ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ತುಮಕೂರು! ಗಿನ್ನಿಸ್ ರೆಕಾರ್ಡ್! ಯಾವ ಸಾಧನೆಗಾಗಿ? ಇಲ್ಲಿದೆ ಮಾಹಿತಿ
Tumkur news
ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೇ 20ಕ್ಕೆ ಮೂರು ವರ್ಷಗಳು ತುಂಬುತ್ತದೆ. ಈ ನೆನಪಿಗಾಗಿ ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಜನತೆಗೆ ಸಮರ್ಪಣೆ ಮಾಡುವ ವಿಶೇಷ ಕಾರ್ಯಕ್ರಮ ಸಾಧನೆಯ ಸೇವೆಗಳ ಸಮರ್ಪಣೆಯನ್ನು ಮೇ 19ರಂದು ಮಂಗಳವಾರ ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಕಾರ್ಯಕ್ರಮ ನಡೆಯಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿನ ಪೂರ್ವ ಸಿದ್ಧತೆ ಪರಿಶೀಲಿಸಿದ ನಂತರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ನಡೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನನ್ನ ಅಧ್ಯಕ್ಷತೆಯಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಿತ್ತು. ಐದು ಗ್ಯಾರಂಟಿಗಳೂ ಸೇರಿದಂತೆ ಆದ್ಯತಾ ವಿಷಯಗಳನ್ನು ರಾಜ್ಯದ ಜನತೆಗೆ ಆಶ್ವಾಸನೆ ನೀಡಿ ಚುನಾವಣೆ ಗೆದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದೆವು. ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಐದೂ ಗ್ಯಾರಂಟಿಗಳನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಲ್ಲದೆ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗಿದೆ. ಈ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದುಕೊಂಡಿದೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳು ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ರಾಜ್ಯದ ಜನತೆಗೆ ಅರ್ಪಿಸಲಾಗಿದೆ. ಈ ಸುಸಂದರ್ಭದಲ್ಲಿ ಉತ್ತರದಾಯಿತ್ವವಾಗಿ ತುಮಕೂರು ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಆಗಿರುವ ಅಭೂತಪೂರ್ವ ಅಭಿವೃದ್ಧಿ ಕಾರ್ಯಕ್ರಮವನ್ನು ಈ ಸಮಾವೇಶದ ಮೂಲಕ ಫಲಾನುಭವಿಗಳಿಗೆ ಹಕ್ಕುಪತ್ರ ಸವಲತ್ತುಗಳನ್ನು ನೀಡುವ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಈ ಸಾಧನೆಯಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ಈ ಸಾಧನೆಗಾಗಿ ಗಿನ್ನಿಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ದಾಖಲೆ ಸೇರಿದ್ದು, ನಾಳಿನ ಕಾರ್ಯಕ್ರಮದಲ್ಲಿ ಈ ಸಾಧನೆಯ ಪ್ರಶಸ್ತಿಯನ್ನು ಪ್ರಧಾನ ಮಾಡಲು ಇಂಗ್ಲೇಂಡ್‌ನಿಂದ ಗಿನ್ನಿಸ್ ಸಂಸ್ಥೆಯವರು ಆಗಮಿಸಲಿದ್ದಾರೆ ಎಂದು ವಿವರಿಸಿದರು.
ತುಮಕೂರು ಜಿಲ್ಲೆಯ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳಡಿ ಇ-ಪೌತಿ ಆಂದೋಲನಾ – 1,06,000, ದರಖಾಸ್ತು ಪೋಡಿ – 24,256, ಕಂದಾಯ ಗ್ರಾಮ ಹಕ್ಕು ಪತ್ರ – 20,666 ಮತ್ತು ಪೋಡಿ ಮುಕ್ತ ಅಭಿಯಾನ – 1570 ಸೇರಿದಂತೆ ಒಟ್ಟು 1,52,497 ಫಲಾನುಭವಿಗಳಿಗೆ ಹಕ್ಕು ಪತ್ರ, ಆದೇಶ ಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಅಲ್ಲದೆ, ರಾಜ್ಯದಲ್ಲಿಯೇ ದೊಡ್ಡ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಒಟ್ಟು 600 ಹುದ್ದೆಗಳ ನೇಮಕಾತಿ ಆದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸುಮಾರು 2ಲಕ್ಷಕ್ಕೂ ಹೆಚ್ಚಿನ ಜನ ಭಾಗಿ; ಜಿಲ್ಲೆಯಾದ್ಯಂತ ಸುಮಾರು 1,52,000ಕ್ಕೂ ಹೆಚ್ಚು ಫಲಾನುಭವಿಗಳೇ ಇದ್ದು, ಒಟ್ಟು ಸುಮಾರು 2ಲಕ್ಷಕ್ಕೂ ಹೆಚ್ಚಿನ ಜನರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ಸಚಿವರಿಗೆ, ಶಾಸಕರಿಗೆ ಖುದ್ದು ಆಹ್ವಾನ ನೀಡಲಾಗಿದೆ. ಅಲ್ಲದೆ, ಪ್ರತಿಪಕ್ಷ ನಾಯಕರೂ, ಸಂಸದರೂ, ನಿಗಮ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
