ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷ ಪೂರೈಕೆ: ತುಮಕೂರಿನಲ್ಲಿ ಬೃಹತ್ ಸಮಾವೇಶಕ್ಕೆ ಸಿದ್ಧತೆ
ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ಚಿಂತನೆ
ರಾಜ್ಯ ಸರ್ಕಾರಕ್ಕೆ 3 ವರ್ಷ ತುಂಬಿದ ಸಂಭ್ರಮ; ತುಮಕೂರಿನಲ್ಲಿ ರಾಜ್ಯ ಮಟ್ಟದ ಸಮಾರಂಭ: ಜಿ.ಪರಮೇಶ್ವರ್
Tumkur news
ತುಮಕೂರು: ಇದೇ 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ 3 ವರ್ಷ ತುಂಬಲಿದ್ದು, ತುಮಕೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಳ್ಳುವಂತೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ತುಮಕೂರು ಜಿಲ್ಲೆಯಲ್ಲಿ ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಈಗ ಮೇ 20ರಂದೇ ರಾಜ್ಯ ಸರ್ಕಾರಕ್ಕೆ 3 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲೇ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಮೇ 20ರಂದು ನಡೆಯುವ ಸಮಾವೇಶಕ್ಕೆ ರಾಜ್ಯಾದ್ಯಂತ 2ಲಕ್ಷಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸಲಿದ್ದು, ರಾಜ್ಯಾದ್ಯಂತ ಆಗಮಿಸುವ ಫಲಾನುಭವಿಗಳಿಗಾಗಿ 4000 ಬಸ್ಸುಗಳ ಅಗತ್ಯವಿರುತ್ತದೆ. ಅಲ್ಲದೆ, ರಾಜ್ಯ ಸರ್ಕಾರದ ಅಭೂತಪೂರ್ವ ಯಶಸ್ವಿ ಯೋಜನೆಗಳ ಅನುಷ್ಠಾನ ಮತ್ತಿತರ ಇಲಾಖೆಗಳ ಪ್ರಗತಿ ದರ್ಶನ ಕುರಿತ ವಸ್ತುಪ್ರದರ್ಶನ ನಡೆಯಲಿದೆ. ಅಲ್ಲದೆ, ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಪ್ರಗತಿಯ ಪಟ್ಟಿ, ಶಂಕುಸ್ಥಾಪನೆ ಅಥವಾ ಉದ್ಘಾಟನೆಯಾಗಬೇಕಿರುವ ಮಾಹಿತಿ ಹಾಗೂ ಶಿಲಾನ್ಯಾಸ ಫಲಕಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ತಕ್ಷಣ ಒದಗಿಸಬೇಕು. ರಾಜ್ಯಾದ್ಯಂತ ಫಲಾನುಭವಿಗಳು ಬೃಹತ್ ಸಮಾವೇಶಕ್ಕೆ ಆಗಮಿಸುವುದರಿಂದ ಅವರಿಗೆ ಆಸನ ವ್ಯವಸ್ಥೆ, ಊಟ, ಸಾರಿಗೆ, ಇತ್ಯಾದಿ ವ್ಯವಸ್ಥೆಗಳನ್ನು ಯಾವುದೇ ಲೋಪವಿಲ್ಲದಂತೆ ನಿಭಾಯಿಸಬೇಕಿದೆ. ಇದಕ್ಕಾಗಿ ಜಿಲ್ಲಾಡಳಿತ ಉಪಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ಹಂಚುವಂತೆ ಅವರು ಸೂಚಿಸಿದರು.
ಸಮಾವೇಶಕ್ಕೆ ಬಹುತೇಕ ಎಲ್ಲಾ ಸಚಿವರು, ಶಾಸಕರು, ಸಂಸದರೂ ಆಗಮಿಸಲಿದ್ದು, ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ತಾತ್ಕಾಲಿಕವಾಗಿ ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮಾರಂಭದ ವೇದಿಕೆ, ಫಲಾನುಭವಿಗಳಿಗೆ ಊಟದ ವ್ಯವಸ್ಥೆ, ವಸ್ತುಪ್ರದರ್ಶನ ಹಾಗೂ ಹೆಲಿಪ್ಯಾಡ್ ಇತ್ಯಾದಿ ವಿಷಯಗಳ ಕುರಿತು ಜಿಲ್ಲಾಡಳಿತ ತುರ್ತಾಗಿ ಯೋಜನೆ ರೂಪಿಸಬೇಕಿದೆ. ಅಲ್ಲದೆ, ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೊಳ್ಳಲಿರುವ ಇಲಾಖೆ ಕಟ್ಟಡಗಳ ಮಾಹಿತಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಬೇಕು. ಅವರು ಶಿಲಾನ್ಯಾಸ ಫಲಕಗಳ ಜಾಗ ಮತ್ತಿತರ ವ್ಯವಸ್ಥೆಯನ್ನು ಮಾಡಿಕೊಳ್ಳಲಿದ್ದಾರೆ ಎಂದು ಅವರು ಸೂಚಿಸಿದರು.


