ ನಿಲ್ಲದಂತೆ, ಯು.ಜಿ.ಡಿ ಚೇಂಬರ್’ಗಳಲ್ಲಿ ಕೊಳಚೆ ನೀರು ತುಂಬಿ ಹರಿಯದಂತೆ ಮುಂಜಾಗ್ರತೆ ವಹಿಸಬೇಕು, ಕೆಲವು ವಾರ್ಡ್’ಗಳಲ್ಲಿ 2ನೇ ಹಂತದ ಒಳಚರಂಡಿ ವ್ಯವಸ್ಥೆ ಲಿಂಕ್ ಆಗದೇ ಇರುವ ಕಾರಣ ಅಲ್ಲಲ್ಲಿ ಪಿಟ್ಗಳಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದು, ಜನವಸತಿ ಬಡಾವಣೆಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು, ಹಲವಾರು ದೂರುಗಳು ನನ್ನ ಗಮನಕ್ಕೆ ಬಂದಿದ್ದು, ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಲು ಮಹಾನಗರಪಾಲಿಕೆಯ ಅಧಿಕಾರಿಗಳು ಮುಂದಾಗಬೇಕೆಂದು ಶಾಸಕ ಜ್ಯೋತಿ ಗಣೇಶ್ ಸೂಚನೆ ನೀಡಿದರು.
ನೀರನ್ನು ಮಿತವಾಗಿ ಬಳಸಲು ಮನವಿ: ವಾಡಿಕೆಗಿಂತ ಮುಂಚೆಯೇ ಈ ಬಾರಿ ಬೇಸಿಗೆ ಪ್ರಾರಂಭವಾಗಲಿದ್ದು, ಹವಮಾನ ಇಲಾಖೆಯ ವರದಿಯಂತೆ ಹೆಚ್ಚು ಉಷ್ಣಾಂಶ ತುಮಕೂರು ಜಿಲ್ಲೆಯಲ್ಲಿ ಇರಲಿದೆ. ನೀರಿನ ಅವಶ್ಯಕತೆ ಈ ಬಾರಿ ಹೆಚ್ಚಾಗಿರುವುದರಿಂದ ಸಾರ್ವಜನಿಕರು ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಕಾರ್ಯಪಾಲಕ ಇಂಜಿನಿಯರ್ ಪ್ರವೀಣ್, ಸಂದೀಪ್ ಹಾಗೂ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುಪ್ರಿಯ, ಪವನ್ ಹಾಜರಿದ್ದರು.
ತುಮಕೂರು: ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ
+ There are no comments
Add yours