ಪರಿಶಿಷ್ಟರ ಅಭಿವೃದ್ಧಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸೂಚನೆ
Tumkurnews
ತುಮಕೂರು; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಶ್ರೇಯೋಭಿವೃದ್ಧಿಗೆ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಗಳ ಮೂಲಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ 2022-23ನೇ ಸಾಲಿನ ರಾಜ್ಯವಲಯ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಗಳಲ್ಲಿ ಜುಲೈ-2022ರ ಅಂತ್ಯಕ್ಕೆ ಸಾಧಿಸಲಾದ ಪ್ರಗತಿಯ ಬಗ್ಗೆ ನಡೆದ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ, ವರ್ಗದ ಜನಾಂಗದವರ ಅಭಿವೃದ್ಧಿಗಾಗಿ ಸರ್ಕಾರವು ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಇಲಾಖೆಗಳಿಗೆ ಅನುದಾನವನ್ನು ಬಿಡುಗಡೆ ಮಾಡಿದ್ದು ಅಧಿಕಾರಿಗಳು ಪರಿಶಿಷ್ಟರ ಕಲ್ಯಾಣಕ್ಕೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸಿ ಪ್ರಗತಿ ಸಾಧಿಸಬೇಕೆಂದು ತಿಳಿಸಿದರು.
ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಪರಿಶಿಷ್ಟ ಜನಾಂಗದವರು ಇರುವ ಕಡೆ ಮಾಡಬೇಕಲ್ಲದೇ ಅಧಿಕಾರಿಗಳು ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಎಚ್ಚರವಹಿಸಬೇಕು. ಅರ್ಹರನ್ನು ಗುರುತಿಸಿ ಯೋಜನೆಗಳನ್ನು ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲಾಖಾವಾರು ಅಧಿಕಾರಿಗಳು ತಮ್ಮ ಇಲಾಖೆಯಿಂದ ಪರಿಶಿಷ್ಟರ ಕಲ್ಯಾಣಕ್ಕಾಗಿ ಕೈಗೊಂಡ ಕಾರ್ಯಕ್ರಮಗಳು, ಒದಗಿಸಲಾದ ಅನುದಾನ, ಸಾಧಿಸಲಾದ ಪ್ರಗತಿಯ ಕುರಿತು ಸಭೆಗೆ ಮಾಹಿತಿ ನೀಡಿದರು.
ರೇಷ್ಮೆ ಇಲಾಖೆಯಿಂದ ರೇಷ್ಮೆ ಹುಳು ಸಾಕಾಣಿಕೆ ಮನೆ, ಹುಳು ಸಾಕಾಣಿಕೆ ಸಲಕರಣೆಗಳು ಮೌಂಟಿಂಗ್ ಹಾಲ್, ಚಾಕಿ ಸಾಕಾಣಿಕೆ ಕೇಂದ್ರ, ಸೋಂಕು ನಿವಾರಕ, ಇಟಾಲಿಯನ್ ಸುಧಾರಿತ ಕಾಟೇಜ್ ಯಂತ್ರಗಳನ್ನು ಎಸ್.ಸಿ ಎಸ್.ಪಿ, ಟಿ.ಎಸ್.ಪಿ ಕಾರ್ಯಕ್ರಮಗಳ ಮೂಲಕ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣ ಸಭೆಗೆ ಮಾಹಿತಿ ನೀಡಿದರು.
ಪಶುಸಂಗೋಪನೆ ಇಲಾಖೆಯಡಿ ಪರಿಶಿಷ್ಟ ಜಾತಿ, ವರ್ಗದ ಅರ್ಹ ಫಲಾನುಭವಿಗಳಿಗೆ ನೆಲದ ಹಾಸುಗಳನ್ನು ವಿತರಿಸಲಾಗುವುದೆಂದು ಇಲಾಖಾಧಿಕಾರಿ ಸಭೆಗೆ ತಿಳಿಸಿದರು.
ಅರಣ್ಯ ಇಲಾಖೆಯಿಂದ ಕಾಡಂಚಿನ ಪರಿಶಿಷ್ಟರ ಮನೆಗಳಿಗೆ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಗಳಡಿ ಪ್ರಸಕ್ತ ಸಾಲಿನಲ್ಲಿ ಒಬ್ಬ ಫಲಾನುಭವಿಗಳಿಗೆ ಎರಡು ರೀಫಿಲ್ಲಿಂಗ್ ಸಿಲಿಂಡರ್ ಉಚಿತವಾಗಿ ನೀಡಲಾಗಿದೆಯೆಂದು ಅರಣ್ಯಾಧಿಕಾರಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ ಸಾಂಸ್ಕೃತಿಕ ಸಂಘ- ಸಂಸ್ಥೆಗಳಿಗೆ ಧನಸಹಾಯ, ವಾದ್ಯಪರಿಕರ, ವೇಷಭೂಷಣ ಖರೀದಿಗೆ ಧನಸಹಾಯ ಒದಗಿಸಲಾಗಿದೆ. ಜಿಲ್ಲೆಯ ವಿವಿಧೆಡೆ ಡಾ.ಅಂಬೇಡ್ಕರ್ ಓದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಸುರೇಶ್ ಕುಮಾರ್ ಸಭೆಗೆ ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಕರ್ನಾಟಕ ದರ್ಶನ ಕಾರ್ಯಕ್ರಮದಡಿ 8ನೇ ತರಗತಿ ಓದುತ್ತಿರುವ ಸರ್ಕಾರಿ ಶಾಲೆಗಳ ಮತ್ತು ಕ್ರೈಸ್ ವಸತಿ ಶಾಲೆಗಳ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಶಿಕ್ಷಕಿಯ ಮನೆ ಕೆಲಸಕ್ಕೆ ವಸತಿ ಶಾಲೆ ವಿದ್ಯಾರ್ಥಿನಿಯರ ಬಳಕೆ; ಕಣ್ಮುಚ್ಚಿ ಕುಳಿತ ಇಲಾಖೆ
ಸಭೆಯಲ್ಲಿ ಜಿಪಂ ಸಿಇಒ ಡಾ. ಕೆ.ವಿದ್ಯಾಕುಮಾರಿ, ಪಾಲಿಕೆ ಆಯುಕ್ತೆ ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿ ಡಾ. ಶ್ರೀಧರ್, ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನ, ತೋಟಗಾರಿಕೆ ಉಪನಿರ್ದೇಶಕ ರಘು, ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಕಾರ್ಮಿಕಾಧಿಕಾರಿ ಡಾ.ರಮೇಶ್ ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
 
                                             
                                             
                                             
                                             
                                             
                                             
                                             
                                             
                                            
 
                                     
                                     
                                     
                                    


 
                                     
                                     
                                    
+ There are no comments
Add yours