ತುಮಕೂರು ಲೋಕಸಭೆ: ಮೊದಲ ದಿನ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

1 min read

 

 

 

 

 

ಲೋಕಸಭಾ ಚುನಾವಣೆ: ಮೊದಲ ದಿನ ಎರಡು ನಾಮಪತ್ರ ಸಲ್ಲಿಕೆ

Tumkurnews
ತುಮಕೂರು: ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್ 28ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮೊದಲನೇ ದಿನವಾದ ಇಂದು ಇಬ್ಬರು ಪಕ್ಷೇತರ ಅಭ್ಯರ್ಥಿಗಳಿಂದ ಒಟ್ಟು 2 ನಾಮಪತ್ರಗಳು ಸಲ್ಲಿಕೆಯಾಗಿವೆ.
ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ತುಮಕೂರು ನಗರ ಕೆ.ಆರ್.ಬಡಾವಣೆಯ ಪ್ರಕಾಶ್ ಆರ್.ಎ.ಜೈನ್(49 ವರ್ಷ) ಬಿನ್ ಆರ್.ಎಸ್. ಅಮರೇಂದ್ರ ಹಾಗೂ ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ಸಂಕೇನಹಳ್ಳಿಯ ಆರ್. ನಾರಾಯಣಪ್ಪ(57 ವರ್ಷ) ಬಿನ್ ಲೇ.ರಾಮಯ್ಯ ಅವರುಗಳು ಪಕ್ಷೇತರ ಅಭ್ಯರ್ಥಿಗಳಾಗಿ ಮಾರ್ಚ್ 28ರಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ನಮೂನೆ-26(100 ರೂ.ಗಳ ಛಾಪಾ ಕಾಗದದಲ್ಲಿ)ನ್ನು ಕೂಲಂಕುಷವಾಗಿ ಪರಿಶೀಲಿಸಿ ನಮೂನೆಯ ಎಲ್ಲಾ ಕಾಲಂಗಳನ್ನು ಭರ್ತಿ ಮಾಡಿರಬೇಕು. ನಮೂನೆಯ ಪ್ರತಿಯೊಂದು ಪುಟಕ್ಕೂ ಅಭ್ಯರ್ಥಿಯು ಸಹಿ ಮಾಡಿ ನೋಟರಿ ಮಾಡಿಸಿರಬೇಕು. ಪ್ರತಿಯೊಬ್ಬ ಅಭ್ಯರ್ಥಿಗೂ ಗರಿಷ್ಟ 95,00,000 ರೂ.ಗಳವರೆಗೆ ಚುನಾವಣಾ ವೆಚ್ಚ ಮಾಡಲು ಅವಕಾಶವಿದ್ದು, ಅಭ್ಯರ್ಥಿಯು ಕಡ್ಡಾಯವಾಗಿ ಸಮರ್ಪಕ ವೆಚ್ಚಗಳ ಮಾಹಿತಿಯನ್ನು ಸಲ್ಲಿಸತಕ್ಕದ್ದು ಎಂದು ಅವರು ಸೂಚಿಸಿದ್ದಾರೆ.
ಚುನಾವಣಾಧಿಕಾರಿಗಳ ಕಚೇರಿಯ 100 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಗುರುತಿಸಿ ಸಿಆರ್‍ಪಿಸಿ 144 ರನ್ವಯ ನಿರ್ಬಂಧಕಾಜ್ಞೆ ಜಾರಿ ಮಾಡಲಾಗಿದ್ದು, ನಾಮಪತ್ರ ಸಲ್ಲಿಸುವಾಗ ಕೇವಲ ಅಭ್ಯರ್ಥಿ ಮತ್ತು 4 ಜನ(ಒಟ್ಟು 5 ಮಂದಿ)ರಿಗೆ ಮಾತ್ರ ಪ್ರವೇಶಿಸಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ.

You May Also Like

More From Author

+ There are no comments

Add yours