ಹಿಂದುಗಳು ಬಿಜೆಪಿಗೆ ಬೆಂಬಲಿಸಿ ಮತ್ತಷ್ಟು ಹಿಂದುಳಿದ್ದಿದ್ದಾರೆ: ಡಿ.ಟಿ.ಶ್ರೀನಿವಾಸ್
Tumkurnews.in
ತುಮಕೂರು: ಅಹಿಂದ ಅಂತಹ ಸಮಾಜಗಳಿಗೆ ಏನಾದರೂ ರಾಜಕೀಯ ಅಧಿಕಾರ ಸಿಕ್ಕಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ ಈ ತಳ ಸಮುದಾಯಗಳ ಸಬಲೀಕರಣಕ್ಕೆ ಒಂದಲ್ಲ ಒಂದು ಯೋಜನೆಯನ್ನು ರೂಪಿಸುತ್ತಲೇ ಬಂದಿದೆ. ಉಳುವವನೇ ಭೂಮಿಯ ಒಡೆಯ, ಹಾವನೂರು ಆಯೋಗದ ಮೂಲಕ ಮೀಸಲಾತಿ, ಇದರ ಫಲವಾಗಿ ಸರಕಾರಿ ಉದ್ಯೋಗ. ಬೇರೆ ಸಮುದಾಯಗಳ ರೀತಿಯಲ್ಲಿ ಪೈಪೋಟಿ ನೀಡಲು ಸಾಧ್ಯವಾಗದಿದ್ದರೂ ಒಂದಷ್ಟು ಪಾಲು ಪಡೆಯಲು ಸಾಧ್ಯವಾಗಿರುವುದು ಕಾಂಗ್ರೆಸ್ ಕಾಲದಲ್ಲಿ ಎಂದರು.
ಉಳುವವನೇ ಭೂಮಿ ಒಡೆಯ ಯೋಜನೆ ಫಲ ಎಲ್ಲಾ ವರ್ಗದ ಬಡವರಿಗೂ ಅನುಕೂಲವಾಗಿದೆ.ಬಂಗಾರಪ್ಪನವರ ಕಾಲದಲ್ಲಿ ಆರಾಧನೆ, ಆಶ್ರಯ,ಕನ್ನಡ ಮಾಧ್ಯಮ ಕೃಪಾಂಕ, ವೀರಪ್ಪ ಮೊಯಿಲಿ ಕಾಲದಲ್ಲಿ ತಂದ ಸಿಇಟಿ ಯಿಂದಾಗ ನನ್ನಂತಹ ಅನೇಕರು ಇಂಜಿನಿಯರ್, ಡಾಕ್ಟರ್ ಆಗಲು ಸಾಧ್ಯವಾಯಿತು. ನೀಟ್ ಹಗರಣದಿಂದ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದರು. ಆದರೆ ಸಿಇಟಿಯಿಂದ ಇದುವರೆಗೂ ಒಬ್ಬ ವಿದ್ಯಾರ್ಥಿಗೂ ಅನ್ಯಾಯವಾಗಿಲ್ಲ. ಸಿದ್ದರಾಮಯ್ಯನವರ ಅನ್ನಭಾಗ್ಯ, ಪಂಚಗ್ಯಾರಂಟಿ ಎಲ್ಲವೂ ಒಂದು ವರ್ಗಕ್ಕೆ ಸಿಮೀತವಾಗಿಲ್ಲ. ಕಾಂಗ್ರೆಸ್‌ಗೆ ಮತ ನೀಡದ, ಪಂಚ ಗ್ಯಾರಂಟಿಗಳನ್ನು ಟೀಕಿಸಿದವರೇ ಹೆಚ್ಚು ಫಲಾನುಭವಿಗಳು. ಪಂಚ ಗ್ಯಾರಂಟಿಗಳು ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದು ಡಿ.ಟಿ.ಶ್ರೀನಿವಾಸ್ ತಿಳಿಸಿದರು.
ರಾಷ್ಟ್ರಮಟ್ಟದಲ್ಲಿಯೂ ಹಿಂದುಳಿದ ವರ್ಗದ ನಾಯಕರ ಕೈಯಲ್ಲಿ ಅಧಿಕಾರ ಸಿಕ್ಕಂತಹ ಸಂದರ್ಭದಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳನ್ನು ಮೇಲೆತ್ತುವ ಕೆಲಸ ಆಗಿದೆ. ಇಂತಹ ಯಾವ ನಿರ್ದೇಶನವೂ ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ಇಲ್ಲ. ಮದ್ದು ಗುಂಡುಗಳೇ ಅವರ ಸಾಧನೆ ಎಂದು ಲೇವಡಿ ಮಾಡಿದ ಡಿ.ಟಿ.ಶ್ರೀನಿವಾಸ್, ರಾಷ್ಟ್ರಮಟ್ಟದಲ್ಲಿ ಹಿಂದುಳಿದ ಹಿಂದುಗಳು ಬಿಜೆಪಿಗೆ ಬೆಂಬಲಿಸಿ ಮತ್ತಷ್ಟು ಹಿಂದುಳಿದ್ದಿದ್ದೇವೆ. ಬಿಜೆಪಿಯ ಬಣ್ಣದ ಮಾತಿಗೆ ಮರುಳಾಗಿ, ಆತ್ಮಸಾಕ್ಷಿಗೆ ವಂಚನೆ ಮಾಡಿಕೊಂಡು ಬಿಜೆಪಿಗೆ ಮತ ನೀಡಿದ ಪರಿಣಾಮ ನಮ್ಮ ಸ್ಥಿತಿ ಇಂದು ಈ ಮಟ್ಟಕ್ಕೆ ಬಂದು ನಿಂತಿದೆ. ಬೆಲೆ ಹೆಚ್ಚಳದಿಂದ ಜನರು ತತ್ತರಿಸಿ ಹೊಗಿದೆ. ರೂಪಾಯಿ ಮೌಲ್ಯ ಕುಸಿತ ಇನ್ನಿಲ್ಲದಂತೆ ಜನರನ್ನು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ದುರಾಡಳಿತವನ್ನು ಜನತೆಯ ಮುಂದಿಡುವ ಕೆಲಸವನ್ನು ನಾವು ಮಾಡಬೇಕಾಗಿದೆ. ಜಿ.ಎಸ್.ಟಿ. ಪೋನ್‌ನಿಂದ ಸಣ್ಣ,ಪುಟ್ಟ ವ್ಯಾಪಾರಸ್ಥರು ತತ್ತರಿಸಿ ಹೋಗಿದ್ದಾರೆ. ಸಣ್ಣ ಪುಟ್ಟ ಜಾತಿಗಳು ರಾಜಕೀಯ ಅಧಿಕಾರ ಪಡೆದಿದ್ದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ, ನಾನು ಕೂಡ ಐದು ವರ್ಷಗಳ ಕಾಲ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಇಂದು ಜಿಲ್ಲಾಧ್ಯಕ್ಷನಾಗಿದ್ದೇನೆ. ತಾಳ್ಮೆ ಇದ್ದರೆ ಒಂದಲ್ಲ ಒಂದು ದಿನ ಅಧಿಕಾರ ಸಿಗುತ್ತದೆ. ಜನರೇ ಕಾಂಗ್ರೆಸ್‌ಗೆ ಶ್ರೀರಕ್ಷೆ. ಹಾಗಾಗಿ ಅವರಿಗೆ ಪಕ್ಷದ ಕಾರ್ಯಕ್ರಮಗಳು ತಲುಪುವಂತೆ ಮಾಡಬೇಕಾಗಿದೆ. ಆ ಮೂಲಕ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಬೇಕೆಂದರು.
ವೇದಿಕೆಯಲ್ಲಿ ಮಾಜಿ ಶಾಸಕ ಡಾ.ರಫೀಕ್ ಅಹಮದ್, ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್, ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ, ಡಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಅನಿಲ್, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ನಾಗಮಣಿ, ಸೌಭಾಗ್ಯ, ಷಣ್ಮುಗಪ್ಪ, ರೇವಣ್ಙಸಿದ್ದಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
