ಆಗಸ್ಟ್’ನಲ್ಲಿ ತಿಪಟೂರುಗೆ ಮುಖ್ಯಮಂತ್ರಿ ಭೇಟಿ: ಜಿಪಂ ಸಿಇಒ ಅಶ್ವಿಜ
Tumkur news
ತುಮಕೂರು: ಅಧಿಕಾರಿಗಳು ಕಡ್ಡಾಯವಾಗಿ ಕರ್ತವ್ಯ ಆಪ್ ಬಳಸಿ ನಿಗಧಿತ ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸಿ ಹಾಜರಾತಿಯನ್ನು ಹಾಕಬೇಕು. ತಮ್ಮ ಕಚೇರಿಯಲ್ಲಿ ಭ್ರಷ್ಟಾಚಾರ ತಡೆಯುವ ಸಲುವಾಗಿ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ನೋಟೀಸ್ ಬೋರ್ಡ್ನಲ್ಲಿ ಹಾಕಬೇಕು. ಇಲಾಖೆ ವ್ಯಾಪ್ತಿಯಲ್ಲಿ ಚಾಲನೆಯಲ್ಲಿರುವ ಕಟ್ಟಡ ಕಾಮಗಾರಿಗಳನ್ನು ಆಗಸ್ಟ್ ವೇಳೆಗೆ ಪೂರ್ಣಗಳಿಸಿ ಇಚ್ಚಾಶಕ್ತಿಯಿಂದ ಕೆಲಸ ನಿರ್ವಹಿಸಬೇಕು ಎಂದು ಜಿಪಂ ಸಿಇಒ ಅಶ್ವಿಜ ಬಿ.ವಿ ತಿಳಿಸಿದರು.
ತಿಪಟೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಪ್ರಗತಿಯಲ್ಲಿರುವ 40 ಅಂಗನವಾಡಿ ಕಟ್ಟಡ ಕಾಮಗಾರಿಗಳು ಮತ್ತು ರಸ್ತೆ ಡಾಂಬರೀಕರಣ ಕಾಮಗಾರಿಗಳನ್ನು ಆಗಸ್ಟ್ ವೇಳೆಗೆ ಪೂರ್ಣಗೊಳಿಸಬೇಕು. ಆಗಸ್ಟ್’ನಲ್ಲಿ ಮುಖ್ಯಮಂತ್ರಿಗಳು ಈ ಕಾಮಗಾರಿಗಳನ್ನು ಉದ್ಘಾಟನೆ ಮಾಡಲು ಆಗಮಿಸುತ್ತಿದ್ದು, ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಆದೇಶಿಸಿದರು.
ಕೃಷಿ ಹಾಗೂ ತೋಟಗಾರಿಕಾ ಇಲಾಖೆಯವರು ಜಂಟಿಯಾಗಿ ಸಮೀಕ್ಷೆ ನಡೆಸಿ ತೆಂಗು ಮತ್ತು ಅಡಿಕೆ ಬೆಳೆಯುವ ರೈತರನ್ನ ಗುರುತಿಸಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ತಿಳಿಸಬೇಕು. ಇದರಿಂದ ಅಂತರ್ಜಲ ಅಭಿವೃದ್ದಿ ಹಾಗೂ ಮೀನು ಕೃಷಿಗೆ ಸಹಕಾರಿಯಾಗುವುದರ ಮೂಲಕ ರೈತರನ್ನು ಸ್ವಾವಲಂಬಿಗಳಾಗಿಸಬಹುದು ಎಂದರು.
ತಿಪಟೂರು ತಾಲ್ಲೂಕಿನಾದ್ಯಂತ ಜಲ್‌ಜೀವನ್ ಮಿಷನ್ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದರ ಮೂಲಕ ಹರ್ ಘರ್ ಜಲ್ ಘೋಷಣೆ ಮಾಡಲು ಸಿದ್ದರಾಗುವಂತೆ ಆದೇಶಿಸಿದರು. ತಾಲ್ಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಂಬಂದಿಸಿದಂತೆ ವಿಲೇಜ್ ವಾಟರ್ ಅಂಡ್ ಸ್ಯಾನಿಟೈಸೇಶನ್ ಸಮಿತಿಯನ್ನು ರಚನೆ ಮಾಡಿ ಗ್ರಾಮೀಣ ಭಾಗದ ಮಹಿಳೆಯರಿಗೆ ನೀರಿನ ಶುದ್ಧತೆಯ ಬಗ್ಗೆ ಅರಿವನ್ನು ಮೂಡಿಸುವ ಕೆಲಸ ಮಾಡಬೇಕು. ಯಾವ ಗ್ರಾಮದಲ್ಲಿಯೂ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕಾರ್ಯ ಶೀಘ್ರವಾಗಿ ಮಾಡುವಂತೆ ತಿಳಿಸಿದರು.
ತಾಲ್ಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಶೌಚಾಲಯ ಹಾಗೂ ಬೆಡ್‌ಗಳನ್ನು ದುರಸ್ತಿ ಮಾಡಿಸಿ, ಸರ್ಕಾರಿ ಆಸ್ಪತ್ರೆಯನ್ನು ಬೇರೆ ಯಾವುದೇ ಖಾಸಗೀ ಆಸ್ಪತ್ರೆಯನ್ನು ಮೀರಿಸುವ ಮಟ್ಟದಲ್ಲಿರಿಸುವಂತೆ ಸೂಚಿಸಲಾಯಿತು.
ತಾಲ್ಲೂಕಿನಾದ್ಯಂತ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಗುರುತಿಸಿ ಶಾಲಾ ಕಾಂಪೌಂಡ್ ಹಾಗೂ ಶೌಚಾಲಯಗಳನ್ನು ದುರಸ್ತಿ ಮಾಡಿಸಲು ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕಾಮಗಾರಿಗಳ ಪ್ರಸ್ತಾವನೆಯನ್ನು ನೀಡಬೇಕು. ಶಾಲೆಗಳಲ್ಲಿ ಶೌಚಾಲಯ ಸ್ವಚ್ಚತೆಗೆ ಸಂಬಂದಿಸಿದಂತೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅನುದಾನ ನೀಡಲಾಗುತ್ತಿದ್ದು, ಸಿಬ್ಬಂದಿಗಳನ್ನು ಕೂಡಲೇ ನೇಮಕ ಮಾಡಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಆಯಾ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಕೂಡಲೇ ನೀಡಬೇಕು. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಅಂಗವಾಗಿ ಕಾಲೇಜು ಪ್ರಾಂಶುಪಾಲರೊಂದಿಗೆ ಸಭೆ ನಡೆಸಿ ಬಸ್‌ಪಾಸ್‌ಗೆ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಪಟ್ಟಿ ಮಾಡಬೇಕು. ಅವರಿಗೆ ಸರ್ಕಾರ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಣೆ ಮಾಡಲಿದೆ. ಪ್ರತೀ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭಾರತ್ ಜೋಡೋ ಕ್ಲಬ್ ಅನ್ನು ರಚನೆ ಮಾಡಬೇಕು. ಸಮುದಾಯ ಭವನ ಹಾಗೂ ಶಾಲಾ ಆವರಣದಲ್ಲಿ ಕ್ಲಬ್‌ನ ಸದಸ್ಯರಿಗೆ ವಿವಿಧ ಚಟುವಟಕೆಗಳನ್ನು ಆಯೋಜನೆ ಮಾಡಬೇಕು. ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಈ ಕ್ಲಬ್‌ನ ಮೇಲ್ವಿಚಾರಕರಾಗಿರುತ್ತಾರೆ ಎಂದರು.
ಪ್ರತಿ ಗ್ರಾಮದಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿ ಮಾಹಿತಿ ನೀಡಬೇಕು. ಆಶ್ರಯ ಯೋಜನೆ ಅಡಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯು 200 ಸೈಟ್‌ಗಳನ್ನು ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಗ್ರಾಮ ಸಭೆಗಳನ್ನು ನಡೆಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ಸಿದ್ದಪಡಿಸಬೇಕು. ಈಗಾಗಲೇ ತುಮಕೂರು ಜಿಲ್ಲೆಯಾದ್ಯಂತ 12 ಸಾವಿರ ಸೈಟ್‌ಗಳನ್ನು ಗುರುತಿಸಿದ್ದು 6 ಸಾವಿರ ಫಲಾನುಭವಿಗಳ ಆಶ್ರಯ ಯೋಜನೆ ಅಡಿ ನಿವೇಶನ ಪಡೆಯಲು ಅರ್ಹರಿದ್ದಾರೆ. ಇನ್ನು ಗ್ರಾಮಗಳಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಸಣ್ಣ ಮಸಿಯಪ್ಪ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ಸ್ವಚ್ಚ ವಾಹಿನಿ ವಾಹನಗಳು ಮನೆ ಮನೆಗೆ ತೆರಳಿ ಕಸ ಸಂಗ್ರಹಣೆ ಮಾಡಿ ಸಂಸ್ಕರಿಸಿ, ಸಂಗ್ರಹವಾದ ಕಸದ ತೂಕವನ್ನು ದಾಖಲಿಸಬೇಕು. ಮಾದರಿ ಗ್ರಾಮ ಘೋಷಣೆ ಮಾಡುವುದರ ಸಲುವಾಗಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಪಿಡಿಒಗಳಿಗೆ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಎಂ. ಸುದರ್ಶನ್ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಲ್ಲಾ ಗ್ರಾಮಗಳ ಅಂಗನವಾಡಿ ಮಕ್ಕಳಿಗೆ ಎರಡು ಜತೆ ಶಾಲಾ ಸಮವಸ್ತ್ರ ಹಾಗೂ ಶೂಗಳನ್ನು ವಿತರಣೆ ಮಾಡಬೇಕು. ಈ ಜವಾಬ್ದಾರಿ ಆಯಾ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ವಹಿಸಲಾಗಿದೆ. ಮತ್ತು ಪ್ರತಿ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳ ಸ್ವಚ್ಚತೆಯನ್ನು ಕಡ್ಡಾಯವಾಗಿ ನಡೆಸಬೇಕು. ಮಳೆಗಾಲ ಆರಂಭವಾಗುತ್ತಿದ್ದು, ಗ್ರಾಮಗಳ ಚರಂಡಿಯನ್ನು ಸ್ವಚ್ಚಮಾಡಿಸಬೇಕು ಎಂದು ಸೂಚನೆ ನೀಡಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ್ (ಗ್ರಾಮೀಣ ಉದ್ಯೋಗ) ತಾಲ್ಲೂಕು ಯೋಜನಾಧಿಕಾರಿ ಸುಮ, ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು, ತಾಂತ್ರಿಕ ಸಂಯೋಜಕರು ಉಪಸ್ಥಿತರಿದ್ದರು.
