ಪರಿಸರ ದಿನಾಚರಣೆಗೆ ಹೊಸ ಅರ್ಥ ನೀಡಿದ ಭಗತ್ ಕ್ರಾಂತಿ ಸೇನೆ

1 min read

ತುಮಕೂರು(ಜೂ. 29) tumkurnews.in

ಜೂನ್ 5 ರಂದು ಪರಿಸರ ದಿನ ಆಚರಿಸಿ ಎಲ್ಲರೂ ತಮ್ಮ ಕರ್ತವ್ಯ ಮುಗಿಯಿತು ಎಂದು ಅಲ್ಲಿಗೆ ಬಿಟ್ಟು ಬಿಟ್ಟಿದ್ದಾರೆ. ವರ್ಷದಲ್ಲಿ ಒಂದು ದಿನ ಒಂದು ಗಿಡ ನೆಟ್ಟು ಫೋಟೋ ತೆಗೆಸಿಕೊಂಡರೆ ಪರಿಸರ ದಿನಾಚರಣೆ ಆದಂತೆ ಎಂದು ಎಲ್ಲರೂ ಭಾವಿಸಿದ್ದೇವೆ.
ಆದರೆ, ಇಲ್ಲೊಂದು ಯುವಕರ ತಂಡ ಹೊಸದೊಂದು ಸಂಕಲ್ಪ ಮಾಡಿದೆ. ಆ ಮೂಲಕ ಪರಿಸರ ದಿನಕ್ಕೆ ಹೊಸ ಅರ್ಥ ನೀಡಲು ಹೊರಟಿದ್ದಾರೆ.
ಅವರೇ ತುಮಕೂರು ನಗರದ ‘ಭಗತ್ ಕ್ರಾಂತಿ ಸೇನೆ’ಯ ಯುವಕರು.
ಈ ವರ್ಷ ಜೂ.5 ರಂದು ಪರಿಸರ ದಿನಾಚರಣೆಯ ದಿನ ಅವರೊಂದು ಪ್ರತಿಜ್ಞೆ ಮಾಡಿದ್ದಾರೆ. ಅದೇನೆಂದರೆ, ಇನ್ಮುಂದೆ ಪ್ರತಿ ಭಾನುವಾರ ಪರಿಸರ ದಿನ ಆಚರಿಸುವುದು. ಅಂದರೆ,ವೇದಿಕೆ ಏರಿ ಉದ್ದುದ್ದ ಭಾಷಣ ಮಾಡುವುದೆಂದಲ್ಲ. ಪ್ರತಿ ಭಾನುವಾರ ಸಸಿ ನೆಡುವ ಮೂಲಕ ವರ್ಷಪೂರ್ತಿ ಪರಿಸರ ದಿನವನ್ನು ಹಸಿರಾಗಿಸುವ ಸಂಕಲ್ಪ ಮಾಡಿದ್ದಾರೆ.
ಪ್ರಾರಂಭದಲ್ಲಿ ಈ ಹುಡುಗರ ಉತ್ಸಾಹ ಎಷ್ಟು ದಿನ ಇರುತ್ತದೆ? ಎಂದು ಮೂಗು ಮುರಿದವರೇ ಹೆಚ್ಚು. ಆದರೆ ಆ ರೀತಿಯ ಅನುಮಾನದಿಂದ ನೋಡಿದವರು ಇಂದು ಮೂಗಿನ ಮೇಲೆ ಬೆರಳಿಡುವಂತೆ ಪ್ರತಿ ಭಾನುವಾರ ಆಯ್ದ ಸ್ಥಳಗಳಲ್ಲಿ ಸಸಿ ನೆಡುತ್ತಾ ಬಂದಿದ್ದಾರೆ. ಈಗಾಗಲೇ ಜೂ.7, ಜೂ.14, ಜೂ.21 ಹಾಗೂ ಜೂ.28ರ ನಾಲ್ಕು ಭಾನುವಾರ ನಗರದ ವಿವಿಧೆಡೆ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.
ಈ ಹುಡುಗರ ಕಾರ್ಯಕ್ಕೆ ನಿಮ್ಮ ಬೆಂಬಲ ಸೂಚಿಸಲು, ಇನ್ನೊಬ್ಬರಿಗೆ ಪ್ರೇರಣೆಯಾಗಲು ರಾಜ್ಯದ ಎಲ್ಲಾ ಯುವಕರಿಗೆ ಈ ಸಂದೇಶವನ್ನು ತಲುಪಿಸಿ. ಭಗತ್ ಕ್ರಾಂತಿ ಸೇನೆಯ ಹುಡುಗರಿಗೆ ಬೆಂಬಲ ಸೂಚಿಸಲು ನೀವೂ, ನಿಮ್ಮ ಊರು, ಬಡಾವಣೆಯಲ್ಲಿ ಇದೇ ರೀತಿಯಲ್ಲಿ ಪ್ರತಿ ವಾರ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ.

“ತುಮಕೂರು ನಗರದಲ್ಲಿ ಪ್ರತಿ ಭಾನುವಾರ ಸಸಿ ನೆಡುವ ಸಂಕಲ್ಪವನ್ನು ಮಾಡಿದ್ದೇವೆ. ಒಟ್ಟಿನಲ್ಲಿ ಗಿಡ ಬೆಳೆಸುವುದು ಪರಿಸರ ಉಳಿಸುವ ಮೂಲಕ ನಮ್ಮ ನಾಡು, ನಮ್ಮ ದೇಶವನ್ನು ಹಸಿರಾಗಿಟ್ಟುಕೊಳ್ಳುವ ಸಂಕಲ್ಪವನ್ನು ಕಾರ್ಯಕರ್ತರು ಮಾಡುತ್ತಿದ್ದೇವೆ” ಎನ್ನುತ್ತಾರೆ ಅಭಿಯಾನದಲ್ಲಿ ತೊಡಗಿಕೊಂಡಿರುವ ಭಗತ್ ಕ್ರಾಂತಿ ಸೇನೆಯ ಚೇತನ್, ರಾಧಾಕೃಷ್ಣ, ತುಷಾರ್, ಹೇಮಂತ್, ಕಿರಣ್, ಲೋಕೇಶ್, ನೂತನ್ ಹಾಗೂ ಇನ್ನು ಹಲವರು.

About The Author

You May Also Like

More From Author

+ There are no comments

Add yours