ಡಿಕೆ ಸಂಪುಟದಲ್ಲಿ ತುಮಕೂರಿನ ಯಾರಿಗೆಲ್ಲ ಮಂತ್ರಿ ಸ್ಥಾನ?
ರಂಗನಾಥ್, ಶ್ರೀನಿವಾಸ್’ಗೆ ಸಚಿವ ಸ್ಥಾನ? ರಫೀಕ್ ಅಹಮದ್, ಗೌರಿಶಂಕರ್’ಗೆ ಮಣೆ; ರಾಜಣ್ಣಗೆ ಹಿನ್ನಡೆ; ಪರಂಗಿದೆಯೇ ಜಾಕ್ ಪಾಟ್?
-ಅಶೋಕ್ ಆರ್.ಪಿ ತುಮಕೂರು:
ಡಿ.ಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಜಿಲ್ಲೆಯ ಯಾರಿಗೆಲ್ಲಾ ಮಂತ್ರಿ ಪದವಿ ಸಿಗುತ್ತದೆ? ಹೀಗೊಂದು ಚರ್ಚೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಉತ್ತುಂಗದಲ್ಲಿರುವ ಹೊತ್ತಿನಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುವ ಕಲ್ಪತರು ನಾಡಿನ ಜನರ ನಿರೀಕ್ಷೆಯೂ ಹೆಚ್ಚಾಗಿದೆ.
ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆದದ್ದೇ ಆದರೆ ಕುಣಿಗಲ್ ಶಾಸಕ ಡಾ.ಎಚ್.ಡಿ ರಂಗನಾಥ್ ಸಚಿವರಾಗುವುದು ಬಹುತೇಕ ಖಚಿತ ಎಂದು ಕುಣಿಗಲ್ ಕಾಂಗ್ರೆಸ್ ಕಾರ್ಯಕರ್ತರು ಅಚಲವಾದ ವಿಶ್ವಾಸದಲ್ಲಿದ್ದಾರೆ. ಏಕೆಂದರೆ ಡಾ.ಎಚ್.ಡಿ ರಂಗನಾಥ್ ಅವರು ಡಿ.ಕೆ ಶಿವಕುಮಾರ್ ಅವರಿಗೆ ಸಂಬಂಧಿಕರು ಹೌದು, ಇದು ಎಚ್.ಡಿ ರಂಗನಾಥ್ ಕೈ ಹಿಡಿಯುವ ಸಾಧ್ಯತೆ ಇದೆ.
ರಫೀಕ್ ಅಹಮದ್’ಗೆ ಅಧಿಕಾರ: ಡಿ.ಕೆ ಶಿವಕುಮಾರ್’ರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ತುಮಕೂರು ನಗರ ಮಾಜಿ ಶಾಸಕ ಡಾ.ಎಸ್ ರಫೀಕ್ ಅಹಮದ್ ಅವರಿಗೆ ಡಿಕೆ ಸರ್ಕಾರದಲ್ಲಿ ನಿಗಮ ಮಂಡಳಿಗಳ ಪೈಕಿ ಪ್ರಮುಖವಾದ ಹುದ್ದೆ ದೊರೆಯುವ ನಿರೀಕ್ಷೆ ಇದೆ. ಕಳೆದ ಚುನಾವಣೆಯಲ್ಲಿ ಡಾ.ಎಸ್ ರಫೀಕ್ ಅಹಮದ್’ಗೆ ಟಿಕೆಟ್ ಕೈ ತಪ್ಪಿಸಲಾಗಿತ್ತು, ಹಾಗಾಗಿಯೇ ಅವರ ಬೆಂಬಲಿಗರನ್ನು ಸಮಾಧಾನ ಪಡಿಸುವ ಉದ್ದೇಶದಿಂದ ರಫೀಕ್ ಅಹಮದ್’ಗೆ ಉತ್ತಮ ಸ್ಥಾನ ಮಾನ ದೊರೆಯುವ ಸಾಧ್ಯತೆ ಇದೆ.
ಶ್ರೀನಿವಾಸ್’ಗೆ ಅದೃಷ್ಟವಿದೆಯೇ?: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಅವರು ಡಿಕೆಶಿ ಬಣದೊಂದಿಗೆ ಗುರುತಿಸಿಕೊಂಡವರು. ನೇರ ಮಾತಿನ ವ್ಯಕ್ತಿತ್ವದ ಶ್ರೀನಿವಾಸ್, ಆಗಾಗ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಬಗ್ಗೆ ಹಾಗೂ ಸಿದ್ದರಾಮಯ್ಯ ಸರ್ಕಾರದ ಕೆಲವು ನಿರ್ಧಾರಗಳ ವಿರುದ್ಧ ಮಾತನಾಡುವ ಮೂಲಕ ಡಿ.ಕೆ ಶಿವಕುಮಾರ್ ಪರ ನಿಲ್ಲುತ್ತಿದ್ದರು. ಹಾಗೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿರುವುದು ಕೂಡ ಇವರನ್ನು ಸಚಿವ ಸ್ಥಾನದತ್ತ ಕೊಂಡೊಯ್ಯುವ ನಿರೀಕ್ಷೆಯಿದೆ. ಇವರಂತೆಯೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿ.ಸಿ ಗೌರಿಶಂಕರ್ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಒಕ್ಕಲಿಗ ಕೋಟಾ ಅಥವಾ ಜೆಡಿಎಸ್ ತೊರೆದು ಬಂದಿರುವ ಕಾರಣಕ್ಕಾಗಿ ಗೌರಿ ಶಂಕರ್’ಗೆ ನಿಗಮ ಮಂಡಳಿಯ ಸ್ಥಾನ ದೊರೆಯುವ ಸಾಧ್ಯತೆ ಇದ್ದು, ಕಾದು ನೋಡಬೇಕಿದೆ
ಕೆ.ಎನ್ ರಾಜಣ್ಣಗೆ ಹಿನ್ನಡೆ: ಜಿಲ್ಲೆಯ ಪ್ರಮುಖ ಅಹಿಂದ ನಾಯಕ ಹಾಗೂ ಮಧುಗಿರಿ ಶಾಸಕ ಕೆ.ಎನ್ ರಾಜಣ್ಣಗೆ ಈ ವಿಚಾರದಲ್ಲಿ ತೀವ್ರ ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬಾರದು ಎಂದು ರಾಜಣ್ಣ ಪಟ್ಟು ಹಿಡಿದಿದ್ದರು. ಅಂತಹ ಸಂದರ್ಭ ಬಂದರೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮುಖ್ಯಮಂತ್ರಿ ಹುದ್ದೆಗೇರಲಿ ಎಂದು ಬಹಿರಂಗ ಹೇಳಿಕೆ ನೀಡಿ ಬೆಂಬಲಿಸಿದ್ದರು. ಈ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ರಾಜಣ್ಣಗೆ ಖಾತೆ ನಿರೀಕ್ಷಿಸುವುದು ಅಸಾಧ್ಯ.
ಪರಮೇಶ್ವರ್ ಮುಂದುರಿಕೆ?: ಕೊರಟಗೆರೆ ಶಾಸಕ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಖಾತೆಯಲ್ಲಿ ಬದಲಾವಣೆ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ಮುಖ್ಯಮಂತ್ರಿ ರೇಸ್’ನಲ್ಲಿದ್ದ ಅವರಿಗೆ ಅವಕಾಶ ತಪ್ಪಿದ ಕಾರಣ ಗೃಹ ಖಾತೆ ಬಿಟ್ಟು ಬೇರೆ ಖಾತೆಯನ್ನು ಅವರು ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ. ಆದಾಗ್ಯೂ ಕೊನೆಯ ಕ್ಷಣದಲ್ಲಿ ಪರಮೇಶ್ವರ್ ಮುಖ್ಯಮಂತ್ರಿ ಆದರೂ ಅಚ್ಚರಿ ಇಲ್ಲ ಎನ್ನುತ್ತಿದ್ದಾರೆ ಅವರ ಬೆಂಬಲಿಗರು.
ಹಿರಿತನಕ್ಕೆ ಸಿಗುತ್ತಾ ಮನ್ನಣೆ: ಶಿರಾ ಶಾಸಕ ಟಿ.ಬಿ ಜಯಚಂದ್ರ ಹಿರಿಯರಾದ ಕಾರಣ ಅವರಿಗೂ ಮಂತ್ರಿಯಾಗುವ ಅವಕಾಶ ಇದೆ, ಜೊತೆಗೆ ತಿಪಟೂರು ಶಾಸಕ ಷಡಕ್ಷರಿ ಕೂಡ ಮಂತ್ರಿಗಿರಿ ರೇಸ್’ನಲ್ಲಿದ್ದಾರೆ. ಒಟ್ಟಾರೆಯಾಗಿ ರಾಜ್ಯ ರಾಜಕೀಯ ಬೆಳವಣಿಗೆಗಳು ಜಿಲ್ಲೆಯಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.
