ಕುಷ್ಠರೋಗ ನಿರ್ಮೂಲನೆಗೆ ಜಾಗೃತಿ ಚಟುವಟಿಕೆಗಳು ಅತ್ಯಗತ್ಯ: ಡಾ: ಪ್ರದೀಪ್ತ ಕುಮಾರ್ ನಾಯಕ್
Tumkurnews
ತುಮಕೂರು: ಕುಷ್ಠರೋಗ ನಿಯಂತ್ರಣ ಹಾಗೂ ನಿರ್ಮೂಲನೆಗಾಗಿ ಆರೋಗ್ಯ ಇಲಾಖೆ ಹಲವು ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವಿಶೇಷ ಮೇಲ್ವಿಚಾರಕ ಡಾ: ಪ್ರದೀಪ್ತ ಕುಮಾರ್ ನಾಯಕ್ ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಕುಷ್ಠರೋಗ ಪತ್ತೆಯಾದ ಕೂಡಲೇ ಮಲ್ಟಿ ಡ್ರಗ್ ಥೆರಪಿಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಜನರು ಹೆದರದೆ ತಕ್ಷಣ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ, ಕುಷ್ಠರೋಗದ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖವಾಗುತ್ತದೆ ಎಂದು ಜನರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮ ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತರಿಂದ ಮನೆಮನೆಗೆ ಭೇಟಿ, ಶಾಲಾ ಮಕ್ಕಳಿಗೆ ಜಾಗೃತಿ, ಗ್ರಾಮ ಸಭೆಗಳಲ್ಲಿ ಬೋಧನೆ ಹಾಗೂ ಸಮಾಜದಲ್ಲಿ ಮೂಢನಂಬಿಕೆ ನಿವಾರಣೆಗೆ ವಿಶೇಷ ಅಭಿಯಾನಗಳನ್ನು ನಡೆಸಿದರೆ ಜಿಲ್ಲೆಯಲ್ಲಿ ಕುಷ್ಠರೋಗ ನಿವಾರಣೆಯಾಗುತ್ತದೆ. ಕುಷ್ಠರೋಗ ಪೀಡಿತರನ್ನು ತಿರಸ್ಕಾರದ ಭಾವನೆಯಲ್ಲಿ ನೋಡದೆ ಸಮಾಜದ ಮುಖ್ಯವಾಹಿನಿಗೆ ತರುವುದು ಪ್ರತಿಯೊಬ್ಬರ ಜವಾಬ್ದಾರಿ. ಕುಷ್ಠರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.
ಕುಷ್ಠರೋಗದಿಂದ ಗುಣಮುಖವಾಗಿರುವ ಮತ್ತು ಬಳಲುತ್ತಿರುವ ರೋಗಿಗಳಿಗೆ ಸರ್ಕಾರದಿಂದ ಬರುವ ವಿವಿಧ ಕಲ್ಯಾಣ ಯೋಜನೆಗಳು ರೋಗಿಗಳಿಗೆ ಸರಿಯಾದ ರೀತಿಯಲ್ಲಿ ತಲುಪಬೇಕು. ಸರ್ಕಾರಿ ವಿವಿಧ ಯೋಜನೆಗಳ ಸವಲತ್ತುಗಳನ್ನು ಪ್ರತಿಯೊಬ್ಬ ರೋಗಿಯು ಪಡೆಯುವಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಆರೋಗ್ಯ ಅಭಿಯಾನ ಕಾರ್ಯಕ್ರಮವನ್ನು ಸಿಇಒ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಮಟ್ಟದಲ್ಲಿ ವಿಶೇಷ ಆರೋಗ್ಯ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಕುಷ್ಠರೋಗ ಸೇರಿದಂತೆ 10 ವಿಭಿನ್ನ ರೋಗಗಳ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಈಶ್ವರಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಅಸ್ಗರ್ ಬೇಗ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
+ There are no comments
Add yours