RSS, ಬಜರಂಗದಳ, VHP ಬಗ್ಗೆ ಅಲ್ಪಸಂಖ್ಯಾತರು ಎಚ್ಚರಿಕೆಯಿಂದ ಇರಬೇಕು; ಸಿದ್ದರಾಮಯ್ಯ

1 min read

 

Tumkurnews
ತುಮಕೂರು; ದೇವರು, ಧರ್ಮ, ಆಹಾರದ ವಿಚಾರದಲ್ಲಿ ಜನರ ನಡುವೆ ವಿಷ ಬೀಜ ಬಿತ್ತುತ್ತಿರುವ ಆರ್.ಎಸ್.ಎಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಬಗ್ಗೆ ಅಲ್ಪಸಂಖ್ಯಾತ ಸಮುದಾಯ ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ನಗರದ ಗಾಜಿನಮನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಭಾನುವಾರ ನಡೆದ ಜಿಲ್ಲಾ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮ ಸಂವಿಧಾನದಲ್ಲಿ ಧರ್ಮ ನಿರಪೇಕ್ಷತೆಯನ್ನು ಪ್ರತಿಪಾದಿಸಲಾಗಿದೆ. ನಾವು ಆಚರಿಸುವ ಧರ್ಮದ ಬಗ್ಗೆ ಗೌರವದಿಂದ ಇರುವುದರ ಜೊತೆಗೆ, ಇತರೆ ಧರ್ಮಗಳ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು. ಅದೇ ನಿಜವಾದ ಭಾರತ ಎಂದರು.
ನಾನು ಯಾವ ಧರ್ಮದಲ್ಲಿ ಹುಟ್ಟಿದ್ದೇನೆ ಎಂಬುದು ಮುಖ್ಯವಲ್ಲ. ನಾವ್ಯಾರು ಇಂತಹ ಧರ್ಮ, ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿದವರಲ್ಲ. ಆದರೆ ನಾವೆಲ್ಲರೂ ಭಾರತೀಯರು ಎಂಬುದನ್ನು ಮರೆಯಬಾರದು. ಈ ದೇಶ ಒಂದು ಧರ್ಮಕ್ಕೆ ಸೇರಿದಲ್ಲ, ಎಲ್ಲರಿಗೂ ಸಮಾನ ಅವಕಾಶವಿದೆ. ಭಾರತದಲ್ಲಿರುವ ಎಲ್ಲಾ ಧರ್ಮಗಳ ಜನರ ನಡುವೆ ಸಹಬಾಳ್ವೆ ಆಗತ್ಯ, ಇದನ್ನೇ ನಮ್ಮ ಸಂವಿಧಾನವೂ ಪ್ರತಿಪಾದಿಸುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಹಲವು ಭಾವನಾತ್ಮಕ ವಿಚಾರಗಳ ಮೂಲಕ ಸಮಾಜವನ್ನು ಒಡೆಯುವ, ಮನುಷ್ಯರ ನಡುವೆ ಗೋಡೆಕಟ್ಟುವ ಕೆಲಸವನ್ನು ಸಂಘ ಪರಿವಾರದ ಮುಖಂಡರು ಮಾಡುತ್ತಿದ್ದಾರೆ. ಸಂವಿಧಾನದ ಪರವಾಗಿರುವ ನಾವೆಲ್ಲರೂ ದೇಶ ಒಡೆಯುವವರ ಕೈಗೆ ಅಧಿಕಾರ ಸಿಗದಂತೆ ನೋಡಿಕೊಳ್ಳಬೇಕಿದೆ. ರಾಜ್ಯದಲ್ಲಿ 2008ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ 1964 ರಿಂದಲೂ ಜಾರಿಯಲ್ಲಿದ್ದ ಗೋ ಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಒಂದು ವರ್ಗವನ್ನು ಟಾರ್ಗೆಟ್ ಮಾಡಿದರು. ಈಗ ಮತಾಂತರ ನಿಷೇಧ ಕಾಯ್ದೆ ಮೂಲಕ ಮತ್ತಷ್ಟು ಕಿರುಕುಳ ನೀಡುತ್ತಿದೆ. ಹುಸಿ ಜಾತ್ಯಾತೀತತೆ ಪ್ರದರ್ಶಿಸುತ್ತಿರುವ ಜೆಡಿಎಸ್ ಈ ಎರಡು ಮಹತ್ವ ಕಾಯ್ದೆಗಳ ಚರ್ಚೆಯ ವೇಳೆ ಸಭಾತ್ಯಾಗ ಮಾಡಿ, ಕಾಯ್ದೆ ಪಾಸಾಗುವಂತೆ ಮಾಡಿ, ಈಗ ನಾಟಕವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಜಾರಿಗೆ ತಂದ ಶಾದಿ ಭಾಗ್ಯ, ಟಿಪ್ಪು ಜಯಂತಿಗಳು ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಮಾಡಿದ ಕಾರ್ಯಕ್ರಮಗಳಲ್ಲ. ಬಿಜೆಪಿ, ಆರ್.ಎಸ್.ಎಸ್ ನವರು ದೂರುವಂತೆ ಟಿಪ್ಪು ಮತಾಂಧನಾಗಿದ್ದರೆ ಶ್ರೀರಂಗಪಟ್ಟಣ ಹಾಗೂ ಇತರೆ ಕಡೆಗಳಲ್ಲಿ ಅಷ್ಟೊಂದು ಹಿಂದೂ ದೇವಾಲಯಗಳು, ಅತನ ಆಸ್ಥಾನದಲ್ಲಿ ಹಿಂದೂ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಿತ್ತೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

About The Author

You May Also Like

More From Author

+ There are no comments

Add yours