131 ಕೋಟಿ ರೂ. ವೆಚ್ಚದಲ್ಲಿ ತುಮಕೂರಿಗೆ ಹೊಸ ಜಿಲ್ಲಾಸ್ಪತ್ರೆ: ಪರಮೇಶ್ವರ್
ತುಮಕೂರು ಜಿಲ್ಲಾ ಆಸ್ಪತ್ರೆ ಕಟ್ಟಡವನ್ನು ತೆರವುಗೊಳಿಸುವ ಕಾಮಗಾರಿಗೆ ಡಾ.ಜಿ ಪರಮೇಶ್ವರ್ ಸೋಮವಾರ ಚಾಲನೆ ನೀಡಿದರು.
Tumkur news
ತುಮಕೂರು: ಸಾರ್ವಜನಿಕರ ಬೇಡಿಕೆಯಂತೆ ಆಧುನಿಕ ಸೌಲಭ್ಯಗಳ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಜನಸೇವೆಗೆ ಸಿಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ತುಮಕೂರು ಜಿಲ್ಲಾ ಆಸ್ಪತ್ರೆ ಕಟ್ಟಡವನ್ನು ತೆರವುಗೊಳಿಸುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಸಾರ್ವಜನಿಕ ಆಸ್ಪತ್ರೆ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾದ ಆಸ್ಪತ್ರೆಯಾಗಿದ್ದು, ಅತ್ಯಾಧುನಿಕ ಸೌಲಭ್ಯಗಳ ಆಸ್ಪತ್ರೆ ನಿರ್ಮಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ಇದೇ ಜಾಗದಲ್ಲಿ ಜಿಲ್ಲಾ ಆಸ್ಪತ್ರೆಯನ್ನು 131 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಲಿದ್ದು, ಮುಂದಿನ 18 ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.
18 ತಿಂಗಳಿಗೆ ಮುನ್ನವೇ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದ ಅವರು, ಪಾರಂಪರಿಕ ಆಸ್ಪತ್ರೆ ಕಟ್ಟಡದ ಕಲ್ಲುಗಳನ್ನು ಹಾಗೂ ಇತರೆ ಸಾಮಗ್ರಿಗಳನ್ನು ಅತ್ಯಂತ ಜತನದಿಂದ ಬಳಸಿಕೊಳ್ಳುವಂತೆ ಈ ಹಿಂದೆ ಸಮಗ್ರವಾಗಿ ಯೋಚಿಸಿ ತೀರ್ಮಾನಿಸಲಾಗಿದೆ. ಹಿಂದಿನ ಕಲ್ಲುಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
