ತುಮಕೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಶಾಸಕ ಡಿ.ಸಿ ಗೌರಿಶಂಕರ್ ಒತ್ತಾಯ

1 min read

ತುಮಕೂರು,(ಜೂ. 26) tumkurnews.in:
ತುಮಕೂರು ನಗರದ ಬಿಜಿಎಸ್ ವೃತ್ತದಲ್ಲಿರುವ ಉದ್ಯಾನವನದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಅವರು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದರು.
ಪಾಲಿಕೆಯ ಮೇಯರ್ ಫರೀದಾ ಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಇಂದು ದೇಶದಲ್ಲಿ ಅತ್ಯಂತ ಸುರಕ್ಷಿತ ಸ್ಥಳವಾಗಿರುವ ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಶನಿವಾರ ಅತ್ಯಂತ ವಿಜೃಂಭಣೆ ಆಚರಿಸಲಾಗುತ್ತಿದೆ.
ರಾಜಧಾನಿಗೆ ಹತ್ತಿರದಲ್ಲಿರುವ ತುಮಕೂರು ನಗರದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುವ ಮೂಲಕ ಅವರ ಜಾತ್ಯಾತೀತ ಸೇವೆಯನ್ನು ತುಮಕೂರು ಜಿಲ್ಲೆಯ ಜನರು ಸ್ಮರಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಕೆಂಪೇಗೌಡರ ಪ್ರತಿಮೆ ಆನಾವರಣ ಮಾಡಬೇಕೆಂಬುದು ಜನಾಂಗದ ಮುಖಂಡರ ತೀರ್ಮಾನವಾಗಿದೆ. ಈ ನಿಟ್ಟಿನಲ್ಲಿ ನಗರ ಪಾಲಿಕೆಯ ಆವರಣದಲ್ಲಿರುವ ಉದ್ಯಾನವನದಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಮೇಯರ್ ಶ್ರೀಮತಿ ಫರೀದಾಬೇಗಂ, ಜುಲೈ ತಿಂಗಳಲ್ಲಿ ನಡೆಯುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದರಿ ವಿಷಯವನ್ನು ಮಂಡಿಸಿ, ಸದಸ್ಯರ ಒಪ್ಪಿಗೆ ಪಡೆದು ಶೀಘ್ರದಲ್ಲಿಯೇ ಜಾಗ ಗೊತ್ತು ಮಾಡಿ ತಿಳಿಸಲಾಗುವುದು ಎಂದು ಶಾಸಕರಿಗೆ ಮತ್ತು ನಿಯೋಗದಲ್ಲಿದ್ದ ಸದಸ್ಯರಿಗೆ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು, ಜೂನ್ 27ರಂದು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಆನಾವರಣಗೊಳಿಸಲಾಗುತ್ತಿದೆ.ಅದೇ ರೀತಿ ತುಮಕೂರು ನಗರದಲ್ಲಿಯೂ ಪ್ರತಿಮೆ ಸ್ಥಾಪಿಸಬೇಕೆಂಬುದು ಹಲವರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮನವಿ ಸಲ್ಲಿಸಿದ್ದು, ಅವಕಾಶ ಸಿಕ್ಕ ನಂತರ ಹಾಗೂ ಕೋವಿಡ್ ಸಮಸ್ಯೆ ಬಗೆಹರಿದ ತಕ್ಷಣ ಸುಮಾರು 50 ಸಾವಿರ ಜನರನ್ನು ಒಗ್ಗೂಡಿಸಿ, ಅದ್ದೂರಿ ಕಾರ್ಯಕ್ರಮದ ಮೂಲಕ ಪ್ರತಿಮೆ ಸ್ಥಾಪನೆಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು.
ಇದೇ ವೇಳೆ ಜಿಲ್ಲೆಯ ಜನತೆಗೆ ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಷಯ ಕೋರಿದರು.
ಈ ವೇಳೆ ಪಾಲಿಕೆ ಸದಸ್ಯರಾದ ಮಂಜುನಾಥ್, ಧರಣೇಂದ್ರಕುಮಾರ್, ಕುಮಾರ್, ಮನು, ಮುಖಂಡರಾದ ಹಾಲೆನೂರು ಆನಂತು, ವೆಂಕಟೇಶಗೌಡ, ಯೋಗೀಶ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours