cool hit counter

ತುಮಕೂರು: ಮೇ 20ಕ್ಕೆ ಸಾರ್ಥಕ ಸೇವೆಯ ಸಮರ್ಪಣೆ; ಸಚಿವ ಕೃಷ್ಣ ಬೈರೇಗೌಡ

Tumkur News
Ashok R.P. is a passionate journalist and media professional known for his dedication to truthful, people-centric reporting. With a keen interest in regional news, public issues,...
4 Min Read

ಮೇ 20ಕ್ಕೆ ಸಾರ್ಥಕ ಸೇವೆಯ ಸಮರ್ಪಣೆ; ಸಚಿವ ಕೃಷ್ಣ ಬೈರೇಗೌಡ

ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ; ಸಾಧನಾ ಸಮಾವೇಶಕ್ಕೆ ಸಿದ್ದತೆ

Tumkur news
ತುಮಕೂರು: ಮೇ 20ರಂದು ತುಮಕೂರಿನಲ್ಲಿ ಆಯೋಜಿಸಿರುವ ರಾಜ್ಯ ಸರ್ಕಾರದ ಬೃಹತ್ ಸಮಾವೇಶ ಕೇವಲ ಸಾಧನೆಯ ಸಂಭ್ರಮವಲ್ಲ, ಕಳೆದ 3 ವರ್ಷಗಳಲ್ಲಿ ರಾಜ್ಯ ಸರ್ಕಾರ ಮಾಡಿರುವ ಆದ್ಯತಾ ಕಾರ್ಯಕ್ರಮಗಳ ಸಾರ್ಥಕ ಸೇವೆಯ ಸಮರ್ಪಣೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಕಳೆದ 3 ವರ್ಷಗಳ ಅವಧಿಯಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಜನರಿಗಾಗಿ ಸಾಕಷ್ಟು ಆದ್ಯತಾ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ಜನರಿಗೆ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಅವರ ಭರವಸೆಯನ್ನು ಉಳಿಸಿಕೊಂಡಿರುವ ಬಗ್ಗೆ ಉತ್ತರದಾಯಿತ್ವವಾಗಿ ಸಾರ್ಥಕ ಸೇವೆಯ ಸಮರ್ಪಣೆಯನ್ನು ಮೇ 20ರಂದು ತುಮಕೂರಿನಲ್ಲಿ ಮಾಡಲಾಗುತ್ತಿದೆ ಎಂದರು.
ಸಾರ್ವಜನಿಕರು ಒಂದು ಇಲಾಖೆಗೆ ತಮ್ಮ ಕೆಲಸಗಳಿಗಾಗಿ ಪದೇ ಪದೇ ಯಾಕೆ ಅಲೆಯಬೇಕು ಮತ್ತು ಅವರು ಅರ್ಜಿ ಕೊಟ್ಟರೂ ಆ ಕೆಲಸಗಳು ಆಗಿವೆಯೇ ಎಂಬ ಇತ್ಯಾದಿ ವಿಷಯಗಳ ಬಗ್ಗೆ ಸರ್ಕಾರ ಗಮನ ಹರಿಸಿತು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಬಹುಕಾಲಗಳಿಂದ ಸಾರ್ವಜನಿಕರು ಕೆಲವು ವಿಷಯಗಳಿಗಾಗಿ ಪದೇ ಪದೇ ಕಚೇರಿಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವ ಉದ್ದೇಶದಿಂದ ಸಾರ್ವಜನಿಕರ ಕೆಲಸಗಳನ್ನು ಅವರಿಂದ ಅರ್ಜಿ ಪಡೆಯದೆ ಅವರ ಕೆಲಸಗಳನ್ನು ಸರಳವಾಗಿ ಮಾಡಿಕೊಡುವ ದೃಷ್ಟಿಯಿಂದ ಕೆಲವು ಆದ್ಯತಾ ಯೋಜನೆಗಳನ್ನು ಹಾಕಿಕೊಂಡಿದೆ. ಈ ವಿಷಯದಲ್ಲಿ ಸರ್ಕಾರ ಯಶಸ್ವಿಯಾಗಿದೆ. ಈ ವಿಷಯವನ್ನು ಸಾರ್ವಜನಿಕರಿಗೆ, ಫಲಾನುಭವಿಗಳಿಗೆ ಸೇವೆಯನ್ನು ಸಮರ್ಪಿಸುವ ದೃಷ್ಟಿಯಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಕಾರ್ಯಕ್ರಮದ ಕುರಿತು ವಿವರಿಸಿದರು.
ಸಾರ್ವಜನಿಕರ ಆದ್ಯತಾ ವಿಷಯಗಳ ಬಗ್ಗೆ ಉದಾಹರಿಸಿದ ಸಚಿವರು, ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಅವರ ನ್ಯಾಯಾಲಯಗಳಲ್ಲಿ ಬಾಕಿಯಿದ್ದ ಹಲವಾರು ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ. ಉದಾಹರಣೆಗೆ ಮೇ 2020ರಲ್ಲಿ ರಾಜ್ಯದಲ್ಲಿ ತಹಶೀಲ್ದಾರ್ ಅವರ ನ್ಯಾಯಾಲಯದ ವ್ಯಾಪ್ತಿಯಲ್ಲಿ 10,774 ಅವಧಿ ಮೀರಿದ ಪ್ರಕರಣಗಳು ಬಾಕಿ ಇದ್ದವು. ಏಪ್ರಿಲ್ 2026ಕ್ಕೆ ಅದನ್ನು ಕೇವಲ 91ಕ್ಕೆ ಇಳಿಸಲಾಗಿದೆ. ಅಂತೆಯೇ, ಉಪವಿಭಾಗಾಧಿಕಾರಿಗಳ ನ್ಯಾಯಾಲಯ ವ್ಯಾಪ್ತಿಯಲ್ಲಿ 73,624 ಅವಧಿ ಮೀರಿದ ಪ್ರಕರಣಗಳು ಬಾಕಿಯಿದ್ದವು. ಈವರೆಗೆ ಅವುಗಳನ್ನು ಇತ್ಯರ್ಥಗೊಳಿಸಿ ಸಧ್ಯ ರಾಜ್ಯದಲ್ಲಿ ಕೇವಲ 7,721 ಪ್ರಕರಣಗಳು ಮಾತ್ರ ಬಾಕಿ ಇವೆ. ಅಂದರೆ ತಹಶೀಲ್ದಾರ್ ನ್ಯಾಯಾಲಯದಲ್ಲಿ ಇದ್ದ ಬಾಕಿ ಪ್ರಕರಣಗಳಲ್ಲಿ ಶೇ. 99.9ರಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಕಳೆದ ಸರಿಸುಮಾರು 50-60 ವರ್ಷಗಳ ಹಿಂದಿನಿಂದಲೂ ಜಮೀನುಗಳು ಮೃತರ ಹೆಸರಿನಲ್ಲಿ ಇರುವುದನ್ನು ಕಂದಾಯ ಇಲಾಖೆ ಗುರುತಿಸಿತು. ಇದರಿಂದಾಗಿ ವಾರಸುದಾರರಿಗೆ ಖಾತೆಯಾಗದೆ ವಿಭಾಗ ದಾಖಲೆಗಳನ್ನು ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಕಂದಾಯ ಇಲಾಖೆ ಇ-ಪೌತಿ ಆಂದೋಲನದ ಮೂಲಕ ಹಳ್ಳಿ-ಹಳ್ಳಿಗೆ ತೆರಳಿ ಸುಮಾರು 14ಲಕ್ಷ ಜಮೀನುಗಳನ್ನು ಸ್ವಯಂ ಪ್ರೇರಣೆಯಿಂದ ಇ-ಪೌತಿ ಖಾತೆಗಳನ್ನು ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದರು.
ಅಲ್ಲದೆ, 1950ರಿಂದಲೂ ಮಂಜೂರಾಗಿದ್ದ ಭೂಮಿಗೆ ಪೋಡಿ ದುರಸ್ತಿಯಾಗದೆ ಸಂಪೂರ್ಣ ಮಾಲೀಕತ್ವ ಸಿಕ್ಕಿರಲಿಲ್ಲ. ಇದರಿಂದಾಗಿ ಜಮೀನಿನ ಒಡೆತನ ಸರ್ಕಾರದ್ದೇ ಆಗಿದ್ದರಿಂದ ಭೂ ಮಾಲೀಕರು ಜಮೀನಿನ ಆಧಾರದ ಮೇಲೆ ಸಾಲ ಸೌಲಭ್ಯಗಳನ್ನು ಅಥವಾ ವಿಭಾಗಗಳನ್ನು ಮಾಡಿಕೊಳ್ಳಲು ಕಷ್ಟ ಸಾಧ್ಯವಾಗಿತ್ತು. 2018 ರಿಂದ 2013ರವರೆಗೆ ಇಡೀ ರಾಜ್ಯದಲ್ಲಿ 8023 ಪ್ರಕರಣಗಳನ್ನು ಮಾತ್ರ ಇತ್ಯರ್ಥಪಡಿಸಲಾಗಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ವರ್ಷಗಳಲ್ಲಿ 2.52 ಲಕ್ಷ ಮಂಜೂರಾದ ಭೂಮಿಗಳಿಗೆ ಪೋಡಿ ದುರಸ್ತಿ ಮಾಡಿದೆ. ಅಲ್ಲದೆ, ಹತ್ತಾರು ವರ್ಷಗಳಿಂದ ಜನವಸತಿ ಇದ್ದರೂ ದಾಖಲೆಗಳಲ್ಲಿ ಕಂದಾಯ ಗ್ರಾಮವಲ್ಲವೆಂದು ಸೌಲಭ್ಯಗಳಿಂದ ವಂಚಿತವಾಗಿದ್ದ ಗ್ರಾಮಗಳನ್ನು ಸ್ವಯಂ ಪ್ರೇರಿತವಾಗಿ ಕಂದಾಯ ಗ್ರಾಮವೆಂದು ಗುರುತಿಸಿ 2.20ಲಕ್ಷ ಮನೆಗಳಿಗೆ ಹಕ್ಕುಪತ್ರ ಕೊಡಲಾಗಿದೆ. ಇನ್ನೂ ಇಷ್ಟೇ ಪ್ರಮಾಣದಲ್ಲಿ ಹಕ್ಕುಪತ್ರಗಳನ್ನು ಕೊಡುವುದು ಬಾಕಿ ಇದೆ. ಇಂತಹ ಸಾರ್ಥಕ ಸೇವೆಗಳನ್ನು ಸಾರ್ವಜನಿಕರಿಗೆ ಸಮರ್ಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಸಾರ್ಥಕ ಸೇವೆ ಸಮರ್ಪಣೆಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.
ಇದಲ್ಲದೆ, ಕಂದಾಯ ಇಲಾಖೆಯಲ್ಲಿ ದಾಖಲೆಗಳು ಕಾಣೆಯಾಗಿರುವ ಅಥವಾ ಇತರೆ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಅವರು, ಈ ಹಿಂದೆಯೇ ಮೂಲ ದಾಖಲೆಗಳನ್ನು ಗಣಕೀಕರಣಗೊಳಿಸಿದ್ದರೆ ಇಂತಹ ಪ್ರಕರಣಗಳಿಗೆ ಆಸ್ಪದವಿರುತ್ತಿರಲಿಲ್ಲ. ಆದರೆ ನಮ್ಮ ಸರ್ಕಾರ ಭೂಸುರಕ್ಷಾ ಯೋಜನೆಯಡಿ 83 ಕೋಟಿ ಪುಟಗಳ ಮೂಲ ದಾಖಲೆಗಳನ್ನು ಗಣಕೀಕರಣಗೊಳಿಸಿದೆ. ಇದಕ್ಕೆ ಸುಮಾರು 120 ಕೋಟಿ ರೂ.ಗಳನ್ನು ವೆಚ್ಚ ಮಾಡಿ 122 ತಾಲ್ಲೂಕುಗಳಲ್ಲಿ ಈಗಾಗಲೇ ಗಣಕೀಕರಣವನ್ನು ಪೂರ್ಣಗೊಳಿಸಲಾಗಿದೆ. ಮುಂದಿನ 4 ತಿಂಗಳೊಳಗಾಗಿ ರಾಜ್ಯದಾದ್ಯಂತ ಮೂಲ ದಾಖಲೆಗಳ ಗಣಕೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದರಿಂದ ನಕಲಿ ದಾಖಲೆಗಳ ಸೃಷ್ಟಿ, ಕಾಣೆಯಾಗುವ ಅಥವಾ ಅರಿದು ಹೋಗುವ ಪ್ರಕರಣಗಳಿಗೆ ಇನ್ನು ಮುಂದೆ ಅವಕಾಶವಿರುವುದಿಲ್ಲ. ಮೂಲ ದಾಖಲೆಗಳನ್ನು ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಇದಕ್ಕೂ ಮುನ್ನ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯಲ್ಲಿ ಅವರು ಸಮಾವೇಶಕ್ಕೆ ಆಗಮಿಸುವ ಫಲಾನುಭವಿಗಳಿಗೆ ಯಾವುದೇ ರೀತಿಯ ಸಮಸ್ಯೆ ಆಗದಿರುವಂತೆ ನಿರ್ವಹಿಸುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಮೇ 20ರ ಕಾರ್ಯಕ್ರಮ ಸಾರ್ಥಕ ಸೇವೆಯ ಸಮರ್ಪಣೆ ಕಾರ್ಯಕ್ರಮ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಉತ್ತರದಾಯಿತ್ವವಾಗಿ ನಡೆಯುವ ಈ ಕಾರ್ಯಕ್ರಮಕ್ಕೆ ಆಗಮಿಸುವ ಫಲಾನುಭವಿಗಳಿಗೆ, ಸಾರ್ವಜನಿಕರಿಗೆ ಯಾವುದೇ ರೀತಿಯ ಸಂಚಾರಿ ಸಮಸ್ಯೆಯಾಗಲಿ ಅಥವಾ ಇನ್ನಾವುದೇ ಅವ್ಯವಸ್ಥೆಯ ಗೊಂದಲಗಳು ಆಗದಂತೆ ನಿಭಾಯಿಸಬೇಕು. ವಿಶೇಷವಾಗಿ ಪೊಲೀಸ್ ಇಲಾಖೆ ಫಲಾನುಭವಿಗಳನ್ನು ಕರೆತರುವ ವಾಹನಗಳು ನೇರವಾಗಿ ಕಾರ್ಯಕ್ರಮ ಸ್ಥಳಕ್ಕೆ ಕರೆತಂದು ನಂತರ ವಾಹನ ನಿಲುಗಡೆ ಜಾಗಕ್ಕೆ ತೆರಳಬೇಕು. ಈ ವಿಷಯದಲ್ಲಿ ಫಲಾನುಭವಿಗಳಿಗೆ ಬಹುದೂರದಿಂದ ನಡೆದು ಕಾರ್ಯಕ್ರಮಕ್ಕೆ ಬರುವ ಪ್ರಾಯಾಸವನ್ನು ಮಾಡಬಾರದು ಎಂದು ತಿಳಿಸಿದರು.
ಕಂದಾಯ ಇಲಾಖೆ ಅಥವಾ ಇತರೆ ಇಲಾಖೆಗಳ ಫಲಾನುಭವಿಗಳನ್ನು ಪ್ರತ್ಯೇಕ ಬಸ್ಸುಗಳಲ್ಲಿ ಕರೆ ತರುವ ಬದಲು ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯದೊಂದಿಗೆ ನಿಯೋಜಿತ ಮಾರ್ಗಾಧಿಕಾರಿಗಳು ವ್ಯವಸ್ಥಿತವಾಗಿ ಫಲಾನುಭವಿಗಳನ್ನು ಕರೆತರುವಂತೆ ಜವಾಬ್ದಾರಿ ನೀಡಬೇಕು. ಬಸ್ಸುಗಳು ಹೊರಡುವ ಜಾಗದಿಂದ ವಿಡಿಯೋ ಚಿತ್ರೀಕರಣ ಮಾಡಿ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಆ ಚಿತ್ರೀಕರಣವನ್ನು ಕಳಿಸಬೇಕು. ಇದರಿಂದ ಜವಾಬ್ದಾರಿಯ ನಿರ್ವಹಣೆ ಸುಲಭವಾಗಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಪಂ ಸಿಇಒ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Follow:
Ashok R.P. is a passionate journalist and media professional known for his dedication to truthful, people-centric reporting. With a keen interest in regional news, public issues, politics, social developments, and ground-level reporting, he has built a reputation for delivering accurate and impactful stories that connect with the common people. He actively covers current affairs, civic issues, crime reports, political events, cultural programs, and human-interest stories with a commitment to ethical journalism. His reporting style focuses on clarity, credibility, and public awareness, making his work relatable and informative to readers across Karnataka. Ashok R.P. believes journalism is a powerful medium to raise public voice and strengthen democracy through responsible reporting and factual storytelling. Special Interests: * Regional & Political News * Public Interest Stories * Social Awareness Reporting * Ground Reality Journalism * Digital Media & News Publishing
Leave a Comment