Tumkurnews
ತುಮಕೂರು; ಶಾಸಕ ಜ್ಯೋತಿಗಣೇಶ್ ಅಭಿಮಾನಿ ಬಳಗ, ಡಾ.ರೆಡ್ಡಿಸ್ ಫೌಂಡೇಶನ್ ಹೈದ್ರಾಬಾದ್ ಹಾಗೂ ಟೀಮ್ ಲೀಸ್ ಬೆಂಗಳೂರು ಇವರ ಸಹಯೋಗದೊಂದಿಗೆ ಆ.28ರಂದು ನಗರದ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಸದಸ್ಯ ಹಾಗೂ ಜಿ.ಬಿ ಜ್ಯೋತಿಗಣೇಶ್ ಅಭಿಮಾನಿ ಬಳಗದ ಎಚ್. ಮಲ್ಲಿಕಾರ್ಜುನಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರ ಹಾಗೂ ಜಿಲ್ಲೆಯ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ. ಆ.28ರ ಭಾನುವಾರ ನಡೆಯುವ ಉಚಿತ ಉದ್ಯೋಗ ಮೇಳದಲ್ಲಿ ಟೊಯೋಟಾ, ಮಹೀಂದ್ರಾ, ಕಾರ್ಗಿಲ್ ಸೇರಿದಂತೆ 25ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿದ್ದು, 2000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ ಎಂದರು.
ಹತ್ತನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್, ಬಿ ಫಾರ್ಮ, ಡಿ ಫಾರ್ಮ ಕಲಿತಿರುವ ನಿರುದ್ಯೋಗಿ ಯುವಕ, ಯುವತಿಯರು, ಅಂಗವಿಕಲರು ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ಟೀಮ್ ಲೀಸ್ ಬೆಂಗಳೂರು ಸಂಸ್ಥೆಯ ಅರುಣ್ ಕುಮಾರ್ ಮಾತನಾಡಿ, ಕಳೆದ 15 ವರ್ಷಗಳಿಂದ ಯುವಜನರಿಗೆ ಉದ್ಯೋಗ ವಿನಿಮಯದಲ್ಲಿ ತೊಡಗಿರುವ ಸಂಸ್ಥೆ ನಮ್ಮದು. ಇದುವರೆಗೆ 7 ಲಕ್ಷ ಜನರಿಗೆ ವಿವಿಧ ರೀತಿಯ ಉದ್ಯೋಗ ದೊರಕಿಸುತ್ತಾ ಬಂದಿದೆ. ಪ್ರಸ್ತುತ ಆಗಸ್ಟ್ 28 ರಂದು ನಡೆಯುವ ಉದ್ಯೋಗ ಮೇಳದಲ್ಲಿ 25 ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸುತ್ತಿವೆ. ಮಹಿಳೆಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕೆಂಬ ಉದ್ದೇಶ ಹೊಂದಿದೆ. ಎರಡನೇ ಹಂತದ ನಗರವಾಗಿರುವ ತುಮಕೂರಿನ ನಿರುದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೇಳ ಆಯೋಜಿಸಲಾಗಿದೆ. ಯುವಜನರು ಈ ಉದ್ಯೋಗ ಮೇಳವನ್ನು ಹೆಚ್ಚಿನದಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹೈದರಾಬಾದ್ ಡಾ.ರೆಡ್ಡಿಸ್ ಫೌಂಡೇಷನ್ನ ಪ್ರದೀಪ್ ಕೆ.ಎನ್. ಮಾತನಾಡಿ, 2001 ರಲ್ಲಿ ಆರಂಭವಾದ ನಮ್ಮ ಫೌಂಡೇಷನ್ 80 ರಾಷ್ಟ್ರಗಳಲ್ಲಿ ತನ್ನ ಶಾಖೆ ಹೊಂದಿದ್ದು, ಭಾರತದಲ್ಲಿ 102 ಶಾಖೆಗಳನ್ನು ಹೊಂದಿದೆ. ತನ್ನ ಸಿ.ಎಸ್.ಆರ್ ನಿಧಿಯನ್ನು ಬಳಸಿಕೊಂಡು ಯುವಜನರಿಗೆ ಅವರ ಶೈಕ್ಷಣಿಕ ಅರ್ಹತೆಯನ್ನು ಆಧರಿಸಿ ತರಬೇತಿ ನೀಡಿ ಉದ್ಯೋಗ ದೊರಕಿಸುವ ಕೆಲಸ ಮಾಡುತ್ತಾ ಬಂದಿದೆ ಎಂದರು.
ಸಬ್ ಇನ್ಸ್ ಪೆಕ್ಟರ್ ಹಾಗೂ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ತುಮಕೂರು ಶಾಖೆಯಲ್ಲಿ ತಿಂಗಳಿಗೆ ಮೂವತ್ತು ಜನರಂತೆ ತರಬೇತಿ ನೀಡಿ ಉದ್ಯೋಗ ದೊರಕಿಸಲಾಗಿದೆ. ಆಗಸ್ಟ್ 28ರ ಉದ್ಯೋಗ ಮೇಳದಲ್ಲಿ ಸಂಸ್ಥೆ ಸಕ್ರಿಯವಾಗಿ ಪಾಲ್ಗೊಂಡು ಯುವಜನರ ಪರವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಬಿ ಜ್ಯೋತಿಗಣೇಶ್ ಅಭಿಮಾನಿ ಬಳಗದ ಶಂಕರ್, ಸತ್ಯಮಂಗಲ ಜಗದೀಶ್, ಜಗದೀಶ್, ವೇದಮೂರ್ತಿ, ಇಂದ್ರಕುಮಾರ್, ಪ್ರೀತಂ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಶೈಕ್ಷಣಿಕ ಸಾಲ ಮತ್ತು ಸ್ವಯಂ ಉದ್ಯೋಗ ನೇರಸಾಲ; ಅರ್ಜಿ ಆಹ್ವಾನ
+ There are no comments
Add yours