ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ; ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

1 min read

 

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ವ್ಯೆ.ಎಸ್ ಪಾಟೀಲ ಸೂಚನೆ

Tumkurnews
ತುಮಕೂರು; ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಸೇವನೆಯ ವಿರುದ್ಧ ಜಿಲ್ಲೆಯಾದ್ಯಂತ ದಂಡ ವಿಧಿಸುವುದು ಹಾಗೂ ತಪಾಸಣೆ ತಂಡಗಳು ಭೇಟಿ ನೀಡುವುದನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಹೇಳಿದರು.
ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು ಉತ್ಪನ್ನ ಅಧಿನಿಯಮ(ಕೋಟ್ಪಾ)–2003 ಅನುಸಾರ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಗೆ ನಿಷೇಧವಿದ್ದು, ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಜೊತೆಗೆ ನಿಯಮಿತ ದಾಳಿ ನಡೆಸಿ ವರದಿ ಸಲ್ಲಿಸಬೇಕು. ಪ್ರವಾಸಿ ಸ್ಥಳಗಳನ್ನು ತಂಬಾಕು ಮುಕ್ತವನ್ನಾಗಿಸಲು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಾಚರಣೆಗೆ ಒತ್ತು; ತಂಬಾಕು ಸೇವನೆ ನಿಯಂತ್ರಣದಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ತಂಬಾಕು ನಿಯಂತ್ರಣ ಕೋಶದಿಂದ ನಿರಂತರವಾಗಿ ದಾಳಿ ನಡೆಸಿ ಸಾರ್ವಜನಿಕ ಪ್ರದೇಶ, ಶಾಲೆ ಆವರಣದ ಬಳಿಯೇ ಬೀಡಿ, ಸಿಗರೇಟು, ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ದಂಡ ವಿಧಿಸಬೇಕು. ಸಾರ್ವಜನಿಕ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಬಳಕೆಗೆ ದಂಡ ವಿಧಿಸುವ ಕುರಿತು ಎಚ್ಚರಿಕೆಯ  ಫಲಕವನ್ನು ಅಳವಡಿಸಬೇಕು. ತಂಬಾಕು ಮುಕ್ತ ನಗರವನ್ನಾಗಿಸಲು ವಿವಿಧ ಇಲಾಖೆಗಳ ಪರಸ್ಪರ ಸಂಪೂರ್ಣವಾದ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದರು.
ಕಠಿಣ ಕ್ರಮಕ್ಕೆ ಸೂಚನೆ; ತಂಬಾಕು ಸೇವನೆ ದುಷ್ಪರಿಣಾಮದ ಕುರಿತು ಪ್ರೌಢಶಾಲೆ ಮತ್ತು ಪಿಯುಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿಗಳಿಂದ ಜಾಥಾ, ವಿಚಾರ ಸಂಕಿರಣಗಳನ್ನು ಆಯೋಜಿಸಬೇಕು. ಶಾಲಾ–ಕಾಲೇಜುಗಳು ‘ತಂಬಾಕು ಉತ್ಪನ್ನ ಮಾರಾಟ, ಸೇವನೆ ನಿಷೇಧಿತ ವಲಯಗಳಾಗಿದ್ದು, ಸುತ್ತಮುತ್ತ ತಂಬಾಕು ಉತ್ಪನ್ನಗಳ ಅನಧಿಕೃತ ಮಾರಾಟಕ್ಕೆ ಕಡಿವಾಣ ಹಾಕಿ, ಕಠಿಣ ಕ್ರಮ ಕ್ಯೆಗೊಳ್ಳಬೇಕು. ತಂಬಾಕು ನಿಯಂತ್ರಣ ಕೋಶದ ತಂಡದೊಂದಿಗೆ ಆಗಾಗ್ಗೆ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಮಕ್ಕಳ ಬಗ್ಗೆ ನಿಗಾವಹಿಸಿ; ಸಹವಾಸ, ಸಾಮಾಜಿಕ ಜಾಲತಾಣ ಹಾಗೂ ಇನ್ನಿತರೆ ದುಷ್ಪ್ರೇರಣೆಯಿಂದ ಮಕ್ಕಳ ಆರೋಗ್ಯ ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರಿ ತಂಬಾಕು ಸೇವನೆಯ ಕಡೆ ಆಕರ್ಷಿತವಾಗುವ ಸಂಭವ ಇರುತ್ತದೆ. ಈ ನಿಟ್ಟಿನಲ್ಲಿ ಪ್ರೌಢಶಾಲೆ, ಕಾಲೇಜು ಹಾಗೂ ವಿದ್ಯಾರ್ಥಿ, ವಸತಿ ನಿಲಯಗಳಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಒಂದು ಮಗುವಿಗೆ ಉತ್ತಮ ಶಿಕ್ಷಣ ನೀಡಿದರೆ ಆ ಮೂಲಕ ಆ ವಿದ್ಯಾರ್ಥಿಯ ಕುಟುಂಬಕ್ಕೂ ಶಿಕ್ಷಣದ ಫಲ ದೊರೆಯುತ್ತದೆ. ಮಕ್ಕಳ ಭವಿಷ್ಯ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು, ಪ್ರತಿ ಮಗುವಿನ ಮೇಲೆ ವಿಶೇಷ ಗಮನಹರಿಸಿ ಮಕ್ಕಳಲ್ಲಿ ಉತ್ತಮ ಮನೋಭಾವನೆ ಮೂಡುವಂತೆ ಕರೆ ನೀಡಿದರು.
ಶಾಲಾ-ಕಾಲೇಜುಗಳ ಆವರಣದಲ್ಲಿ ತಂಬಾಕು ಮಾರಾಟ ಮಾಡುವವರು ಹಾಗೂ ಸೇವಿಸುವವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿ ಡಾ.ಮೋಹನ್ ದಾಸ್ ಮಾತನಾಡಿ, ತಂಬಾಕು ನಿಯಂತ್ರಣ ಕೋಶದಿಂದ ಜಿಲ್ಲೆಯಲ್ಲಿ ಏಪ್ರಿಲ್-2022 ರಿಂದ ಸೆಪ್ಟಂಬರ್ 2022ರವರೆಗೆ 618 ಪ್ರಕರಣಗಳನ್ನು ದಾಖಲಿಸಿ 58,060 ರೂ.ಗಳ ದಂಡ ವಸೂಲಿ ಮಾಡಲಾಗಿದೆ. ತಂಬಾಕು ವ್ಯಸನಕ್ಕೆ ಒಳಗಾದವರಿಗೆ ವ್ಯಸನದಿಂದ ಹೊರಬರಲು ತಂಬಾಕು ವ್ಯಸನ ಮುಕ್ತ ಕೇಂದ್ರ, ಸಮಾಲೋಚನಾ ಹಾಗೂ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಕೋಟ್ಪಾ ಕಾಯ್ದೆ-2003 ಜಾರಿಗಾಗಿ ಜಿಲ್ಲಾ ಮಟ್ಟದ ಸಮಿತಿ ಹಾಗೂ ತಾಲ್ಲೂಕು ಮಟ್ಟದ ಸಮಿತಿ ಕಾರ್ಯ ನಿರ್ವಹಿಸುತ್ತಿದ್ದು, ವಿವಿಧ ಇಲಾಖೆಗಳ ಮುಖ್ಯಸ್ಥರು ಈ ಸಮಿತಿಯ ಸದಸ್ಯರಾಗಿದ್ದಾರೆ. ಕೋಟ್ಪಾ ಕಾಯ್ದೆಯ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ನಿಯಂತ್ರಿಸಲು ಅಂಗಡಿಗಳ ಮುಂದೆ ಎಚ್ಚರಿಕೆ ಫಲಕ ಹಾಕದ ಮಾಲೀಕರಿಗೆ ದಂಡ ವಿಧಿಸಲಾಗುತ್ತಿದೆ. ತುಮಕೂರು ವಿಶ್ವವಿದ್ಯಾನಿಲಯವನ್ನು ತಂಬಾಕು ಮುಕ್ತ ಪ್ರದೇಶವಾಗಿ ಘೋಷಣೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೇಮ ಟಿ.ಎಲ್.ಎಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ರವಿಪ್ರಕಾಶ್, ಜಿಲ್ಲಾ ಸಾಮಾಜಿಕ ಕಾರ್ಯಕರ್ತ ಹರೀಶ್ ಕೆ.ಎಸ್, ಆಪ್ತ ಸಮಾಲೋಚಕ ರುಕ್ಮಿಣಿ, ಪ್ರವಾಸೋದ್ಯಮ ಇಲಾಖೆಯ ಇಮ್ರಾನ್‍ವುಲ್ಲಾ ಖಾನ್ ಸೇರಿದಂತೆ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours