ಜು.13ರಂದು : ತುಮಕೂರು ವಿವಿಯ ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ವಿವಿಧ ಕಟ್ಟಡಗಳ ಲೋಕಾರ್ಪಣೆ ಹಾಗೂ ಭೂಮಿಪೂಜೆ
Tumkur news
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಬಿದರಕಟ್ಟೆಯಲ್ಲಿರುವ ಜ್ಞಾನಸಿರಿ ಕ್ಯಾಂಪಸ್ ಆವರಣದಲ್ಲಿ ಜುಲೈ 13 ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ವಿವಿಧ ನೂತನ ಕಟ್ಟಡಗಳ ಲೋಕಾರ್ಪಣೆ ಹಾಗೂ ಹೊಸ ಕಾಮಗಾರಿಗಳಿಗೆ ಭೂಮಿಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯಪಾಲರು ಹಾಗೂ ಕುಲಾಧಿಪತಿ ಥಾವರ್‌ಚಂದ್ ಗೆಹೋಟ್ ಅವರು ನೂತನವಾಗಿ ನಿರ್ಮಿಸಲಾಗಿರುವ ಕೇಂದ್ರ ಗ್ರಂಥಾಲಯ ಕಟ್ಟಡ ಮತ್ತು ಕೇಂದ್ರೀಕೃತ ಅಡುಗೆ ಮನೆ ಕಟ್ಟಡಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿ ಹಾಗೂ ಕಂದಾಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ಸಚಿವ ಡಾ. ಜಿ. ಪರಮೇಶ್ವರ ಅವರು ಒಳಾಂಗಣ ಕ್ರೀಡಾಂಗಣವನ್ನು ಲೋಕಾರ್ಪಣೆಗೊಳಿಸಿ, ನೂತನ ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವರು ಹಾಗೂ ತುಮಕೂರು ಸಂಸದ ವಿ. ಸೋಮಣ್ಣ ಅವರು ಕೇಂದ್ರ ಸರ್ಕಾರದ ‘ಪಿ.ಎಂ ಉಷಾ’ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಶೈಕ್ಷಣಿಕ ಭವನ-02 ರ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಸುರೇಶ್ ಗೌಡ ವಹಿಸಲಿದ್ದಾರೆ. ಗೌರವ ಉಪಸ್ಥಿತರಾಗಿ ದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಹಾಗೂ ಸಿರಾ ಶಾಸಕ ಟಿ. ಬಿ. ಜಯಚಂದ್ರ ಮತ್ತು ಕ.ರಾ.ರ.ಸಾ.ನಿ. ಅಧ್ಯಕ್ಷರು ಹಾಗೂ ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಅವರು ಭಾಗವಹಿಸಲಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಉಪಸ್ಥಿತರಿರಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್, ತುಮಕೂರು ಜಿಲ್ಲೆಯ ಎಲ್ಲಾ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಪೊಲೀಸ್ ಅಧೀಕ್ಷಕ ಅಶೋಕ್ ಕೆ. ವಿ. ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕುಲಸಚಿವೆ ನಾಹಿದಾ ಜಮ್ ಜಮ್ ಅವರು ತಿಳಿಸಿದ್ದಾರೆ.
