Ad image

ನಿಗಮ ಮಂಡಳಿಗಳ ಹುದ್ದೆಗಳು ಖಾಲಿ: ಕಾರ್ಯಕರ್ತರಿಗಿಲ್ಲ ಅಧಿಕಾರ

Ashok RP
4 Min Read

ಸರ್ಕಾರಕ್ಕೆ ಮೂರು ವರುಷ; ಕಾರ್ಯಕರ್ತರಿಗಿಲ್ಲ ಹರುಷ

ನಿಗಮ ಮಂಡಳಿಗಳ ಹುದ್ದೆಗಳು ಖಾಲಿ: ನೇಮಕಕ್ಕೆ ಸರ್ಕಾರದ‌ ನಿರಾಸಕ್ತಿ: ತಳಮಟ್ಟದ ಕಾರ್ಯಕರ್ತರಿಗಿಲ್ಲ ಅಧಿಕಾರ ಭಾಗ್ಯ

Tumkur news
– ಅಶೋಕ್ ಆರ್.ಪಿ ತುಮಕೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಇದೇ ಮೇ 20ಕ್ಕೆ ಮೂರು ವರ್ಷ ಪೂರೈಸುತ್ತಿದ್ದು, ದೊಡ್ಡಮಟ್ಟದ ಸಂಭ್ರಮಾಚರಣೆಗೆ ಸರ್ಕಾರ ಸಿದ್ದವಾಗುತ್ತಿದೆ. ಆದರೇ ಸರ್ಕಾರ ರಚನೆಗೆ ಹಾಗೂ ನಾಯಕರ ಈ ಸಂಭ್ರಮಕ್ಕೆ ಕಾರಣರಾದ ಪಕ್ಷದ ತಳಮಟ್ಟದ ಕಾರ್ಯಕರ್ತರು ಅಧಿಕಾರ ವಂಚಿತರಾಗಿ ತೀವ್ರ ಹತಾಶೆಯಲ್ಲಿದ್ದಾರೆ.
ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ರಚನೆ ಮಾಡಿ ಮೂರು ವರ್ಷ ಪೂರೈಸುತ್ತಿದೆ. ಆದರೇ ತಳಮಟ್ಟದ ಕಾರ್ಯಕರ್ತರಿಗೆ ಅಧಿಕಾರ ನೀಡುವ ಹಾಗೂ ಎರಡನೇ ಹಂತದ ನಾಯಕತ್ವವನ್ನು ಹುಟ್ಟು ಹಾಕುವ ಯಾವುದೇ ಯೋಚನೆಯನ್ನು ಸರ್ಕಾರ ಮಾಡಿದಂತಿಲ್ಲ. ಕಳೆದ ಮೂರು ವರ್ಷಗಳಿಂದ ರಾಜ್ಯದ ವಿವಿಧ ನಿಗಮ ಮಂಡಳಿಗಳಲ್ಲಿ ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡದೆ ಖಾಲಿ ಉಳಿಸಿಕೊಂಡಿದ್ದು, ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡುವಂತೆ ಹಲವಾರು ಬಾರಿ ಕಾರ್ಯಕರ್ತರು ಮನವಿ ಮಾಡಿದರೂ ಸರ್ಕಾರದಿಂದ ಯಾವುದೇ ರೀತಿಯಲ್ಲಿ ಸ್ಪಂದನೆ ದೊರೆತಿಲ್ಲ. ಇದು ಕಾರ್ಯಕರ್ತರಲ್ಲಿ ತೀವ್ರ ಹತಾಶೆ ಮೂಡಿಸಿದೆ.
ಆಡಳಿತಾತ್ಮಕ ಕೊಂಡಿಗಳು: ನಿಗಮ ಮಂಡಳಿಗಳು ಕೇವಲ ರಾಜಕೀಯ ನೇಮಕಾತಿಗಳ ಕೇಂದ್ರವಲ್ಲ, ಬದಲಿಗೆ ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಆಡಳಿತಾತ್ಮಕ ಕೊಂಡಿಗಳಾಗಿವೆ. ಕರ್ನಾಟಕ ಸರ್ಕಾರದ ವಿವಿಧ ಆಯಾಮಗಳಲ್ಲಿ (ಕೃಷಿ, ನೀರಾವರಿ, ವಸತಿ, ಸಾರಿಗೆ, ಇತ್ಯಾದಿ) ಒಟ್ಟು ಸಾವಿರಕ್ಕೂ ಅಧಿಕ ಅಧ್ಯಕ್ಷ, ನಿರ್ದೇಶಕ ಹಾಗೂ ಸದಸ್ಯ ಸ್ಥಾನಗಳು ಖಾಲಿ ಇವೆ.
​ವಿಳಂಬದಿಂದ ಆಡಳಿತಾತ್ಮಕ ಹಿನ್ನಡೆ: ನಿಗಮ-ಮಂಡಳಿಗಳಲ್ಲಿ ಪೂರ್ಣಪ್ರಮಾಣದ ಆಡಳಿತ ಮಂಡಳಿ ಇಲ್ಲದ ಕಾರಣ, ಪ್ರಮುಖ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬಕ್ಕೆ ಕಾರಣವಾಗಿದೆ. ಆಡಳಿತಾತ್ಮಕವಾಗಿ ಹಿನ್ನಡೆಗೆ ಕಾರಣವಾಗಿದೆ.
ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಸಿತ: ಚುನಾವಣಾ ಸಮಯದಲ್ಲಿ ಕ್ಷೇತ್ರದ ಪ್ರತಿ ಹಳ್ಳಿಯಲ್ಲೂ ಪಕ್ಷದ ಸಿದ್ಧಾಂತವನ್ನು ಮತದಾರರಿಗೆ ತಲುಪಿಸಲು ಶ್ರಮಿಸಿದ ಕಾರ್ಯಕರ್ತರಿಗೆ ಈ ಸ್ಥಾನಗಳು ಒಂದು ಗುರುತಿಸುವಿಕೆ ಮತ್ತು ಗೌರವದ ಸಂಕೇತವಾಗಿವೆ. ನಿಗಮ ಮಂಡಳಿಗಳ ನೇಮಕಾತಿಗೆ ಸರ್ಕಾರ ಕಳೆದ ಮೂರು ವರ್ಷಗಳಿಂದ ಮೀನಮೇಷ ಎಣಿಸುತ್ತಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಚುನಾವಣೆ ಸಮಯದಲ್ಲಿ ಮುಖಂಡರು ತಮ್ಮನ್ನು ದುಡಿಸಿಕೊಂಡು ಸರ್ಕಾರ ರಚನೆಯಾದ ಬಳಿಕ ನಿರ್ಲಕ್ಷ್ಯ ಮಾಡುತ್ತಿರುವುದು ನಾಯಕರು ಹಾಗೂ ಪಕ್ಷದ ಚಟುವಟಿಕೆಗಳ‌ ಬಗ್ಗೆ ಕಾರ್ಯಕರ್ತರು ನಿರಾಸಕ್ತಿ ಹೊಂದುವಂತಾಗಿದೆ.
​ಪ್ರಜಾಪ್ರಭುತ್ವದ ವಿಕೇಂದ್ರೀಕರಣಕ್ಕೆ ಧಕ್ಕೆ: ವಿವಿಧ ಸಮುದಾಯಗಳ ಮತ್ತು ಪ್ರದೇಶಗಳ ಪ್ರತಿನಿಧಿಗಳಿಗೆ ಈ ಮಂಡಳಿಗಳಲ್ಲಿ ಅವಕಾಶ ನೀಡುವುದರಿಂದ ಆಡಳಿತದಲ್ಲಿ ಎಲ್ಲರ ಒಳಗೊಳ್ಳುವಿಕೆ ಸಾಧ್ಯವಾಗುತ್ತದೆ. ನೇಮಕಾತಿ ವಿಳಂಬದಿಂದಾಗಿ ಈ ಸಾಮಾಜಿಕ ನ್ಯಾಯದ ಆಶಯಕ್ಕೆ ಧಕ್ಕೆಯುಂಟಾಗುತ್ತಿದೆ. ಸಾಮಾಜಿಕ ನ್ಯಾಯದ ಬಗ್ಗೆ ಅಪಾರ ನಂಬಿಕೆ ಇರುವುದಾಗಿ ಹೇಳುವ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಅಧಿಕಾರ ‌ಹಂಚಿಕೆ ವಿಳಂಬವಾಗಿರುವುದು ವಿಪರ್ಯಾಸ.

ಸರ್ಕಾರ ಆಸಕ್ತಿ ವಹಿಸಲಿ:
ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಈ ಸಂದರ್ಭದಲ್ಲಾದರೂ ಹಂತ ಹಂತವಾಗಿ ಬಾಕಿ ಇರುವ ಎಲ್ಲಾ ನಿಗಮ ಮಂಡಳಿಗಳ ನೇಮಕಾತಿಗೆ ಸರ್ಕಾರ ವಿಶೇಷ ಆಸಕ್ತಿ ವಹಿಸಬೇಕು. ಇಲ್ಲವಾದಲ್ಲಿ ಕಾರ್ಯಕರ್ತರು ತೀವ್ರ ನಿರಾಶೆಗೆ ಒಳಗಾಗುವುದು ಖಚಿತ.

ಕಾರ್ಯಕರ್ತರ ಬೇಡಿಕೆಗಳೇನು?
* ಪಕ್ಷ ನಿಷ್ಟರಿಗೆ ಅವಕಾಶ ಕೊಡಿ:
ಪಕ್ಷದ ಕಷ್ಟಕಾಲದಲ್ಲಿ ಬೆನ್ನಿಗೆ ನಿಂತ, ಕನಿಷ್ಠ 10-15 ವರ್ಷಗಳ ಕಾಲ ತಳಮಟ್ಟದಲ್ಲಿ ಕೆಲಸ ಮಾಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಬೇಕು.

* ​ಜಿಲ್ಲಾವಾರು ಪ್ರಾತಿನಿಧ್ಯ: ನೇಮಕಾತಿಯಲ್ಲಿ ಕೇವಲ ರಾಜಧಾನಿ ಅಥವಾ ಪ್ರಭಾವಿ ಜಿಲ್ಲೆಗಳಿಗೆ ಸೀಮಿತವಾಗದೆ, ಎಲ್ಲಾ 31 ಜಿಲ್ಲೆಗಳ ಸಮರ್ಥ ಕಾರ್ಯಕರ್ತರಿಗೆ ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳಬೇಕು.

* ​ಯುವಕರು ಮತ್ತು ಮಹಿಳೆಯರಿಗೆ ಆದ್ಯತೆ:
ನಿಗಮ-ಮಂಡಳಿಗಳಲ್ಲಿ ಯುವ ಘಟಕ ಮತ್ತು ಮಹಿಳಾ ಘಟಕದ ಸಕ್ರಿಯ ಸದಸ್ಯರಿಗೆ ಕನಿಷ್ಠ ಶೇ.30ರಷ್ಟು ಸ್ಥಾನಗಳನ್ನು ಮೀಸಲಿಡಬೇಕು ಎನ್ನುವುದು ಕಾರ್ಯಕರ್ತರ ಬಹುದೊಡ್ಡ ಬೇಡಿಕೆಯಾಗಿದೆ. ಇದರಿಂದಾಗಿ ಹೊಸ ನಾಯಕತ್ವ ಬೆಳೆಯಲು ಸಹಕಾರಿಯಾಗುತ್ತದೆ ಎನ್ನುವುದು ಕಾರ್ಯಕರ್ತರ ಒತ್ತಾಸೆ.

ಹೊಸ ಚೈತನ್ಯ ನೀಡಬೇಕಿದೆ:
ಯಾವುದೇ ​ಸರ್ಕಾರ ಮತ್ತು ಪಕ್ಷದ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳಲು ಕಾರ್ಯಕರ್ತರೇ ಭದ್ರಬುನಾದಿ. ಮಂಡಳಿ ಮತ್ತು ನಿಗಮಗಳ ನೇಮಕಾತಿ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವುದು ಕೇವಲ ರಾಜಕೀಯ ಅನಿವಾರ್ಯತೆಯಲ್ಲ, ಅದು ಆಡಳಿತಾತ್ಮಕ ಸುಧಾರಣೆಯೂ ಹೌದು. ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ತಕ್ಷಣದ ನಿರ್ಧಾರ ಕೈಗೊಳ್ಳುವ ಮೂಲಕ ಪಕ್ಷದ ತಳಮಟ್ಟದ ಸೈನ್ಯಕ್ಕೆ ಹೊಸ ಚೈತನ್ಯ ನೀಡಬೇಕಿದೆ.

ಕೋಟ್
ರಾಜ್ಯದಲ್ಲಿ ಖಾಲಿ ಇರುವ ವಿವಿಧ ಅಭಿವೃದ್ಧಿ ಪ್ರಾಧಿಕಾರಗಳು ಸೇರಿದಂತೆ ನಿಗಮ ಮಂಡಳಿಯಲ್ಲಿ ನೇಮಕಾತಿಗೆ ಶೀಘ್ರವಾಗಿ ಕ್ರಮವಹಿಸಲಾಗುವುದು.
– ಡಾ.ಜಿ ಪರಮೇಶ್ವರ್, ಗೃಹ ಸಚಿವ.

ಕಿಸಾನ್ ಘಟಕದಿಂದ ಒತ್ತಾಯ:
ನಿಗಮ ಮಂಡಳಿಗಳ ನೇಮಕ ವಿಳಂಬವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಿಸಾನ್ ಖೇತ್ ಮಜ್ದೂರ್’ನ ರಾಜ್ಯಾಧ್ಯಕ್ಷ ಸಚಿನ್ ಮೀಗಾ ನೇತೃತ್ವದಲ್ಲಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ‌ ಡಿ.ಕೆ ಶಿವಕುಮಾರ್’ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ನಿಗಮ ಮಂಡಳಿಗಳಲ್ಲಿ 900ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವುದು ವಿಷಾದನೀಯ. ಈ ಹುದ್ದೆಗಳು ಆಡಳಿ ಪಕ್ಷಕ್ಕಾಗಿ ಹಗಲು-ರಾತ್ರಿ ಶ್ರಮಿಸಿದ ತಳಮಟ್ಟದ ಕಾರ್ಯಕರ್ತರಿಗೆ ರಾಜಕೀಯ ಪ್ರತಿನಿಧಿತ್ವ ಹಾಗೂ ಸಬಲೀಕರಣ ನೀಡುವ ಪ್ರಮುಖ ವೇದಿಕೆಗಳಾಗಿವೆ. ವಿಳಂಬದಿಂದ ತಳಮಟ್ಟದ ಕಾರ್ಯಕರ್ತರಲ್ಲಿ ಭಾರೀ ಅಸಮಾಧಾನ ಉಂಟಾಗಿದೆ. ಸಂಕಷ್ಟದ ಸಂದರ್ಭಗಳಲ್ಲಿ ಪಕ್ಷದೊಂದಿಗೆ ದೃಢವಾಗಿ ನಿಂತ ಕಾರ್ಯಕರ್ತರು ಇಂದು ನಿರ್ಲಕ್ಷ್ಯಗೊಳಿಸಲ್ಪಟ್ಟಿರುವ ಭಾವನೆ ಹೊಂದಿದ್ದಾರೆ, ಇದರಿಂದ ಸಂಘಟನೆಯ ಬಲ ಕುಗ್ಗುವ ಪರಿಸ್ಥಿತಿ ಉಂಟಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಳು ವಿಳಂಬಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ವಿಳಂಬವಿಲ್ಲದೆ ಎಲ್ಲಾ ಬಾಕಿ ಇರುವ ಮಂಡಳಿ ಹಾಗೂ ನಿಗಮಗಳ ಹುದ್ದೆಗಳಿಗೆ ತಕ್ಷಣ ನೇಮಕಾತಿ ಮಾಡುವಂತೆ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *