ತುಮಕೂರು :
ಡಿ. ದೇವರಾಜ ಅರಸು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಇದೀಗ ಕಳ್ಳರ ಹಾಟ್ಸ್ಪಾಟ್ ಆಗಿ ಬದಲಾಗುತ್ತಿರುವ ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. ಜಿಲ್ಲೆಯ ಕೇಂದ್ರಬಿಂದುವಾಗಿರುವ ಈ ಬಸ್ ನಿಲ್ದಾಣದಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದು, ಜನದಟ್ಟಣೆಯನ್ನೇ ಬಂಡವಾಳವಾಗಿಸಿಕೊಂಡಿರುವ ಕಳ್ಳರ ತಂಡಗಳು ಸಾರ್ವಜನಿಕರ ಬೆಲೆಬಾಳುವ ವಸ್ತುಗಳಿಗೆ ಕನ್ನ ಹಾಕುತ್ತಿವೆ.
ಬೆಂಗಳೂರು, ಶಿವಮೊಗ್ಗ, ಪಾವಗಡ ಹಾಗೂ ಉತ್ತರ ಕರ್ನಾಟಕ ಭಾಗಗಳಿಗೆ ತೆರಳುವ ಪ್ರಯಾಣಿಕರೇ ಕಳ್ಳರ ಮುಖ್ಯ ಟಾರ್ಗೆಟ್ ಆಗಿದ್ದಾರೆ. ಬಸ್ ಹತ್ತುವ ವೇಳೆ ಉಂಟಾಗುವ ನೂಕುನುಗ್ಗಲಿನ ಸನ್ನಿವೇಶವನ್ನು ಬಳಸಿಕೊಂಡು ಮೊಬೈಲ್, ಪರ್ಸ್ ಹಾಗೂ ಲಗೇಜ್ ಬ್ಯಾಗ್ಗಳನ್ನು ಎಗರಿಸಲಾಗುತ್ತಿದೆ.
ಕಳ್ಳರ ಗ್ಯಾಂಗ್ ಕಾರ್ಯಾಚರಣೆ :
ಪ್ರಯಾಣಿಕರ ಮಾಹಿತಿ ಪ್ರಕಾರ, ಕಳ್ಳರು ಒಬ್ಬರೇ ಕಾರ್ಯಾಚರಣೆ ನಡೆಸದೇ ಗುಂಪುಗಳಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಉದ್ದೇಶಪೂರ್ವಕವಾಗಿ ಪ್ರಯಾಣಿಕರ ಗಮನ ಬೇರೆಡೆ ಸೆಳೆಯುವ ಮೂಲಕ ಮತ್ತೊಬ್ಬರು ಕಳ್ಳತನ ಎಸಗುತ್ತಿದ್ದಾರೆ.
ಕೆಲವು ಪ್ರಕರಣಗಳಲ್ಲಿ ಪ್ರಯಾಣಿಕರ ಬಟ್ಟೆ ಮೇಲೆ ಕೊಳೆ ಅಥವಾ ಐಸ್ಕ್ರೀಂ ಬಿದ್ದಂತೆ ನಾಟಕವಾಡಿ, ಅದನ್ನು ಸ್ವಚ್ಛಗೊಳಿಸುವ ವೇಳೆಯಲ್ಲಿ ಬ್ಯಾಗ್, ಹಣ ಹಾಗೂ ಮೊಬೈಲ್ ಕದಿಯಲಾಗುತ್ತಿದೆ ಎನ್ನಲಾಗಿದೆ.
ನಿದ್ದೆಯ ಸಮಯದಲ್ಲಿ ಲಗೇಜ್ ಮಾಯ :
ರಾತ್ರಿ ವೇಳೆ ದೂರ ಪ್ರಯಾಣಿಕರು ನಿಲ್ದಾಣದಲ್ಲಿ ನಿದ್ದೆಗೆ ಜಾರಿದಾಗ ಅವರ ಪಕ್ಕದಲ್ಲಿರುವ ಲಗೇಜ್ಗಳನ್ನು ಮಾಯ ಮಾಡಲಾಗುತ್ತಿದೆ. ಬಸ್ನ ಲಗೇಜ್ ಕ್ಯಾಬಿನ್ನಲ್ಲಿ ಇರಿಸಿದ್ದ ಬ್ಯಾಗ್ಗಳನ್ನೂ ಕಳ್ಳರು ಗುರಿಯಾಗಿಸುತ್ತಿದ್ದಾರೆ.
ಶನಿವಾರ ಮಹಿಳೆಯೊಬ್ಬರು ಬಸ್ ಹತ್ತುವ ವೇಳೆ ₹8 ಸಾವಿರ ಕಳೆದುಕೊಂಡಿದ್ದು, ಸೋಮವಾರ ಮತ್ತೊಬ್ಬ ಮಹಿಳೆಯ ಸುಮಾರು ₹20 ಸಾವಿರ ಮೌಲ್ಯದ ಮೊಬೈಲ್ ಕಳುವಾಗಿದೆ. ಪ್ರತಿದಿನ ಕನಿಷ್ಠ ಮೂರುರಿಂದ ನಾಲ್ಕು ಮಂದಿ ಹಣ ಅಥವಾ ವಸ್ತುಗಳನ್ನು ಕಳೆದುಕೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ.
ದೂರು ನೀಡಿದರೂ ಪ್ರಯೋಜನವಿಲ್ಲ :
ಕಳ್ಳತನಕ್ಕೊಳಗಾದ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಅಳಲು ಹಂಚಿಕೊಂಡು, “ಬಸ್ ಹತ್ತುವ ಅವಸರದಲ್ಲಿ ವ್ಯಾನಿಟಿ ಬ್ಯಾಗಿನಲ್ಲಿದ್ದ ಮೊಬೈಲ್ ಯಾವಾಗ ಮಾಯವಾಯಿತೋ ಗೊತ್ತಾಗಲೇ ಇಲ್ಲ. ನನ್ನ ಹಿಂದೆ ಇದ್ದ ಇಬ್ಬರು ಮಹಿಳೆಯರು ನನ್ನನ್ನು ತಳ್ಳಿದಂತೆ ಮಾಡಿ ಗಮನ ಬೇರೆಡೆ ಸೆಳೆದು ಮೊಬೈಲ್ ಕದ್ದಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ” ಎಂದು ಆರೋಪಿಸಿದರು.
ಸಿಸಿ ಕ್ಯಾಮೆರಾ ಇದ್ದರೂ ಪ್ರಯೋಜನವಿಲ್ಲ :
ಬಸ್ ನಿಲ್ದಾಣದಲ್ಲಿ ಹಲವೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ, ಕೆಲವು ಕ್ಯಾಮರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನಲಾಗಿದೆ. ಜೊತೆಗೆ ದೃಶ್ಯಗಳ ಸ್ಟೋರೇಜ್ ಕೇವಲ ಎರಡು ದಿನಗಳವರೆಗೆ ಮಾತ್ರ ಇರುವುದರಿಂದ ತನಿಖೆಗೆ ತೊಂದರೆಯಾಗುತ್ತಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿಯ ಪ್ರತಿಕ್ರಿಯೆ ಪಡೆಯಲು ಕರೆ ಮಾಡಲಾಗಿತ್ತಾದರೂ ಸಂಪರ್ಕ ಸಾಧ್ಯವಾಗಲಿಲ್ಲ.
ಒಟ್ಟಾರೆ, ಸ್ಮಾರ್ಟ್ ಸಿಟಿಯ ಭಾಗವಾಗಿರುವ ತುಮಕೂರು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆ ಮಾತ್ರ ಇನ್ನೂ ಪ್ರಶ್ನಾರ್ಥಕವಾಗಿಯೇ ಉಳಿದಿದೆ.
