ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಪಂ ಸೂಚನೆ

1 min read

ತುಮಕೂರು ನ್ಯೂಸ್.ಇನ್(ಜೂ.18):
ಮಕ್ಕಳು ಯಾವುದೇ ಅಳುಕಿಲ್ಲದೆ, ಆತ್ಮಸ್ಥೈರ್ಯದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಎದುರಿಸುವಂತೆ ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚೌಡಪ್ಪ ಎರಡು ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐಗಳಿಗೆ ಸೂಚನೆ ನೀಡಿದರು.
ಜಿಪಂ ಸಭಾಂಗಣದಲ್ಲಿಂದು ನಡೆದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆಯಿಂದ ಒಬ್ಬ ವಿದ್ಯಾರ್ಥಿಯೂ ವಂಚಿತನಾಗಬಾರದು. ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಅಂಕಗಳ ಮೇಲೆ ನಿಂತಿದೆ. ಮಕ್ಕಳಲ್ಲಿ ಸಾಮಾಜಿಕ ಜವಾಬ್ದಾರಿಯ ಜೊತೆಗೆ, ಸಮಾಜದೊಂದಿಗೆ ಹೇಗೆ ಬಾಳಿ ಬದುಕಬೇಕು ಎಂಬುದು ತಿಳಿದಿಲ್ಲ. ಹಾಗಾಗಿ ಅನೇಕ ಸಾಮಾಜಿಕ ಎಡರು, ತೊಡರುಗಳನ್ನು ಮಕ್ಕಳು ಎದುರಿಸುತ್ತಿದ್ದಾರೆ. ಇದರಿಂದ ಮಕ್ಕಳು ಹೊರಬರಬೇಕೆಂದರೆ ಅವರಿಗೆ ಸಾಮಾಜಿಕ ಜವಾಬ್ದಾರಿಯ ಜೊತೆಗೆ, ಸಮಾಜದೊಂದಿಗೆ ಬಾಳುವಂತಹ ಶಿಕ್ಷಣವನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರನ್ನು ಸಜ್ಜುಗೊಳಿಸುವ ಅಗತ್ಯವಿದೆ ಎಂದು ಚೌಡಪ್ಪ ನುಡಿದರು.
ಮಧುಗಿರಿ ಮತ್ತು ತುಮಕೂರು ಶೈಕ್ಷಣಿಕ ಜಿಲ್ಲೆಗಳಿಂದ ಒಟ್ಟು 36,985 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಎದುರಿಸುತ್ತಿದ್ದು, ಇವರಲ್ಲಿ 16,278 ಬಾಲಕಿಯರು ಮತ್ತು 20,707 ಬಾಲಕರು ಪರೀಕ್ಷೆ ಎದುರಿಸುತ್ತಿದ್ದಾರೆ. ಒಂದು ಕೊಠಡಿಗೆ 18-20 ಜನ ವಿದ್ಯಾರ್ಥಿಗಳಂತೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 59 ಮತ್ತು ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 85 ಪರೀಕ್ಷಾ ಕೇಂದ್ರಗಳನ್ನು ತೆರೆದಿದ್ದು,ಹೆಚ್ಚುವರಿಯಾಗಿ ಪ್ರತಿ ಕೇಂದ್ರದಲ್ಲಿ ಎರಡು ಕೊಠಡಿಗಳನ್ನು ಮೀಸಲಿರಿಸಲಾಗಿದೆ.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಹೊರರಾಜ್ಯದ 24 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷಾ ಕೇಂದ್ರದ ಸಾನಿಟೈಜರ್ ಹಾಗೂ ಮಕ್ಕಳ ದೇಹದ ಉಷ್ಣಾಂಶ ಪರೀಕ್ಷೆ ಸೇರಿದಂತೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಸರಕಾರದ ನಿಯಮದ ಅನ್ವಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್, ಖಾಸಗಿ ಶಾಲೆಗಳ ಬಸ್ ಹಾಗೂ ಸ್ವಂತ ವಾಹನಗಳಲ್ಲಿ ಪೋಷಕರ ಸಹಾಯದೊಂದಿಗೆ ಬರಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ತಕ್ಷಣ ಒದಗಬಹುದಾದ ತೊಂದರೆಗಳನ್ನು ಊಹಿಸಿ, ಅದರ ಪರಿಹಾರಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಇಬ್ಬರು ಡಿಡಿಪಿಐಗಳಾದ ಕಾಮಾಕ್ಷಮ್ಮ ಮತ್ತು ರೇವಣ್ಣ ಸಿದ್ದಪ್ಪ ಸಭೆಗೆ ಮಾಹಿತಿ ನೀಡಿದರು.
ಸಕಲ ಮುಂಜಾಗ್ರತಾ ಕ್ರಮಗಳ ಮೂಲಕ 2020-21ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಆರಂಭಿಸಲು ಸಾಧ್ಯವೆ ಎಂಬುದರ ಕುರಿತು ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದಿದ್ದು, ಎಸ್.ಎಸ್.ಎಲ್.ಸಿ. ಪರೀಕ್ಷೆಯ ರೀತಿಯಲ್ಲಿಯೇ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆಗಳನ್ನು ತೆರೆದು ಮಕ್ಕಳಿಗೆ ಪಾಠ ಪ್ರವಚನ ನಡೆಸಲು ತುಮಕೂರು ಜಿಲ್ಲೆಯಿಂದ ಸಭಾ ನಿರ್ಣಯ ಅಂಗೀಕರಿಸಿ ಇಲಾಖೆಗೆ ಕಳುಹಿಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಇಬ್ಬರು ಡಿಡಿಪಿಐಗಳಿಗೆ ಸಲಹೆ ನೀಡಿದರು.
ಸಭೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾದ ಮಂಜುಳ, ಗಾಯಿತ್ರಿಬಾಯಿ, ಜಗನ್ನಾಥ್, ತಿಮ್ಮಯ್ಯ, ರಾಮಕೃಷ್ಣ ಹಾಗೂ ಸಮಿತಿ ಸದಸ್ಯ ಕಾರ್ಯದರ್ಶಿ ಅವರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours