ಮೂರು ಬಾರಿ ಕೈ ತಪ್ಪಿದ ಮುಖ್ಯಮಂತ್ರಿ ಖುರ್ಚಿ; ಪರಮೇಶ್ವರ್ ಕಣ್ಣೀರು
ತಮ್ಮ 40 ವರ್ಷಗಳ ರಾಜಕೀಯ ಜೀವನದ ಏಳುಬೀಳನ್ನು ನೆನೆದು ಬಾವುಕರಾದ ಡಾ.ಜಿ ಪರಮೇಶ್ವರ್
Tumkur news
ತುಮಕೂರು: ತಮ್ಮ ರಾಜಕೀಯ ಜೀವನ ನಡೆದು ಬಂದ ಹಾದಿ ಹಾಗೂ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದ್ದನ್ನು ನೆನೆದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಕಣ್ಣೀರು ಹಾಕಿದ್ದಾರೆ.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಅವರು ನಾನು ರಾಜಕೀಯಕ್ಕೆ ಬರುವ ಕಲ್ಪನೆ ಕೂಡ ಇರಲಿಲ್ಲ. ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ನಮ್ಮ ಶಿಕ್ಷಣ ಸಂಸ್ಥೆಗೆ ಬಂದಿದ್ದರು. ಅವರು ಕರೆ ಕೊಟ್ಟಿದ್ದರಿಂದ ನಾನು ರಾಜಕೀಯಕ್ಕೆ ಬಂದೆ. ನಮ್ಮ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಪ ಮುಖ್ಯಮಂತ್ರಿ ಸ್ಥಾನದವರೆಗೂ ಅವಕಾಶ ನೀಡಿದೆ. 2013ರಲ್ಲಿ ಸೋಲದೇ ಇದ್ದಿದ್ದರೆ ನಾನೇ ಮುಖ್ಯಮಂತ್ರಿ ಆಗಿರುತ್ತಿದ್ದೆ. ನಾನು ಸೋಲದೇ ಇದ್ದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನನ್ನ ದುರದೃಷ್ಟ ನಾನು ಸೋತಿದ್ದರಿಂದ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿತು. 2018ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೂಡ ನನಗೆ ಮುಖ್ಯಮಂತ್ರಿ ಆಗುವ ನಿರೀಕ್ಷೆ ಇತ್ತು, ಆದರೆ ಆಗ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರು. ನಾನು ಉಪಮುಖ್ಯಮಂತ್ರಿ ಆದೆ. ಈ ಬಾರಿಯೂ ನನಗೆ ಮುಖ್ಯಮಂತ್ರಿ ಆಗುವ ನಿರೀಕ್ಷೆಯಿಂದ ಪ್ರಯತ್ನ ಮಾಡಿದ್ದೆ. ಆದರೆ ಪಕ್ಷ ನನಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟಿದೆ ಎಂದು ತಮ್ಮ ರಾಜಕೀಯ ಏಳುಬೀಳುಗಳನ್ನು ಸ್ಮರಿಸಿ ಬಾವುಕರಾದರು. ಪರಮೇಶ್ವರ್ ಕಣ್ಣೀರು ಹಾಕಿದ್ದನು ಕಂಡು ಸಭೆಯಲ್ಲಿದ್ದ ಸಿಬ್ಬಂದಿ ಕೂಡ ಕಣ್ಣೀರಾದರು. ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದ್ದನ್ನು ಈ ಹಿಂದೆಯೂ ಹಲವು ಬಾರಿ ಪರಮೇಶ್ವರ್ ಹಲವು ಸಭೆಗಳಲ್ಲಿ ಮಾತನಾಡಿದ್ದರು. ಸದ್ಯ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕರೂ ಪರಮೇಶ್ವರ್ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದ ನೋವಿನಲ್ಲಿರುವುದು ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ. ಪರಮೇಶ್ವರ್ ಬೇಸರ ಮುಂದೆ ಯಾವೆಲ್ಲ ಬೆಳವಣಿಗೆಗೆ ಕಾರಣವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
